ಮಮತಾರ ರಾಷ್ಟ್ರಪತಿ ಭವನ ಜಾಥಾಕ್ಕೆ ಶಿವಸೇನೆ ಸಾಥ್
ಹೊಸದಿಲ್ಲಿ, ನ. 16: ಅಧಿಕ ಮೌಲ್ಯದ ನೋಟುಗಳನ್ನು ಅಮಾನ್ಯಗೊಳಿಸಿದ ಬಗ್ಗೆ ಬಿಜೆಪಿ ಮತ್ತು ಎನ್‌ಡಿಎ ನಡುವೆ ತಾರಕಕ್ಕೇರಿರುವ ಭಿನ್ನ ಅಭಿಪ್ರಾಯ ಬಹಿರಂಗಗೊಂಡಿದೆ ಎಂದು ವರದಿಯಾಗಿದೆ. ಬಿಜೆಪಿ ಮಿತ್ರ ಪಕ್ಷ ಶಿವಸೇನೆ, ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಬುಧವಾರ ರಾಷ್ಟ್ರಪತಿಭವನಕ್ಕೆ ನಡೆಸಲಿರುವ ಮಾರ್ಚ್‌ನಲ್ಲಿ ಭಾಗವಹಿಸಲಿದೆ. ನೋಟು ಅಮಾನ್ಯಗೊಳಿಸಿದ ತೀರ್ಮಾನವನ್ನು ವಾಪಸು ಪಡೆಯುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶ ನೀಡಬೇಕೆಂದು ಈ ಪ್ರತಿಭಟನಾ ಜಾಥಾದ ಮೂಲಕ ತೃಣಮೂಲ ಕಾಂಗ್ರೆಸ್ ಆಗ್ರಹಿಸಲಿದೆ.
ಶಿವಸೇನೆ ಮತ್ತುಇತರ ಮಿತ್ರಪಕ್ಷಗಳಾದ ಶಿರೋಮಣಿ ಅಕಾಲಿದಳ ಹೆಚ್ಚುಮೌಲ್ಯದ ನೋಟುಗಳನ್ನು ವಾಪಸು ಪಡೆದ ಕ್ರಮಕ್ಕಾಗಿ ಕೇಂದ್ರವನ್ನು ಕಳೆದ ದಿವಸ ಟೀಕಿಸಿತ್ತು. ಆದರೆ, ಎನ್‌ಡಿಎ ನಾಯಕರ ಸಭೆಯಲ್ಲಿ ಈ ಎರಡು ಪಕ್ಷಗಳನ್ನು ಸಮಾಧಾನಿಸಲಾಗಿದೆ ಎಂದು ನಂತರ ವರದಿಯಾಗಿತ್ತು. ಆದರೆ ಅವೆಲ್ಲ ಕೇವಲ ಬಿಜೆಪಿಯ ಅಪಪ್ರಚಾರವಾಗಿದೆ ಎಂಬುದನ್ನು ಶಿವಸೇನೆಯ ಹೊಸನಿಲುವು ಬಹಿರಂಗಪಡಿಸುತ್ತಿದೆ.
ಇಷ್ಟರಲ್ಲೇ ಶಿವಸೇನೆ ನಾಯಕ ಉದ್ಧವ್ ಠಾಕ್ರೆ, ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಫೋನ್ ಮಾಡಿ ಮಾತಾಡಿದ್ದು, ಆ ನಂತರ ರಾಷ್ಟ್ರಪತಿ ಭವನ ಚಲೊದಲ್ಲಿ ತನ್ನ ಪಕ್ಷ ಭಾಗವಹಿಸುವುದಾಗಿ ಅವರು ಘೋಷಿಸಿದ್ದಾರೆ. ಇದೇ ವೇಳೆ, ಶಿವಸೇನೆ ಇನ್ನೊಬ್ಬ ಪ್ರಮುಖ ನಾಯಕ ಸಂಜಯ್ ರಾವಲ್ಲಿದು ನೋಟಿನ ಸಮಸ್ಯೆ. ಆಡಳಿತಪಕ್ಷ, ಪ್ರತಿಪಕ್ಷ ಎನ್ನುವುದು ಈ ವಿಷಯದಲ್ಲಿ ಮುಖ್ಯವಲ್ಲ. ನಮಗೆ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬುದು ಮಾತ್ರ ಮುಖ್ಯವಿಷಯವಾಗಿದೆ ಎಂದು ಹೇಳಿದ್ದಾರೆ. ನ್ಯಾಶನಲ್ ಕಾನ್ಫರೆನ್ಸ್ ಕೂಡಾ ಈ ಜಾಥಾದಲ್ಲಿ ಭಾಗವಹಿಸುತ್ತಿದೆ. ಆದರೆ ಕಾಂಗ್ರೆಸ್, ಸಿಪಿಎಂ ಜಾಥಾ ತೃಣಮೂಲ ಕಾಂಗ್ರೆಸ್ ಏರ್ಪಡಿಸುವ ಜಾಥದಲ್ಲಿ ಭಾಗವಹಿಸುತ್ತಿಲ್ಲ ಎಂದು ವರದಿ ತಿಳಿಸಿದೆ.