ಸಂಕಷ್ಟ ಇದೇ ರೀತಿ ಮುಂದುವರಿದರೆ ಗಲಭೆ ಸಾಧ್ಯತೆ:ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಎಚ್ಚರಿಕೆ
ಹೊಸದಿಲ್ಲಿ,ನ.18: ಜನರು ‘ದಂಗೆ ಏಳಬಹುದು ’ ಎಂದು ಶುಕ್ರವಾರ ಸರಕಾರಕ್ಕೆ ಎಚ್ಚರಿಕೆ ನೀಡಿದ ಸರ್ವೋಚ್ಚ ನ್ಯಾಯಾಲಯವು, ನೋಟು ನಿಷೇಧದ ವಿರುದ್ಧ ದೇಶಾದ್ಯಂತ ಉಚ್ಚ ನ್ಯಾಯಾಲಯಗಳು ಮತ್ತು ಕೆಳ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ತಡೆ ನೀಡಬೇಕೆಂಬ ಸರಕಾರದ ಮನವಿಯನ್ನು ತಿರಸ್ಕರಿ ಸಿದೆ.
ಇಷ್ಟೊಂದು ಅಗಾಧ ಸಮಸ್ಯೆಯಿರುವಾಗ ನಾವು ನ್ಯಾಯಾಲಯದ ಬಾಗಿಲುಗಳನ್ನು ಮುಚ್ಚಲು ಹೇಗೆ ಸಾಧ್ಯ ಎಂದು ಅದು ಪ್ರಶ್ನಿಸಿದೆ. ಗಂಟೆಗಟ್ಟಲೆ ಕಾಲ ಹಣಕ್ಕಾಗಿ ಸರದಿಸಾಲುಗಳಲ್ಲಿ ನಿಂತು ಜನರು ಉದ್ವೇಗಕ್ಕೆ ಒಳಗಾಗುತ್ತಿದ್ದರೆ ಎಂದು ಹೇಳಿದ ಮುಖ್ಯ ನ್ಯಾಯಾಧೀಶ ಟಿ.ಎಸ್.ಠಾಕೂರ್ ನೇತೃತ್ವದ ಪೀಠವು, ಎಲ್ಲೆಡೆಗಳಲ್ಲಿ ನ್ಯಾಯಾಲಯಗಳಲ್ಲಿ ಪ್ರಕರಣಗಳು ದಾಖಲಾಗಿರುವುದು ಸಮಸ್ಯೆಯು ಎಷ್ಟೊಂದು ಗಂಭೀರ ಮತ್ತು ಅಗಾಧವಾಗಿದೆ ಎನ್ನುವುದಕ್ಕೆ ಸಂಕೇತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಜನರು ಪರಿಹಾರಕ್ಕಾಗಿ ನ್ಯಾಯಾಲಯಗಳಿಗೆ ಧಾವಿಸುತ್ತಿದ್ದಾರೆ. ನಾವು ಅವರಿಗೆ ನಮ್ಮ ಬಾಗಿಲುಗಳನ್ನು ಮುಚ್ಚುವದು ಸಾಧ್ಯವಿಲ್ಲ ಎಂದು ಮು.ನ್ಯಾ.ಠಾಕೂರ್ ಬೆಟ್ಟು ಮಾಡಿದರು.
ದಿಲ್ಲಿಗೆ ಪ್ರಕರಣಗಳ ವರ್ಗಾವಣೆ ವಿಷಯಕ್ಕೆ ಸೀಮಿತಗೊಂಡಂತೆ ಮಾತ್ರ ತಾನು ಸರಕಾರದ ಮನವಿಯನ್ನು ಪರಿಗಣಿಸಬಹುದಾಗಿದೆ ಎಂದು ನ್ಯಾ.ಎ.ಆರ್.ದವೆ ಅವರನ್ನೂ ಒಳಗೊಂಡ ಪೀಠವು ಸ್ಪಷ್ಟಪಡಿಸಿತು.
ಪರಿಸ್ಥಿತಿ ಗಂಭೀರವಾಗಿದೆ, ಜನರು ದಂಗೆಯೇಳಬಹುದು ಎಂಬ ನ್ಯಾಯಾಲಯದ ಆತಂಕಕ್ಕೆ ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರು, ಅಂತಹ ಉದ್ವಿಗ್ನ ಸ್ಥಿತಿ ಸೃಷ್ಟಿಯಾಗಿಲ್ಲ. ಹಾಗೆನ್ನುವುದು ಸಂಪೂರ್ಣ ತಪ್ಪಾಗುತ್ತದೆ. ಜನರು ಸಹನೆಯಿಂದ ಸರದಿ ಸಾಲುಗಳಲ್ಲಿ ಕಾಯುತ್ತಿದ್ದಾರೆ ಎಂದು ಹೇಳಿದರು.
