×
Ad

ಬ್ಯಾಂಕ್ ಲಾಕರ್ ಸೀಲ್ ಮಾಡುವ,ಚಿನ್ನಾಭರಣ ವಶಪಡಿಸಿಕೊಳ್ಳುವ ಉದ್ದೇಶವಿಲ್ಲ:ವಿತ್ತ ಸಚಿವಾಲಯ

Update: 2016-11-18 15:32 IST

ಹೊಸದಿಲ್ಲಿ,ನ.18: ಸರಕಾರವು ಕಪ್ಪುಹಣದ ವಿರುದ್ಧದ ಮುಂದಿನ ಭಾಗವಾಗಿ ಬ್ಯಾಂಕ್ ಲಾಕರ್‌ಗಳನ್ನು ಸೀಲ್ ಮಾಡಲಿದೆ ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಿದೆ ಎಂಬ ವ್ಯಾಪಕ ವದಂತಿಗಳು ಹರಡಿರುವ ಹಿನ್ನೆಲೆಯಲ್ಲಿ ವಿತ್ತ ಸಚಿವಾಲಯವು, ಅಂತಹ ಯಾವುದೇ ಉದ್ದೇಶವನ್ನು ಸರಕಾರವು ಹೊಂದಿಲ್ಲ ಎಂದು ಇಂದು ಸ್ಪಷ್ಟಪಡಿಸಿದೆ. ಇದೇ ವೇಳೆ ಕೆಲವು ಪ್ರಕರಣಗಳಲ್ಲಿ ಹೊಸ 2,000 ನೋಟುಗಳು ಬಣ್ಣ ಬಿಟ್ಟಿವೆ ಎನ್ನುವುದು ನಿಜವಲ್ಲ ಎಂದು ಅದು ಹೇಳಿದೆ.

 ಬ್ಯಾಂಕ್ ಲಾಕರ್‌ಗಳನ್ನು ಸೀಲ್ ಮಾಡಲಾಗುತ್ತದೆ ಮತ್ತು ಚಿನ್ನಾಭರಣ,ವಜ್ರ ಇತ್ಯಾದಿ ಅಮೂಲ್ಯ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತದೆ ಎನ್ನುವುದು ಸಂಪೂರ್ಣ ಆಧಾರರಹಿತವಾಗಿದೆ. ಅಂತಹ ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಸಚಿವಾಲಯವು ಟ್ವೀಟಿಸಿದೆ.

ಹೊಸ 2,000 ರೂ.ನೋಟುಗಳು ‘ಇನ್‌ಟ್ಯಾಗ್ಲಿಯೊ ’ ಎಂಬ ವಿಶೇಷ ಸುರಕ್ಷತಾ ಲಕ್ಷಣವನ್ನು ಹೊಂದಿದ್ದು,ಅಸಲಿ ನೋಟನ್ನು ಗುರುತಿಸಲು ಅದನ್ನು ಬಟ್ಟೆಯ ಮೇಲೆ ಉಜ್ಜಿದಾಗ ‘ಟರ್ಬೋ ಇಲೆಕ್ಟ್ರಿಕ್’ ಪರಿಣಾಮದಿಂದಾಗಿ ನೋಟಿನ ಮಸಿಯು ಬಟ್ಟೆಗೆ ವರ್ಗಾವಣೆಗೊಳ್ಳುತ್ತದೆ ಎಂದೂ ಸಚಿವಾಲಯವು ಸ್ಪಷ್ಟಪಡಿಸಿದೆ.

     ಹಿರಿಯ ಸಚಿವರೊಂದಿಗೆ ಪ್ರಧಾನಿ ಸಭೆ

ಸಂಸತ್‌ನಲ್ಲಿ ಸರಕಾರದ ಕಾರ್ಯತಂತ್ರವನ್ನು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಇಲ್ಲಿ ಹಿರಿಯ ಸಚಿವರೊಂದಿಗೆ ಸಭೆಯೊಂದನ್ನು ನಡೆಸಿದರು. ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್,ವಿತ್ತಸಚಿವ ಅರುಣ್ ಜೇಟ್ಲಿ ಮತ್ತು ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

ಲೋಕಸಭೆ ಮಂದೂಡಿಕೆ

ತನ್ಮಧ್ಯೆ ಪ್ರತಿಪಕ್ಷವು ನಿಲುವಳಿ ನೋಟಿಸ್ ಮಂಡನೆಯ ಮೂಲಕವೇ ನೋಟು ನಿಷೇಧ ವಿಷಯದ ಚರ್ಚೆಗೆ ಪಟ್ಟು ಹಿಡಿದ ಬಳಿಕ ಲೋಕಸಭೆಯನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಬೆಳಿಗ್ಗೆ ಸದನವು ಸಮಾವೇಶಗೊಂಡ ಬೆನ್ನಿಗೇ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು,ನೋಟು ರದ್ದತಿ ವಿಷಯವನ್ನು ನಿಲುವಳಿ ಸೂಚನೆಯ ಮೂಲಕ ಚರ್ಚಿಸಬೇಕು ಮತ್ತು ಸರಕಾರವು ಪ್ರಸ್ತಾಪಿಸಿರುವ ನಿಯಮಕ್ಕನುಗುಣವಾಗಲ್ಲ ಎಂದು ಆಗ್ರಹಿಸಿದರು.

ವಿಷಯದ ಚರ್ಚೆಗೆ ಸರಕಾರವು ಸಿದ್ಧವಿದೆ ಮತ್ತು ನಿಲುವಳಿ ಸೂಚನೆಗಾಗಿ ಆಗ್ರಹಿಸುವ ಅಗತ್ಯವಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಹೇಳಿದರು.

ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಇಡೀ ದೇಶವೇ ಪ್ರಧಾನಿ ನರೇಂದ್ರ ಮೋದಿಯವರ ಬೆನ್ನಿಗೆ ನಿಂತುಕೊಂಡಿದೆ ಎಂದು ಅವರು ಹೇಳಿದಾಗ,ಪ್ರತಿಪಕ್ಷಗಳ ಸದಸ್ಯರು ಒಟ್ಟಾಗಿ ಘೋಷಣೆಗಳನ್ನು ಕೂಗಿದರಲ್ಲದೆ ಸದನದ ಅಂಗಳಕ್ಕೆ ಧಾವಿಸಿದರು.

ನಿಮಗೆ ಸದನ ನಡೆಯುವುದು ಬೇಕಾಗಿಲ್ಲ ಎಂದು ಸದಸ್ಯರನ್ನುದ್ದೇಶಿಸಿ ಹೇಳಿದ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು,ಅಪರಾಹ್ನ 12 ಗಂಟೆಯವರೆಗೆ ಮುಂದೂಡಿದರು.

ಸದನವು ಮರುಸಮಾವೇಶಗೊಂಡಾಗಲೂ ಪ್ರತಿಪಕ್ಷ ಸದಸ್ಯರು ತಮ್ಮ ಪ್ರತಿಭಟನೆ ಯನ್ನು ಮುಂದುವರಿಸಿದಾಗ ದಿನದ ಮಟ್ಟಿಗೆ ಮುಂದೂಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News