ಪ್ರಧಾನ ಮಂತ್ರಿಗಳೇ, ನಿಮ್ಮನ್ನು ಕೊಲೆ ಮಾಡಲು ಬಯಸುವವರು ಯಾರು ?
ಹೊಸದಿಲ್ಲಿ, ನ.16 : ``ನಿಮ್ಮನ್ನು ಬೆದರಿಸುತ್ತಿರುವವರು ಯಾರು ? ನಿಮ್ಮನ್ನು ಕೊಲೆ ಮಾಡಲು ಬಯಸುವವರು ಯಾರು ? ಸಂಸತ್ತಿಗೆ ಹೇಳಿ,'' ಹೀಗೆಂದು ಪ್ರಧಾನಿ ನರೇಂದ್ರ ಮೋದಿಗೆ ಬಹಿರಂಗ ಪ್ರಶ್ನೆ ಕೇಳಿದವರು ಕಾಂಗ್ರೆಸ್ ನಾಯಕ ಆನಂದ್ ಶರ್ಮಾ..
``ಅವರು ಎದೆ ತಟ್ಟಿಕೊಂಡು ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದೇನೆ ಎಂದು ಹೇಳುತ್ತಾರೆ. ಇಡೀ ವಿಶ್ವವನ್ನೇ ಸುತ್ತಾಡುತ್ತಾರೆ. ಇದು ಯಾವ ವಿಧದ ತ್ಯಾಗ?'' ಎಂದು ಶರ್ಮಾ ಮತ್ತೆ ಪ್ರಶ್ನಿಸಿದರು
ಶರ್ಮಾ ಅವರು ಪ್ರಧಾನಿಯ ಗೋವಾ ಭಾಷಣವನ್ನು ಉಲ್ಲೇಖಿಸದೇ ಇದ್ದರೂ ಅದನ್ನು ಆಧರಿಸಿಯೇ ಮೇಲಿನ ಪ್ರಶ್ನೆಗಳನ್ನು ಪ್ರಧಾನಿಯತ್ತ ಎಸೆದಿದ್ದರು.
``ಪ್ರಧಾನಿಯನ್ನು ಹತ್ಯೆ ಮಾಡುವುದಾಗಿ ಬೆದರಿಸುವವರು ಯಾರು ? ನಮಗೂ ತಿಳಿಯಲಿ. ನಮ್ಮ ಪ್ರಧಾನಿ ದೀರ್ಘಾ ಯುಷಿಯಾಗಬೇಕು,'' ಎಂದು ಶರ್ಮಾ ಪ್ರಧಾನಿಯನ್ನು ಅಣಕಿಸಿದರು. ಸರಕಾರ ಆರ್ಥಿಕ ಗೊಂದಲ ಸೃಷ್ಟಿಸುತ್ತಿದೆಯೆಂದು ಆರೋಪಿಸಿದ ಅವರು ಸರಕಾರ ಹಳೆಯ 500 ಹಾಗೂ 1000 ರೂ. ನೋಟುಗಳನ್ನು ನಿಷೇಧಿಸಿದಂದಿನಿಂದ ಜನರು ಎಟಿಎಂ ಹಾಗೂ ಬ್ಯಾಂಕುಗಳ ಮುಂದೆ ಸರತಿ ನಿಲ್ಲುವಂತಾಗಿದೆ ಎಂದರು.
``ನಾನು ಪ್ರಧಾನಿಯನ್ನು ಖಂಡಿಸುತ್ತೇನೆ. ಐದಾರು ದಿನಗಳಿಂದ ಸರತಿ ನಿಲ್ಲುವವರು ಹಗರಣಕೋರರು ಎಂದು ಪ್ರಧಾನಿ ಹೇಳಿ ಬಡವರನ್ನು ನಿಂದಿಸಿರುವುದರಿಂದ ಪ್ರಧಾನಿ ಕ್ಷಮೆಯಾಚಿಸಬೇಕು,'' ಎಂದವರು ಹೇಳಿದರು.
``ಪ್ರಶ್ನೆಗಳನ್ನು ಕೇಳಬಾರದಂತಹ ವಾತಾವರಣವನ್ನು ನೀವು ಸೃಷ್ಟಿಸಿದ್ದೀರಿ. ಆದರೂ ಪ್ರಶ್ನೆಗಳನ್ನು ಕೇಳಿದವರ ದೇಶಭಕ್ತಿಯನ್ನೇ ಪ್ರಶ್ನಿಸಲಾಗುತ್ತದೆ,'' ಎಂದು ಶರ್ಮ ಆಕ್ರೋಶಭರಿತರಾಗಿ ನುಡಿದರು.
ನೋಟು ರದ್ದತಿ ವಿಚಾರವನ್ನು ಗೌಪ್ಯವಾಗಿಡಲಾಗಿತ್ತೆಂದು ನೀವು ಹೇಳಿದ್ದೀರಿ. ಆದರೆ ನೀವು ಅದನ್ನು ಗೌಪ್ಯವಾಗಿಟ್ಟಿಲ್ಲ. ಕೆಲವು ಆಯ್ದ ಮಂದಿಗೆ ನೀವು ಈ ವಿಚಾರ ಸೋರಿಕೆ ಮಾಡಿದ್ದೀರಿ. ಬಿಜೆಪಿ ಘಟಕಗಳು ನೋಟು ನಿಷೇಧಕ್ಕಿಂತ ಮೊದಲೇ ಕೋಟಿಗಟ್ಟಲೆ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿಯಿಟ್ಟಿವೆ,'' ಎಂದು ಶರ್ಮಾ ಆರೋಪಿಸಿದರು