×
Ad

ಪ.ಬಂಗಾಲದ ಅತ್ಯಂತ ದೊಡ್ಡ ಹಣ್ಣುಹಂಪಲು ಮಾರುಕಟ್ಟೆಯಲ್ಲಿ ದಿನದ ಕೂಳಿಗಾಗಿ ಪರದಾಡುತ್ತಿರುವ 15,000 ವಲಸಿಗ ಕಾರ್ಮಿಕರು

Update: 2016-11-16 16:34 IST

 ಕೋಲ್ಕತಾ,ನ.16: ಪಶ್ಚಿಮ ಬಂಗಾಲದಲ್ಲಿಯೇ ಅತ್ಯಂತ ದೊಡ್ಡ ಹಣ್ಣುಹಂಪಲು ಮಾರುಕಟ್ಟೆಯಾಗಿರುವ ಇಲ್ಲಿಯ ಮೆಚುವಾ ಬಾಝಾರ್ ಫಲ್ ಮಂಡಿಯಲ್ಲಿ ಸಾಮಾನ್ಯ ದಿನಗಳಂದು ಹೆಚ್ಚಿನವರು ಬಿಹಾರಿಗಳೇ ಆಗಿರುವ ಸುಮಾರು 15,000 ದಿನಗೂಲಿ ಕಾರ್ಮಿಕರು 150ಕ್ಕೂ ಅಧಿಕ ಲಾರಿಗಳಿಗೆ ಹಣ್ಣುಗಳನ್ನು ತುಂಬಿಸುವ ಮೂಲಕ ದಿನದ ಕೂಳು ದುಡಿದುಕೊಳ್ಳುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ನೋಟು ನಿಷೇಧ ಕ್ರಮವನ್ನು ಘೋಷಿಸಿದಾಗಿನಿಂದ ಸದಾ ಗಿಜಿಗುಡುತ್ತಿರುವ ಈ ಮಾರುಕಟ್ಟೆಯನ್ನು ವಿಲಕ್ಷಣ ವೌನವು ಆವರಿಸಿಕೊಂಡಿದೆ. ಆಗಿನಿಂದಲೂ ಈ ಕಾರ್ಮಿಕರ ದಿನದ ಗಳಿಕೆಗೆ ಗ್ರಹಣ ಬಡಿದಿದೆ. ಹೆಚ್ಚಿನ ಕಾರ್ಮಿಕರಿಗೆ ಒಂದೇ ಒಂದು ಪೈಸೆಯನ್ನೂ ಗಳಿಸಲು ಸಾಧ್ಯವಾಗಿಲ್ಲ.

ನಾನು ದಿನಕ್ಕೆ ಏನಿಲ್ಲವೆಂದರೂ ನಾಲ್ಕೈದು ನೂರು ರೂ.ದುಡಿಯುತ್ತಿದ್ದೆ, ಈಗ ನನ್ನ ದುಡಿಮೆ 40 ರೂ.ಗಳನ್ನೂ ದಾಟುತ್ತಿಲ್ಲ. ಕಳೆದ ಐದು ದಿನಗಳಿಂದಲೂ ಈ ಬವಣೆ ಮುಂದುವರಿದಿದೆ. ಇನ್ನೆಷ್ಟು ದಿನ ನಾವು ಒದ್ದಾಡಬೇಕೋ ಗೊತ್ತಿಲ್ಲ ಎಂದು ಮೊಹಮ್ಮದ್ ಝುಬೈರ್ ನಿಡುಸುಯ್ದ. ಮೂಲತಃ ಬಿಹಾರದ ವೈಶಾಲಿಗಂಜ್ ನಿವಾಸಿಯಾಗಿರುವ ಈತ ಕಳೆದ ಹಲವಾರು ವರ್ಷಗಳಿಂದಲೂ ಮೆಚುವಾ ಬಝಾರ್‌ನಲ್ಲಿ ದುಡಿಯುತ್ತಿದ್ದಾನೆ.

