60 ಕಿ.ಮೀ ನಡೆದುಕೊಂಡು ಹೋಗಿ ಬ್ಯಾಂಕಿಗೆ ಹಣ ಹಾಕುತ್ತಿರುವ ಕಾರ್ಮಿಕರು
ನಾರಾಯಣಪುರ(ಛತ್ತೀಸ್ ಗಡ),ನ.18: 500,1000 ರೂ. ನೋಟುಗಳ ರದ್ದತಿ ಬಳಿಕ ದೇಶದೆಲ್ಲೆಡೆ ಗ್ರಾಮೀಣ ಪ್ರದೇಶಗಳ ಬಡವರು, ರೈತರು ಹಾಗೂ ಕಾರ್ಮಿಕರು ತಮ್ಮ ದಿನನಿತ್ಯದ ಖರ್ಚು ವೆಚ್ಚಗಳಿಗೆ ಹಣವಿಲ್ಲದೆ ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ.
ಛತ್ತೀಸ್ ಗಡದ ನಾರಾಯನಪುರದ ಗ್ರಾಮೀಣ ಪ್ರದೇಶಗಳ ಕಾರ್ಮಿಕರಿಗೆ ಈಗ ತೀವ್ರ ಸಂಕಷ್ಟದ ಪರಿಸ್ಥಿತಿಯೆದುರಾಗಿದೆ.
ತಾವು ಕಷ್ಟ ಪಟ್ಟು ದುಡಿದು ಸಂಪಾದಿಸಿದ ಹಣವನ್ನು 60 ರಿಂದ 70 ಕಿ.ಮೀ ನಡೆದುಕೊಂಡೇ ಹೋಗಿ ಒಂದೆರಡು ರಾತ್ರಿಗಳನ್ನು ಕಂಡ ಕಂಡಲ್ಲಿ ಮಲಗಿ ಬ್ಯಾಂಕಿಗೆ ಹಾಕುವ ಪರಿಸ್ಥಿತಿ ಅವರಿಗೆ ಬಂದೊದಗಿದೆ.
ಬ್ಯಾಂಕುಗಳಿಗೆ ಬೆಳಗ್ಗೆ ಹೋಗಲು ರಾತ್ರಿಯೇ ತಲುಪಿ ಸ್ಥಳ ಸಿಕ್ಕಿದಲ್ಲಿ ಮಲಗಬೇಕಾದ ಅನಿವಾರ್ಯತೆ ಇದೆ. ಬ್ಯಾಂಕುಗಳಲ್ಲೂ ಉದ್ದುದ್ದ ಸರತಿ ಸಾಲುಗಳಲ್ಲಿ ನಿಂತ ಬಳಿಕ ಫಾರ್ಮ್ ತುಂಬುವ ಸಮಸ್ಯೆ ಅವರಿಗೆ ಎದುರಾಗುತ್ತಿದೆ. ಎಟಿಎಂಗಳಲ್ಲಿ ಹೆಚ್ಚಿನವು ಹಣವಿಲ್ಲದೆ ಬಂದಾಗಿವೆ.
ಛತ್ತೀಸ್ ಗಡದಲ್ಲಿ ಸಹಕಾರಿ ಬ್ಯಾಂಕುಗಳಲ್ಲಿ ಹಣ ಹಾಕಲು ಹಾಗೂ ಹೊಸ ನೋಟು ಪಡೆಯಲು ಅನುಮತಿ ನಿರಾಕರಿಸಿರುವುದರಿಂದ ಪರಿಸ್ಥಿತಿ ಇನ್ನಷ್ಟು ಜಟಿಲವಾಗಿದೆ.