ಇದಕ್ಕೆ ತೀಕ್ಷ್ಣವಾಗಿ ಉತ್ತರಿಸಿದ ಮು.ನ್ಯಾ.ಠಾಕೂರ್ ಅವರು,ಇಲ್ಲ,ಜನರು ಸಂಕಷ್ಟದಲ್ಲಿದ್ದಾರೆ. ಸಮಸ್ಯೆಗಳಿವೆ ಮತ್ತು ಅವುಗಳನ್ನು ನೀವು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು.
ನ.8ರಂದು ನೋಟು ನಿಷೇಧ ಕ್ರಮದ ಬಳಿಕ ಅದರ ಪರಿಣಾಮವಾಗಿ 47 ಜನರು ಮೃತಪಟ್ಟಿದ್ದಾರೆ ಎಂದು ಹಿರಿಯ ನ್ಯಾಯವಾದಿ ಕಪಿಲ ಸಿಬಲ್ ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಜನರ ಸಮಸ್ಯೆಗಳ ಬಗ್ಗೆ ನಮಗೆ ಕಾಳಜಿಯಿಲ್ಲದಿದ್ದರೆ ದಿನಕ್ಕೆ,ಗಂಟೆಗೆ ಅಧಿಸೂಚನೆ ಗಳನ್ನು ಹೊರಡಿಸುತ್ತಿದ್ದೇವೆಯೇ? ದಿನದಿಂದ ದಿನಕ್ಕೂ ಸರದಿ ಸಾಲುಗಳಲ್ಲಿ ನಿಲ್ಲುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ರೋಹಟ್ಗಿ ಸಮರ್ಥಿಸಿಕೊಂಡರು.
ಸಾಕಷು ನಗದುಹಣದ ವ್ಯವಸ್ಥೆಯನ್ನು ಮಾಡಲು ಸರಕಾರಕ್ಕೇನು ಸಮಸ್ಯೆ? 100 ರೂ.ನೋಟುಗಳ ಕೊರತೆಯೇನಾದರೂ ಇದೆಯೇ? ಅವುಗಳನ್ನು ನಿಷೇಧಿಸಲಾಗಿಲ್ಲ. ಕನಿಷ್ಠ ಅವುಗಳನ್ನಾದರೂ ಏಕೆ ಲಭ್ಯವಾಗಿಸುತ್ತಿಲ್ಲ ಎಂದು ಮು.ನ್ಯಾ.ಠಾಕೂರ್ ಪ್ರಶ್ನಿಸಿದರು.
100 ರೂ.ನೋಟುಗಳ ಕೊರತೆಯಿದೆ ಎಂದು ಒಪ್ಪಿಕೊಂಡ ರೋಹಟ್ಗಿ, ಈಗ ರದ್ದುಗೊಂಡಿರುವ 500 ಮತ್ತು 1,000 ರೂ.ನೋಟುಗಳು ದೇಶದ ಕರೆನ್ಸಿಯಲ್ಲಿ ಶೇ.86ರಷ್ಟು ಪಾಲು ಹೊಂದಿದ್ದವು ಎಂದರು. ಇದೇ ವೇಳೆ ನಗದು ಹಣದ ಕೊರತೆಯನ್ನು ನಿರಾಕರಿಸಿದ ಅವರು, ಟಂಕಸಾಲೆಗಳಿಂದ ದೇಶಾದ್ಯಂತದ ಅಂಚೆ ಕಚೇರಿಗಳು, ಬ್ಯಾಂಕುಗಳು,ಎಟಿಎಂ ಇತ್ಯಾದಿಗಳಿಗೆ ಹಣ ತಲುಪಿಸುವುದರಲ್ಲಿ ತೊಂದರೆಯಾಗುತ್ತಿದೆ ಅಷ್ಟೇ ಎಂದು ಹೇಳಿದರು.
ನೋಟು ನಿಷೇಧದ ಬಳಿಕದ ವಸ್ತುಸ್ಥಿತಿ ಮತ್ತು ಜನರ ಸಂಕಷ್ಟಗಳನ್ನು ಬಿಂಬಿಸುವ ವಾಸ್ತವಾಂಶಗಳು ಹಾಗೂ ಅಂಕಿಸಂಖ್ಯೆಗಳನ್ನು ನ.25ರಂದು ತನಗೆ ಸಲ್ಲಿಸುವಂತೆ ನ್ಯಾಯಾಲಯವು ರೋಹಟ್ಗಿ ಮತ್ತು ಸಿಬಲ್ ಅವರಿಗೆ ಸೂಚಿಸಿದೆ.