ವಾಟ್ಸ್‌ಆ್ಯಪ್ ವೀಡಿಯೋ ಕಾಲಿಂಗ್ ಹೆಸರಲ್ಲಿ ಹ್ಯಾಕಿಂಗ್: ಈ ಆಹ್ವಾನದ ಬಗ್ಗೆ ಎಚ್ಚರ!

Update: 2016-11-18 03:53 GMT

ಹೊಸದಿಲ್ಲಿ, ನ.18: ವಾಟ್ಸ್‌ಆ್ಯಪ್ ಈ ವಾರದ ಆರಂಭದಲ್ಲಿ ಬಹುನಿರೀಕ್ಷಿತ ವೀಡಿಯೋ ಕಾಲಿಂಗ್ ಸೇವೆಗೆ ಚಾಲನೆ ನೀಡಿದೆ. ತಕ್ಷಣ ಹ್ಯಾಕರ್‌ಗಳು ಇದರ ತಂತ್ರವನ್ನು ಅರಿತುಕೊಂಡು ಹ್ಯಾಂಕಿಂಗ್ ವಿಧಾನ ಕಂಡುಕೊಂಡಿದ್ದಾರೆ. ವಾಟ್ಸ್‌ಆ್ಯಪ್ ತನ್ನ ವೀಡಿಯೋ ಕಾಲಿಂಗ್ ಸೌಲಭ್ಯವನ್ನು ನವೆಂಬರ್ 15ರಂದು ಆರಂಭಿಸಿದ ತಕ್ಷಣ, ಇದಕ್ಕೆ ಆಹ್ವಾನ ನೀಡುವ ಲಿಂಕ್‌ಗಳು ಹರಿದು ಬರುತ್ತಿವೆ. ಗ್ರಾಹಕರು ಈ ಲಿಂಕ್ ಕ್ಲಿಕ್ ಮಾಡಿದ ತಕ್ಷಣ, ಹೊಸ ಸೌಲಭ್ಯದ ವೆಬ್‌ಸೈಟ್ ಜತೆಗೆ ಇದು ಸಂಪರ್ಕ ಸಾಧಿಸುತ್ತದೆ.
ಆದರೆ ಹ್ಯಾಕರ್‌ಗಳಿಂದ ಬರುವ ಈ ಸಂದೇಶದಲ್ಲಿ, "ವಾಟ್ಸ್‌ಆ್ಯಪ್ ವೀಡಿಯೋ ಕಾಲಿಂಗ್ ಸೌಲಭ್ಯಕ್ಕೆ ನಿಮಗೆ ಆಹ್ವಾನ. ಈ ಆಹ್ವಾನ ಪಡೆದ ಗ್ರಾಹಕರು ಮಾತ್ರ ಹೊಸ ಸೌಲಭ್ಯ ಬಳಸಲು ಸಾಧ್ಯ" ಎಂದು ವಿವರಣೆ ಇದೆ. ಇದನ್ನು ಕ್ಲಿಕ್ ಮಾಡಿದ ತಕ್ಷಣ ಇದು ನಿಮಗೆ ಹ್ಯಾಕರ್ ಸೈಟ್ ಎನಿಸುವುದಿಲ್ಲ.
ಆದರೆ ನೀವು ಸಂಪೂರ್ಣವಾಗಿ ನಂಬುವಂತೆ ಈ ಪುಟವನ್ನು ವಿನ್ಯಾಸಗೊಳಿಸಲಾಗಿದೆ. ಸೌಲಭ್ಯ ಆರಂಭಿಸಿ ಎಂಬ ಟ್ಯಾಬ್ ಕ್ಲಿಕ್ ಮಾಡಿದ ತಕ್ಷಣ, ಬಳಕೆದಾರರ ದೃಢೀಕರಣಕ್ಕಾಗಿ ಹೊಸ ಪೇಜ್‌ಗೆ ನಿರ್ದೇಶಿಸುತ್ತದೆ. ಆಗ ಇಂಥ ಆಹ್ವಾನ ಕಳುಹಿಸಬಹುದಾದ ನಾಲ್ಕು ಮಂದಿ ಸ್ನೇಹಿತರ ವಿವರ ನೀಡುವಂತೆ ಕೇಳುತ್ತದೆ. ಇಡೀ ಪುಟ ಹಾಗೂ ಪ್ರಕ್ರಿಯೆ ವಿಶ್ವಾಸಾರ್ಹ ಎಂಬಂತೆ ಕಂಡುಬಂದರೂ, ನೀವು ಈ ಲಿಂಕ್ ಕ್ಲಿಕ್ ಮಾಡಿದ ತಕ್ಷಣ ಹ್ಯಾಕರ್ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ. ನಿಮ್ಮ ಎಲ್ಲ ಮಾಹಿತಿಗಳೂ ಹ್ಯಾಕ್ ಆಗುವ ಎಲ್ಲ ಸಾಧ್ಯತೆಗಳೂ ಇವೆ.
ವಾಸ್ತವವಾಗಿ ವಾಟ್ಸ್‌ಆ್ಯಪ್ ವೀಡಿಯೋ ಕಾಲಿಂಗ್ ಸೌಲಭ್ಯಕ್ಕೆ ನೀವು ಗೂಗಲ್ ಪ್ಲೇಸ್ಟೋರ್‌ನಲ್ಲಿ ವಾಟ್ಸ್‌ಆ್ಯಪ್ ಅಪ್‌ಡೇಟ್ ಮಾಡಿಕೊಳ್ಳಬೇಕು. ಅಪ್‌ಡೇಟ್ ಆದ ತಕ್ಷಣ ಹೊಸ ಸೌಲಭ್ಯವನ್ನು ನೀವು ಬಳಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News