ಮುಹಮ್ಮದ್ ಶಮಿ ‘ಸರ್ಜಿಕಲ್ ದಾಳಿಗೆ’ ಎರಡು ತುಂಡಾದ ಅಲಿಸ್ಟರ್ ಕುಕ್ ವಿಕೆಟ್

Update: 2017-01-17 08:25 GMT

ವಿಶಾಖಪಟ್ಟಣ, ನ.18: ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ಎರಡನೆ ಟೆಸ್ಟ್ ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ಅವರ ‘ಸರ್ಜಿಕಲ್ ದಾಳಿ’ಗೆ ವಿಕೆಟ್ ಎರಡು ಹೋಳಾದ ಘಟನೆ ನಡೆದಿದೆ. ಶಮಿಯ ದಾಳಿಗೆ ಬೆಲೆ ತೆತ್ತವರು ಇಂಗ್ಲೆಂಡ್‌ನ ಆರಂಭಿಕ ದಾಂಡಿಗ ಅಲೆಸ್ಟೈರ್ ಕುಕ್.

 2ನೆ ಟೆಸ್ಟ್‌ನಲ್ಲಿ ಭಾರತದ 455 ರನ್‌ಗೆ ಇಂಗ್ಲೆಂಡ್ ತಂಡ ಉತ್ತರಿಸತೊಡಗಿದ್ದಾಗ ಈ ಘಟನೆ ನಡೆದಿದೆ. ಇನಿಂಗ್ಸ್‌ನ ಮೂರನೆ ಓವರ್‌ನ 3ನೆ ಎಸೆತದಲ್ಲಿ ಕೋಲ್ಕತಾದ ವೇಗಿ ಶಮಿ ಈ ಪರಾಕ್ರಮ ಮೆರೆದರು. 3ನೆ ಓವರ್‌ನ ಮೊದಲೆರಡು ಎಸೆತ ಆಫ್ ಸ್ಟಂಪ್‌ನಿಂದ ಹೊರಗೆ ಹೋಗಿದ್ದವು. ಮೂರನೆ ಎಸೆತ ಸ್ಟಂಪ್‌ಗೆ ಅಪ್ಪಳಿಸಿತು. ಪರಿಣಾಮವಾಗಿ ಇಂಗ್ಲೆಂಡ್‌ನ ನಾಯಕ ಕುಕ್(2) ಪೆವಿಲಿಯನ್‌ಗೆ ವಾಪಸಾದರು.

ಶಮಿ ಎಸೆದ ಬೌಲಿಂಗ್‌ನಲ್ಲಿ ಚೆಂಡು ಸ್ಟಂಪ್‌ಗೆ ಅಪ್ಪಳಿಸಿದ ಪರಿಣಾಮ ಸ್ಟಂಪ್ ಎರಡು ಹೋಳಾಯಿತು. ಸ್ಟಂಪ್‌ನ ಒಂದು ಭಾಗ ದೂರಕ್ಕೆ ಎಸೆಯಲ್ಪಟ್ಟರೆ, ಮತ್ತೊಂದು ಭಾಗ ಮೈದಾನದಲ್ಲಿ ಉಳಿದಿತ್ತು. ದೂರಕ್ಕೆ ಎಸೆಯಲ್ಪಟ್ಟ ಸ್ಟಂಪ್‌ನ ತುಂಡನ್ನು ಫೀಲ್ಡಿಂಗ್ ನಿರತ ಅಜಿಂಕ್ಯ ರಹಾನೆ ಹೆಕ್ಕಿಕೊಂಡು ಬಂದರು.

ಶಮಿ ಅವರು ಕುಕ್‌ರನ್ನು ಬೇಗನೆ ಔಟ್ ಮಾಡಿ ಭಾರತಕ್ಕೆ ಉತ್ತಮ ಆರಂಭ ನೀಡಿದ್ದರು. ಆಂಗ್ಲರು 4 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡರು. ದಿನದಾಟದಂತ್ಯಕ್ಕೆ 103 ರನ್‌ಗೆ 5 ವಿಕೆಟ್ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News