ಕ್ಯಾನ್ಸರ್ ರೋಗಿಯ ವೃದ್ಧೆ ತಾಯಿಗೆ ಒಂದು ರೂ. ನಾಣ್ಯದಲ್ಲಿ 2000 ರೂ. ನೀಡಿದ ಬ್ಯಾಂಕ್ !
ಲಕ್ನೋ,ನ.17: ಇಲ್ಲಿಗೆ ಸಮೀಪದ ಮೋಹನಲಾಲ್ ಗಂಜ್ ನಿವಾಸಿ ಸರ್ಜು ದೇವಿಯ ಹಣೆಯಲ್ಲಿ ದೇವರು ಸುಖವನ್ನೇ ಬರೆದಿಲ್ಲ. ಜೀವನದಲ್ಲಿ ಸದಾ ಹಿನ್ನಡೆಯನ್ನೇ ಅನುಭವಿಸುತ್ತಿದ್ದರೂ ಆಕೆ ಮಾತ್ರ ಎಂದೂ ಹೋರಾಟವನ್ನು ಕೈಬಿಟ್ಟವಳಲ್ಲ. ತನ್ನ ಗಂಡ ನಿಧನನಾದಾಗ ಅಥವಾ ಈಗ ಮಗ ಅಂತಿಮ ಹಂತದ ಹೊಟ್ಟೆ ಕ್ಯಾನ್ಸರ್‌ನಿಂದ ಬಳಲುತ್ತಿರುವಾಗ.....ಹೀಗೆ ಆಕೆ ಧೃತಿಗೆಡದೆ ಸದಾ ಕಷ್ಟಗಳನ್ನೇ ಅನುಭವಿಸಿಕೊಂಡು ಬಂದವಳು. ಆದರೆ ಮಂಗಳವಾರದ ಘಟನೆ ಆಕೆಯನ್ನು ತೀರ ಹತಾಶಳನ್ನಾಗಿಸಿಬಿಟ್ಟಿದೆ.
ಅಂದು ಸ್ಥಳೀಯ ಬ್ಯಾಂಕಿಗೆ ತೆರಳಿದ್ದ ಸರ್ಜುದೇವಿ ವಿನಿಮಯಕ್ಕಾಗಿ ತನ್ನ ಬಳಿಯಿದ್ದ ಹಳೆಯ 2000 ರೂ.ಗಳ ನೋಟುಗಳನ್ನು ನೀಡಿದ್ದಳು. ಕ್ಯಾಷಿಯರ್ ಸ್ಥಾನದಲ್ಲಿದ್ದ ಮಹಿಳೆ ಒಂದು ರೂ.ನ 2000 ನಾಣ್ಯಗಳಿದ್ದ ಚೀಲವನ್ನು ಕೈಗಿತ್ತಾಗ ಸರ್ಜುದೇವಿಗೆ ಉಮ್ಮಳಿಸಿ ಬರುತ್ತಿದ್ದ ಭಾವನೆಗಳನ್ನು ತಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ.
ಆ ಚೀಲವಾದರೋ ಬರೋಬ್ಬರಿ 17 ಕೆ.ಜಿ.ತೂಕವಿತ್ತು. ಅದನ್ನು ಆಕೆ ಮನೆಗೆ ಹೊತ್ತೊಯ್ಯುವುದು ಸಾಧ್ಯವೇ ಇರಲಿಲ್ಲ. ಅಷ್ಟಕ್ಕೂ ಆಕೆ ತನ್ನ ಮಗನಿಗೆ ತುರ್ತಾಗಿ ರೇಡಿಯೊ ಥೆರಪಿ ಮಾಡಿಸಬೇಕಾಗಿತ್ತು. ಆ ಚಿಕಿತ್ಸೆಯ ಬಲದಿಂದಲೇ ಮಗ ಇನ್ನೂ ಬದುಕುಳಿದಿದ್ದ.
