ಎಸ್‌ಬಿಐ 7,000 ಕೋ.ರೂ.ಸಾಲವನ್ನು ತೊಡೆದುಹಾಕಿದ್ದು ಸಾಲಮನ್ನಾ ಅಲ್ಲ:ಜೇಟ್ಲಿ
Update: 2016-11-16 22:16 IST
ಹೊಸದಿಲ್ಲಿ,ನ.16: ಎಸ್‌ಬಿಐ ವಿಜಯ ಮಲ್ಯ ಪ್ರವರ್ತಿತ ಕಿಂಗ್ ಫಿಷರ್ ಏರ್‌ಲೈನ್ಸ್ ಸೇರಿದಂತೆ 7,000 ಕೋ.ರೂ.ಗಳ ಸಾಲವನ್ನು ಮನ್ನಾ ಮಾಡಿದೆ ಎಂಬ ವರದಿಗಳು ವಿವಾದಗಳನ್ನು ಸೃಷ್ಟಿಸಿರುವ ಬೆನ್ನಿಗೇ ಸರಕಾರ ಮತ್ತು ಬ್ಯಾಂಕು ಯಾವುದೇ ಸಾಲ ಮನ್ನಾ ಮಾಡಲಾಗಿಲ್ಲ ಮತ್ತು ಸುಸ್ತಿದಾರರ ಸಾಲಬಾಧ್ಯತೆ ಮುಂದುವರಿದಿದೆ ಎಂದು ಸಮಜಾಯಿಷಿ ನೀಡಿವೆ.
ರೈಟ್ ಆಫ್ ಅಥವಾ ಸಾಲ ಮನ್ನಾವನ್ನು ಅಕ್ಷರಶಃ ಅರ್ಥೈಸಿಕೊಳ್ಳದಂತೆ ಬುಧವಾರ ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸದಸ್ಯರಿಗೆ ಸೂಚಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ರೈಟ್ ಆಫ್ ಎಂದರೆ ಸಾಲವನ್ನು ಬಿಟ್ಟುಬಿಡುವುದು ಎಂದು ಅರ್ಥವಲ್ಲ. ಸಾಲ ಹಾಗೆಯೇ ಉಳಿದಿರುತ್ತದೆ ಮತ್ತು ಬ್ಯಾಂಕುಗಳು ಅವುಗಳ ಮರುಪಾವತಿಗಾಗಿ ಸುಸ್ತಿದಾರರಿಗೆ ಬೆನ್ನು ಬೀಳಬಹುದು ಎಂದರು.