ಈ ಮಾರುಕಟ್ಟೆಯಿಂದ ರಾಜ್ಯಾದ್ಯಂತ ಹಣ್ಣುಹಂಪಲುಗಳು ಪೂರೈಕೆಯಾಗುವ ಜೊತೆಗೆ, ಈಶಾನ್ಯ ರಾಜ್ಯಗಳು ಮತ್ತು ಬಾಂಗ್ಲಾದೇಶಕ್ಕೂ ರವಾನೆಯಾಗುತ್ತವೆ. ಹಳೆಯ ನೋಟುಗಳ ವಿನಿಮಯಕ್ಕೆ ಬ್ಯಾಂಕುಗಳಲ್ಲಿ ಅವಕಾಶವಿದ್ದರೂ,ಸಣ್ಣ ಮುಖಬೆಲೆಯ ನೋಟುಗಳ ಕೊರತೆಯಿಂದಾಗಿ ನಾಗರಿಕರು ತಮ್ಮ ಖರೀದಿಗಳನ್ನೇ ಮೊಟಕು ಗೊಳಿಸಿದ್ದಾರೆ.

ಮೊಹಮ್ಮದ್ ಶಬೀರ್ ತನ್ನ ಪತ್ನಿ ಮತ್ತು ಮೂರರ ಹರೆಯದ ಪುತ್ರಿಯೊಂದಿಗೆ ವಾಸವಾಗಿರುವ ಮೆಚುವಾದ ಪುಟ್ಟಮನೆಯಲ್ಲಿಯ ಕಪಾಟಿನ ಮೂಲೆಯಲ್ಲಿ 500 ರೂ.ಗಳ ಎರಡು ಹಳೆಯ ನೋಟುಗಳು ಧೂಳು ತಿನ್ನುತ್ತಿವೆ, ಆದರೆ ಮನೆಯಲ್ಲಿ ಒಂದು ತುತ್ತೂ ಕೂಳು ಇಲ್ಲ. ಕೆಲವು ದಿನಗಳ ಹಿಂದೆ ಎರಡು 500 ರೂ.ನೋಟುಗಳನ್ನು ತಲಾ 350 ರೂ.ನಂತೆ ಮಾರಾಟ ಮಾಡಿ ಬಿಹಾರದ ಸ್ವಗ್ರಾಮದಲ್ಲಿರುವ ಹೆತ್ತವರಿಗೆ ಕಳುಹಿಸಿದ್ದ. ಶಬೀರ್ ನೋಟು ವಿನಿಮಯಿಸಿಕೊಳ್ಳಲು ಮೂರು ಸಲ ಬ್ಯಾಂಕಿಗೆ ತೆರಳಿದ್ದ. ಆದರೆ ಗುರುತು ಚೀಟಿಯಿಲ್ಲದ್ದರಿಂದ ಖಾಲಿ ಕೈಯಲ್ಲಿ ವಾಪಸಾಗಿದ್ದಾನೆ. ಸಗಟು ಹಣ್ಣು ಮಾರಾಟಗಾರರು ಹಳೆಯ ನೋಟುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿರುವುದರಿಂದ ಹಣ್ಣುಗಳ ಖರೀದಿ ಸಾಧ್ಯವಾಗದೆ ಆತ ಹಣ್ಣುಗಳ ಮಾರಾಟವನ್ನೂ ನಿಲ್ಲಿಸಿದ್ದಾನೆ. ಮಾರುಕಟ್ಟೆಯಂತೂ ತಳ ಕಂಡಿದೆ. ಕಳೆದ ಐದು ದಿನಗಳಿಂದ ಒಂದೇ ಒಂದು ಪೈಸೆಯನ್ನೂ ದುಡಿಯಲಾಗಿಲ್ಲ. ಕುಟುಂಬದ ತುತ್ತಿನ ಚೀಲಗಳನ್ನು ತುಂಬುವುದು ಹೇಗೆ ಎನ್ನುವುದು ಅವನಿಗೆ ಗೊತ್ತಾಗುತ್ತಿಲ್ಲ. ಕೆಲವರು ನೋಟುಗಳನ್ನು ಕಡಿಮೆ ಹಣಕ್ಕೆ ಖರೀದಿಸುತ್ತಾರಾದರೂ ಅದರಿಂದ ನಷ್ಟವಾಗುತ್ತದೆ. ‘‘ಸರಕಾರವು ಇದನ್ನೇ ಬಯಸು ತ್ತಿದೆಯೇ ’’ ಎನ್ನುವುದು ಶಬೀರ್‌ನ ಪ್ರಶ್ನೆ.

