×
Ad

ಬ್ಯಾಂಕುಗಳಲ್ಲಿ ನಿಲ್ಲದ ಗದ್ದಲ,ಅಂತ್ಯ ಕಾಣದ ಸರದಿ ಸಾಲುಗಳು

Update: 2016-11-16 14:48 IST

ಹೊಸದಿಲ್ಲಿ,ನ.16: ಕೇಂದ್ರ ಸರಕಾರವು ಕಳೆದ ವಾರ ದಿಢೀರ್‌ನೆ ನೋಟುಗಳನ್ನು ನಿಷೇಧಿಸಿದ ಬಳಿಕ ದಿನದ ಖರ್ಚಿಗೂ ಪರದಾಡುತ್ತಿರುವ ಜನರು ಹಣಕ್ಕಾಗಿ ಇನ್ನೂ ಬ್ಯಾಂಕುಗಳನ್ನು ಎಡತಾಕುತ್ತಿದ್ದು, ಗೊಂದಲಗಳಿಗೆ ಇನ್ನೂ ತೆರೆ ಬಿದ್ದಿಲ್ಲ. ಉದ್ದನೆಯ ಸರದಿ ಸಾಲುಗಳು ಕೊನೆಗೊಳ್ಳುವ ಲಕ್ಷಣಗಳೂ ಕಾಣುತ್ತಿಲ್ಲ.

ಬುಧವಾರವೂ ಕೆಲವು ಎಟಿಎಂಗಳಲ್ಲಿ ತುಂಬಿದ್ದ ಹಣ ಕೆಲವೇ ಗಂಟೆಗಳಲ್ಲಿ ಖಾಲಿಯಾಗಿದ್ದು, ಹತಾಶ ಜನರು ಬ್ಯಾಂಕುಗಳ ಎದುರು ಹಣಕ್ಕಾಗಿ ಕಾಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿವೆ. ಸಾವಿರಾರು ಎಟಿಎಂ ಕೇಂದ್ರಗಳು ಇನ್ನೂ ಬಾಗಿಲು ಮುಚ್ಚಿಕೊಂಡಿವೆ. ಬ್ಯಾಂಕ್ ಸರ್ವರ್‌ಗಳಲ್ಲಿಯೂ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿರುವುದು ವರದಿಯಾಗಿದ್ದು, ಇದು ಗ್ರಾಹಕರ ಗೋಳನ್ನು ಇನ್ನಷ್ಟು ಹೆಚ್ಚಿಸಿದೆ.

ವಿತ್ತ ಸಚಿವಾಲಯ ಮತ್ತು ಸಂಸತ್ ಭವನಗಳಲ್ಲಿರುವ ಎಟಿಎಂಗಳ ಎದುರೂ ಉದ್ದನೆಯ ಸಾಲುಗಳಿದ್ದು, ಪ್ರತಿವ್ಯಕ್ತಿ ಹಣ ಪಡೆಯಲು ಕನಿಷ್ಠ ಒಂದು ಗಂಟೆ ಕಾಯಬೇಕಾಗಿದೆ.

ಎಟಿಎಂಗಳು 500 ಮತ್ತು 1,000 ರೂ.ಗಳ ವಿತರಣೆಯೊಂದಿಗೆ ಪೂರ್ಣ ಪ್ರಮಾಣ ದಲ್ಲಿ ಕಾರ್ಯನಿರ್ವಹಿಸಲು ಇನ್ನೂ ಕನಿಷ್ಠ 2-3 ವಾರಗಳಾದರೂ ಬೇಕು. ಸದ್ಯ ಕಾರ್ಯ ನಿರ್ವಹಿಸುತ್ತಿರುವ ಎಟಿಎಂಗಳಲ್ಲಿ 100 ನೋಟುಗಳನ್ನು ಪಡೆಯಬಹುದಾಗಿದೆ.

ಸ್ಥಳೀಯ ಅಂಗಡಿಗಳು ಸಾಲ ನೀಡುವುದನ್ನು ನಿಲ್ಲಿಸಿವೆ. ಹೀಗಾಗಿ ತಮ್ಮ ದೈನಂದಿನ ಅಗತ್ಯಗಳನ್ನೂ ಪೂರೈಸಿಕೊಳ್ಳಲಾಗುತ್ತಿಲ್ಲ ಎಂದು ದೇಶಾದ್ಯಂತ ಹೆಚ್ಚೆಚ್ಚು ಜನರು ದೂರಿಕೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News