×
Ad

ಈಗ 2000 ರೂ ಹೊಸ ನೋಟು ಆನ್ ಲೈನ್ ನಲ್ಲಿ ಲಭ್ಯ !

Update: 2016-11-17 12:45 IST

ಹೊಸದಿಲ್ಲಿ, ನ.17 : ನಿಮ್ಮ ಕೈಗೆ ಗರಿಗರಿಯಾದ ಹೊಸ 2000 ರೂ ನೋಟು ಬರಬೇಕೇ ? ಅದಕ್ಕಾಗಿ ಎಟಿಎಂ ಎದುರು ಗಂಟೆಗಟ್ಟಲೆ ಸರತಿ ನಿಲ್ಲುವುದೇಕೆ ? ಆನ್ ಲೈನ್ ನಲ್ಲೂ ಲಭ್ಯವಿದೆ. ಆದರೆ ಬೆಲೆ ಮಾತ್ರ ದುಬಾರಿ.

ಬುಧವಾರದಂದು ಇ-ಕಾಮರ್ಸ್ ಸೈಟ್ ಈಬೇ ನಲ್ಲಿ ಹೊಚ್ಚ ಹೊಸ 2000 ರೂ ನೋಟು 3,500 ಆರಂಭಿಕ ಬೆಲೆಯಿಂದ ಮಾರಾಟ ಮಾಡಲಾಗುತ್ತಿತ್ತು  (ಕ್ರೆಡಿಟ್ ಕಾರ್ಡ್ ಅಥವಾ ಆನ್ ಲೈನ್ ಟ್ರಾನ್ಸ್ ಫರ್ ಮುಖಾಂತರ)). ಆದರೆ ನೀವು ಅಂಧಶ್ರದ್ಧೆಯುಳ್ಳವರಾಗಿದ್ದರೆ ಕೆಲವು ನಿರ್ಧಿಷ್ಟ ಸರಣಿಯ ನೋಟುಗಳು,(ಉದಾ: 786) ಬೇಕೆಂದಾದಲ್ಲಿ ಅದು ಕೂಡ ಲಭ್ಯವಿತ್ತು, ಆದರೆ ಬೆಲೆ ಮಾತ್ರ ರೂ 1.51 ಲಕ್ಷ ಆಗಿತ್ತು. ಈ ಸಂಖ್ಯೆ ಬ್ಲಾಕ್ ಬಸ್ಟರ್ ಅಮಿತಾಭ್ ಚಿತ್ರ ದೀವಾರ್ ನಲ್ಲಿ ಕೂಡ ಉಪಯೋಗಿಸಲಾಗಿತ್ತು ಹಾಗೂ ಆ ಚಿತ್ರದಲ್ಲಿ ಧಕ್ಕೆ ಕೆಲಸಗಾರನಾಗಿದ್ದ ಅಮಿತಾಭ್  ಅವರ ಬ್ಯಾಡ್ಜ್ ನಂಬರ್ ಆಗಿತ್ತು.

ಹೊಸ 2000 ರೂ ನೋಟುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಈಬೇಯನ್ನು ಸಂಪರ್ಕಿಸಿದಾಗ ಸೈಟಿನಲ್ಲಿ ಸ್ವತಂತ್ರ ಸೆಲ್ಲರ್ ಗಳು ಮಾರಾಟ ಮಾಡುವ ಉತ್ಪನ್ನಗಳ ಮೇಲೆ ತನಗೆ ನಿಯಂತ್ರಣವಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ.  ಆದರೆ ಈ ನೋಟುಗಳನ್ನು ಲಿಸ್ಟಿಂಗ್ ನಿಂದ ಡಿಸೇಬಲ್ ಮಾಡುವುದಾಗಿ ನಂತರ ಅದು ತಿಳಿಸಿದೆ.

ಕಳೆದ ವರ್ಷದ ಜುಲೈ ತಿಂಗಳಲ್ಲಿ  ಈಬೇ ಸಹಿತ ಹಲವು ಆನ್ ಲೈನ್ ಕಂಪೆನಿಗಳ ವಿರುದ್ಧ  ವಿಶಿಷ್ಟ ಸಂಖ್ಯೆಗಳುಳ್ಳ ಭಾರತೀಯ ಕರೆನ್ಸಿ ಮಾರಾಟ ಸಂಬಂಧ ಮಧ್ಯ ಪ್ರದೇಶ ಹೈಕೋರ್ಟ್ ನೊಟೀಸ್ ಜಾರಿಗೊಳಿಸಿತ್ತು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News