ತನ್ನ ಮಗನನ್ನು ಆಸ್ಪತ್ರೆಗೆ ಕರೆದೊಯ್ಯಬೇಕಿದೆ. ದಯವಿಟ್ಟು ಈ ನಾಣ್ಯಗಳನ್ನು ವಾಪಸ್ ಪಡೆದುಕೊಂಡು ನೋಟುಗಳನ್ನು ಕೊಡಿರಿ ಎಂದು ಸರ್ಜುದೇವಿ ಪರಿಪರಿಯಾಗಿ ಬೇಡಿಕೊಂಡರೂ ಕ್ಯಾಷಿಯರ್ ಮಹಿಳೆ ಅದನ್ನು ಕಿವಿಗೇ ಹಾಕಿಕೊಳ್ಳಲಿಲ್ಲ. ಯಾವುದು ಇರುತ್ತದೋ ಅದನ್ನೇ ಕೊಡುತ್ತೇವೆ. ಬೇಕಾದರೆ ತೆಗೆದುಕೊಳ್ಳಿ,ಇಲ್ಲವೇ ವಾಪಸ್ ಹೋಗಿ ಎಂಬ ಧಿಮಾಕಿನ ಉತ್ತರ ಆಕೆಯಿಂದ ಬಂದಿತ್ತು.
ಸರ್ಜುದೇವಿ ಕೊನೆಗೂ ಅನಿವಾರ್ಯವಾಗಿ ತನ್ನ ಕ್ಯಾನ್ಸರ್‌ಪೀಡಿತ ಮಗನನ್ನೇ ಬ್ಯಾಂಕಿಗೆ ಕರೆಸಿಕೊಂಡು ಆತನ ನೆರವಿನೊಂದಿಗೆ ನಾಣ್ಯಗಳ ಚೀಲವನ್ನು ಮನೆಗೆ ಸಾಗಿಸಿದ್ದಾಳೆ.
ಇದು ನ್ಯಾಯವೇ? ನನ್ನದೇ ಹಣವನ್ನು ಪಡೆಯಲು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತ ನನಗೆ ಒಂದು ರೂ.ನಾಣ್ಯಗಳನ್ನು ನೀಡಲಾಗಿದೆ. ನನ್ನ ಕಣ್ಣೆದುರೇ ಬೇರೆಯವರಿಗೆ ನೋಟುಗಳನ್ನು ಕೊಟ್ಟಿದ್ದಾರೆ. ಬ್ಯಾಂಕಿನವರ ಇಂಥ ತಾರತಮ್ಯ ಸರಿಯಲ್ಲ ಎಂದು ಸರ್ಜು ದೇವಿ ಗೋಳು ತೋಡಿಕೊಂಡಳು.
ಆಕೆಯ ಮಗನಿಗೆ ಕ್ಯಾನ್ಸರ್ ರೋಗ ಕಾಡುತ್ತಿರುವುದು ಕಳೆದ ವರ್ಷವಷ್ಟೇ ಪತ್ತೆಯಾಗಿತ್ತು. ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಂದು ಲಕ್ಷ ರೂ.ಮಂಜೂರಾಗಿತ್ತು.
ಮಗನಿಗೆ ತುರ್ತಾಗಿ ರೇಡಿಯೊ ಥೆರಪಿ ಮಾಡಿಸಬೇಕಾಗಿದೆ. ಆಕೆಯ ಬಳಿಯಿರುವ ನಾಣ್ಯಗಳನ್ನು ಪಡೆಯುವರು ಯಾರೂ ಇಲ್ಲ,ಏಕೆಂದರೆ ಅವರ ಬಳಿ ಅವುಗಳನ್ನು ಎಣಿಸಲು ಸಮಯವಿಲ್ಲ. ಮೂರು ದಿನಗಳಿಂದ ಸರ್ಜುದೇವಿ ಪರಿಹಾರ ಕಂಡುಕೊಳ್ಳಲು ಒದ್ದಾಡುತ್ತಲೇ ಇದ್ದಾಳೆ. ಅತ್ತ ಪ್ರಧಾನಿ ಮೋದಿ ಮಾತ್ರ ನೋಟು ನಿಷೇಧ ಕ್ರಮದಿಂದ ಜನಸಾಮಾನ್ಯರು ಸುಖವಾಗಿ ನಿದ್ರೆ ಮಾಡುತ್ತಿದ್ದಾರೆ,ಶ್ರೀಮಂತರು ನಿದ್ರೆಮಾತ್ರೆಗಳನ್ನು ಹುಡುಕಿಕೊಂಡು ಅಲೆದಾಡುತ್ತಿದ್ದಾರೆ ಎಂದು ಊರು ತುಂಬ ಹೇಳಿಕೊಂಡು ತಿರುಗಾಡುತ್ತಿದ್ದಾರೆ!