ಮಹಾರಾಷ್ಟ್ರದ ಸಹಕಾರ ಸಚಿವರ ಕಾರಿನಿಂದ 92 ಲಕ್ಷ ರೂ. ವಶ
ಮುಂಬೈ, ನ.18: ಅಧಿಕ ಮೌಲ್ಯದ ನೋಟುಗಳ ಚಲಾವಣೆ ರದ್ದತಿ ಮಾಡಿ ವಾರದ ಬಳಿಕ ಸೊಲ್ಲಾಪುರ ಮೂಲಕದ ಲೋಕಮಂಗಲ ಸಮೂಹಕ್ಕೆ ಸೇರಿದ ಖಾಸಗಿ ವಾಹನದಲ್ಲಿ 91.5 ಲಕ್ಷ ರೂಪಾಯಿ ನೋಟುಗಳು ಪತ್ತೆಯಾಗಿವೆ. ಈ ಸಮೂಹ ಬಿಜೆಪಿಯ ಹಿರಿಯ ನಾಯಕ ಹಾಗೂ ಮಹಾರಾಷ್ಟ್ರದ ಸಹಕಾರ ಸಚಿವ ಸುಭಾಶ್ ದೇಶಮುಖ್ ಅವರ ನಿಯಂತ್ರಣದಲ್ಲಿದೆ.
ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಹಿನ್ನೆಲೆಯಲ್ಲಿ ರಚಿಸಿರುವ ವಿಶೇಷ ತಂಡ ತಪಾಸಣೆ ಮಾಡಿದಾಗ ಈ ನಗದು ಪತ್ತೆಯಾಗಿದೆ ಎಂದು ಉಸ್ಮನಾಬಾದ್ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಈ ನಗದು ಲೋಕಮಂಗಲ ಬ್ಯಾಂಕ್‌ಗೆ ಸೇರಿದ್ದಾಗಿದೆ ಎಂದು ಸಿಬ್ಬಂದಿ ಸಮುಜಾಯಿಷಿ ನೀಡಿದ್ದಾರೆ. ಆದರೆ ಸಹಕಾರ ಸಚಿವ ದೇಶಮುಖ್, ಲೋಕಮಂಗಲ ಸಮೂಹದ ಸಕ್ಕರೆ ಕಾರ್ಖಾನೆಯೊಂದರ ಸಿಬ್ಬಂದಿಗೆ ವೇತನ ಪಾವತಿ ಮಾಡಲು ಪಡೆದ ನಗದು ಎಂದು ವಿಭಿನ್ನ ಹೇಳಿಕೆ ನೀಡಿದ್ದಾರೆ.
ವಾಹನವನ್ನು ಉಮರ್ಗಾದಲ್ಲಿ ವಶಕ್ಕೆ ಪಡೆಯಲಾಗಿದ್ದು, ನಗದು ಹಣವನ್ನು ಸ್ಥಳೀಯ ಖಜಾನೆಯಲ್ಲಿ ಠೇವಣಿ ಇಡಲಾಗಿದೆ. "ಉದ್ಯಮ ಸಮೂಹದಿಂದ ನಾವು ಸ್ಪಷ್ಟನೆ ಕೋರಿದ್ದೇವೆ. ಆದಾಯ ತೆರಿಗೆ ಅಧಿಕಾರಿಗಳು ಹಾಗೂ ಪೊಲೀಸರಿಗೂ ಇದನ್ನು ಗಮನಕ್ಕೆ ತರಲಾಗಿದೆ. ಸಮೂಹವು ಸೂಕ್ತ ಸಮರ್ಥನೆ ನೀಡಿದಲ್ಲಿ ವಾಪಸ್ಸು ಮಾಡಲಾಗುತ್ತದೆ. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ನಾಮವರ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ಕೋರಿ ಕೇಳಿದ ಎಸ್‌ಎಂಎಸ್ ಸಂದೇಶಕ್ಕೆ ದೇಶಮುಖ್ ಪ್ರತಿಕ್ರಿಯಿಸಿಲ್ಲ. ಸಚಿವರನ್ನು ತಕ್ಷಣ ವಜಾ ಮಾಡಬೇಕು ಎಂದು ಎನ್‌ಸಿಪಿ ಆಗ್ರಹಿಸಿದೆ. ಉದ್ಯಮ ಸಮೂಹಕ್ಕೆ ನಿಧಿ ಕ್ರೋಢೀಕರಿಸುವ ವೇಳೆ ಅವ್ಯವಹಾರ ನಡೆದ ಆರೋಪದ ಬಗ್ಗೆ ಈ ಮೊದಲು ಸೆಬಿ, ಈ ಕಂಪನಿ ವಿರುದ್ಧ ತನಿಖೆ ನಡೆಸಿತ್ತು.