ಹಳೆ ನೋಟುಗಳಿಂದ ಬಿತ್ತನೆಬೀಜ ಖರೀದಿಸಲು ಅವಕಾಶ ಕೇಳಿದ ಕೃಷಿ ಸಚಿವ
ಹೊಸದಿಲ್ಲಿ, ನ.18: ರೈತರು ಕೃಷಿ ಸಾಲದ ಮೊತ್ತದಲ್ಲಿ ವಾರಕ್ಕೆ 25 ಸಾವಿರ ರೂಪಾಯಿಯನ್ನು ಬ್ಯಾಂಕಿನಿಂದ ಪಡೆಯಲು ಕೇಂದ್ರ ಹಣಕಾಸು ಸಚಿವಾಲಯ ಒಪ್ಪಿಗೆ ನೀಡಿದೆ. ಆದರೆ ಹಳೆಯ 500 ಹಾಗೂ 1000 ರೂಪಾಯಿ ನೋಟುಗಳನ್ನು ಬಳಸಿ ರೈತರು ಬಿತ್ತನೆ ಬೀಜ ಖರೀದಿಸಲು ಅನುಮತಿ ನೀಡಬೇಕು ಎಂಬ ಕೃಷಿ ಸಚಿವಾಲಯದ ಬೇಡಿಕೆಯನ್ನು ಹಣಕಾಸು ಸಚಿವಾಲಯ ತಳ್ಳಿಹಾಕಿದೆ.
ಹಳೆಯ ನೋಟುಗಳಲ್ಲಿ ಬಿತ್ತನೆಬೀಜ ಖರೀದಿಗೆ ಅವಕಾಶ ನೀಡಬೇಕು ಎಂಬ ಪ್ರಸ್ತಾವ ಕೃಷಿ ಸಚಿವಾಲಯದಿಂದ ಬಂದಾಗ, ಆರ್ಥಿಕ ವ್ಯವಹಾರಗಳ ಇಲಾಖೆ, ಜನಧನ ಖಾತೆಗಳಲ್ಲಿ ಹಣ ಕ್ರೋಢೀಕರಣವಾಗುತ್ತಿರುವ ನಿದರ್ಶನವನ್ನು ನೀಡಿ, ಇದು ಕಪ್ಪುಹಣದ ಚಲಾವಣೆಗೆ ಅವಕಾಶವಾಗುತ್ತದೆ ಎಂಬ ಕಾರಣಕ್ಕೆ ಕೃಷಿ ಇಲಾಖೆಯ ಪ್ರಸ್ತಾವವನ್ನು ತಿರಸ್ಕರಿಸಿತು.
ಗ್ರಾಮೀಣ ಭಾಗಗಳಲ್ಲಿ 16 ಕೋಟಿ ಜನಧನ ಖಾತೆಗಳು ಸಕ್ರಿಯವಾಗಿ ಇರುವುದರಿಂದ, ರೈತರು ಹಣ ವಿನಿಮಯ ಮಾಡಿಕೊಳ್ಳಲು ಅಥವಾ ಬಿತ್ತನೆಬೀಜ ಹಾಗೂ ಗೊಬ್ಬರ ಖರೀದಿಗೆ ಇದನ್ನು ಬಳಸಿಕೊಳ್ಳಬಹುದು ಎಂದು ಆರ್ಥಿಕ ವ್ಯವಹಾರಗಳ ಇಲಾಖೆ ಸ್ಪಷ್ಟನೆ ನೀಡಿತು.
ಮೋಹನ ಸಿಂಗ್ ಅವರು ನವೆಂಬರ್ 15ರಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದು, ವಿಮಾನಯಾನ, ರೈಲ್ವೆ, ಪೆಟ್ರೋಲ್ ಬಂಕ್ ಹಾಗೂ ಆಸ್ಪತ್ರೆಗಳಿಗೆ ನೀಡಿದ ವಿನಾಯ್ತಿಯಂತೆ ಸರ್ಕಾರದ ಅಧೀನದಲ್ಲಿರುವ ಬೀಜ ಮಾರಾಟ ಸಂಸ್ಥೆಗಳಿಗೂ ಈ ವಿನಾಯ್ತಿ ವಿಸ್ತರಿಸಬೇಕು. ನವೆಂಬರ್ 24ರವರೆಗೂ ಹಿಂಗಾರು ಹಂಗಾಮಿಗಾಗಿ ಬಿತ್ತನೆ ಬೀಜ ಖರೀದಿಗೆ ಅವಕಾಶ ನೀಡಬೇಕು ಎಂದು ಕೋರಿದ್ದರು.