×
Ad

ಭಾರತ ಮೂಲದ ನಿಕ್ಕಿ ಹ್ಯಾಲಿ ಮುಂದಿನ ವಿದೇಶ ಕಾರ್ಯದರ್ಶಿ?

Update: 2016-11-17 17:55 IST

ವಾಶಿಂಗ್ಟನ್, ನ. 17: ಸೌತ್ ಕ್ಯಾರಲೈನದ ಎರಡು ಬಾರಿಯ ಗವರ್ನರ್ ಭಾರತ ಮೂಲದ ನಿಕ್ಕಿ ಹ್ಯಾಲಿ, ಡೊನಾಲ್ಡ್ ಟ್ರಂಪ್ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ ಎಂಬುದಾಗಿ ಮಾಧ್ಯಮ ವರದಿಗಳು ತಿಳಿಸಿವೆ. ಅದರಲ್ಲೂ ಮುಖ್ಯವಾಗಿ, ಮಹತ್ವದ ವಿದೇಶ ಕಾರ್ಯದರ್ಶಿ ಹುದ್ದೆಗೆ ಅವರನ್ನು ಪರಿಗಣಿಸಲಾಗುತ್ತಿದೆ ಎನ್ನಲಾಗಿದೆ.

44 ವರ್ಷದ ನಿಕ್ಕಿ ಹ್ಯಾಲಿಯನ್ನು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಭೇಟಿಯಾಗಲಿದ್ದಾರೆ ಎಂದು ಟ್ರಂಪ್ ತಂಡದ ವಕ್ತಾರ ಸಿಯಾನ್ ಸ್ಪೈಸರ್ ಬುಧವಾರ ರಾತ್ರಿ ಸುದ್ದಿಗಾರರಿಗೆ ತಿಳಿಸಿದರು.

ಮಾಜಿ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸಿಂಜರ್, ಜನರಲ್ (ನಿವೃತ್ತ) ಜಾಕ್ ಕಿಯಾನ್, ಅಡ್ಮಿರಲ್ ಮೈಕ್ ರೋಜರ್ಸ್ ಮತ್ತು ಕೆನ್ ಬ್ಲಾಕ್‌ವೆಲ್ ಅವರನ್ನೂ ಗುರುವಾರ ಟ್ರಂಪ್ ಭೇಟಿಯಾಗುತ್ತಾರೆ.

ಸಂಪುಟ ಸದಸ್ಯರ ಹುದ್ದೆಗಳಿಗಾಗಿ ಕೆಲವರ ಭೇಟಿ ನಡೆದರೆ, ಇತರರು ಕಲ್ಪನೆಗಳನ್ನು ಹಂಚಿಕೊಳ್ಳಲು ಮತ್ತು ಸಲಹೆ ನೀಡುವುದಕ್ಕಾಗಿ ಟ್ರಂಪ್‌ರನ್ನು ಭೇಟಿಯಾಗುತ್ತಾರೆ.

ವಿದೇಶಾಂಗ ಕಾರ್ಯದರ್ಶಿ ಸೇರಿದಂತೆ, ನಿಕ್ಕಿ ಹ್ಯಾಲಿಗೆ ಸಂಪುಟದಲ್ಲಿ ಸ್ಥಾನ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸೌತ್ ಕ್ಯಾರಲೈನ ನಿವಾಸಿ ಹಾಗೂ ಟ್ರಂಪ್‌ರ ಆಪ್ತ ಸಹಾಯಕರೊಬ್ಬರು ತಿಳಿಸಿದರು.

‘‘ನಮ್ಮ ಸರಕಾರಕ್ಕೆ ಟ್ರಂಪ್ ಈ ರೀತಿಯಾಗಿ ಹೊಸ ಮುಖಗಳನ್ನು ತರುತ್ತಿದ್ದಾರೆ’’ ಎಂದು ಸೌತ್ ಕ್ಯಾರಲೈನದ ಲೆಫ್ಟಿನೆಂಟ್ ಗವರ್ನರ್ ಹೆನ್ರಿ ಮೆಕ್‌ಮಾಸ್ಟರ್ ‘ದ ಪೋಸ್ಟ್ ಆ್ಯಂಡ್ ಕರಿಯರ್’ಗೆ ತಿಳಿಸಿದರು.

 ಪಕ್ಷದ ಪ್ರೈಮರಿ ಚುನಾವಣೆಯಲ್ಲಿ ಹ್ಯಾಲಿ ಫ್ಲೋರಿಡ ಸೆನೆಟರ್ ಮಾರ್ಕೊ ರೂಬಿಯೊ ರನ್ನು ಮೊದಲು ಅನುಮೋದಿಸಿದ್ದರೂ, ಬಳಿಕ ಅಧ್ಯಕ್ಷೀಯ ಮತದಾನಕೆ ಮುಂಚಿವಾಗಿ ಟ್ರಂಪ್‌ಗೆ ಪೂರ್ಣ ಪ್ರಮಾಣದಲ್ಲಿ ಬೆಂಬಲ ಘೋಷಿಸಿದ್ದರು.

ವಿವಿಧ ಕ್ಯಾಬಿನೆಟ್ ಹುದ್ದೆಗಳಿಗೆ ಯಾರನ್ನು ನೇಮಿಸಲಾಗುತ್ತದೆ ಎಂಬ ಮಾಹಿತಿಯನ್ನು ಟ್ರಂಪ್ ಆಡಳಿತ ಈವರೆಗೆ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News