ಬಿಹಾರದ ನಾವಡಾ ಜಿಲ್ಲೆಯ ನಿವಾಸಿಯಾಗಿರುವ ಶಬೀರ್‌ಗೆ ಸರಕಾರವು ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಕ್ರಮವನ್ನು ಕೈಗೊಂಡಿದೆ ಎಂದು ತಿಳಿದಾಗ ಇತರ ಹಲವರಂತೆ ಈತನಿಗೂ ಖುಷಿಯಾಗಿತ್ತು. ಆದರೆ ತನ್ನ ಕುಟುಂಬಕ್ಕೆ ಮುಂದಿನ ಊಟ ಎಂದು ದೊರೆಯಲಿದೆ ಎಂಬ ಅನಿಶ್ಚಿತತೆ ಸರಕಾರದ ಕ್ರಮವನ್ನು ಪ್ರಶ್ನಿಸುವಂತೆ ಮಾಡಿದೆ.

ಈ ಮಾರುಕಟ್ಟೆಯಲ್ಲಿ ದುಡಿಯುವ ಹೆಚ್ಚಿನ ಕಾರ್ಮಿಕರದ್ದೂ ಇದೇ ಕಥೆ. ಬಿಹಾರದಿಂದ ವಲಸೆ ಬಂದಿರುವ ಇವರಿಗೆ ಕಾಯಂ ವಿಳಾಸವಿಲ್ಲ,ಹೀಗಾಗಿ ಗುರುತು ಚೀಟಿಯೂ ಇಲ್ಲ. ತಾವು ಕಷ್ಟಪಟ್ಟು ದುಡಿದ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆಯೇ ಎಂಬ ಕಳವಳ ಅವರನ್ನು ಕಾಡುತ್ತಿದೆ.

ನೂರಾರು ಹಮಾಲಿಗಳು,ಮಾರಾಟಗಾರರು,ಹರಾಜುದಾರರು......ಎಲ್ಲರದೂ ಒಂದೇ ಕಥೆ. ಕೈಯಲ್ಲಿ ಹಣವಿಲ್ಲ.ಹಳೆಯ ನೋಟುಗಳನ್ನು ವಿನಿಮಯಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕುಟುಂಬಗಳನ್ನು ಸಾಕುವುದಾದರೂ ಹೇಗೆ ಎಂಬ ಚಿಂತೆಯಿಂದ ಇವರೆಲ್ಲ ಹೈರಾಣಾಗಿದ್ದಾರೆ.

  ಭಾರತದಲ್ಲಿ ಶೇ.40ರಷ್ಟು ಜನರು ನಗದು ವ್ಯವಹಾರ ಮಾಡುತ್ತಾರೆ. ಕಾರ್ಮಿಕರು ಚೆಕ್‌ಗಳನ್ನು ಸ್ವೀಕರಿಸುವುದಿಲ್ಲ. ಶೇ.70ರಷ್ಟು ಸಗಟು ಮಾರುಕಟ್ಟೆ ನಗದು ಹಣದ ಬಲದ ಮೇಲೆಯೇ ನಡೆಯುತ್ತದೆ. ನಮ್ಮದು ನಗದು ಚಾಲಿತ ಆರ್ಥಿಕತೆಯಾಗಿದೆ. ಒಂದು ಅಥವಾ ಎರಡು ದಿನಗಳಲ್ಲಿ ಇಡೀ ವ್ಯವಸ್ಥೆಯನ್ನು ಬದಲಿಸಲು ಸಾಧ್ಯವಿಲ್ಲ ಎಂದು ಹಣ್ಣಿನ ವ್ಯಾಪಾರಿಯೋರ್ವರು ಹೇಳಿದರು. ಅವರ ಮಾತಿನಲ್ಲಿ ಸತ್ಯವಿದೆ ಎಂದೆನಿಸುವುದಿಲ್ಲವೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News