×
Ad

ಇಂದೋರ್-ಪಟ್ನಾ ಎಕ್ಸಪ್ರೆಸ್‌ನ 14 ಬೋಗಿಗಳು ಹಳಿ ತಪ್ಪಿ 112ಕ್ಕೂ ಅಧಿಕ ಸಾವು

Update: 2016-11-20 08:51 IST

200ಕ್ಕೂ ಹೆಚ್ಚಿನ ಜನರಿಗೆ ಗಾಯ,ವಿವಿಧ ಆಸ್ಪತ್ರೆಗಳಿಗೆ ದಾಖಲು

ಪುಖರಾಯಾಂ(ಉ.ಪ್ರ),ನ.20: ಇತ್ತೀಚಿನ ವರ್ಷಗಳಲ್ಲಿಯೇಅತ್ಯಂತ ಭೀಕರ ರೈಲು ದುರಂತ ರವಿವಾರ ನಸುಕಿನಲ್ಲಿ ಕಾನಪುರ ಗ್ರಾಮೀಣ ಜಿಲ್ಲೆಯ ಪುಖರಾಯಾಂ ಸಮೀಪ ಸಂಭವಿಸಿದೆ. ಇಂದೋರ್-ಪಟ್ನಾ ಎಕ್ಸಪ್ರೆಸ್ ರೈಲಿನ 14 ಬೋಗಿಗಳು ಹಳಿ ತಪ್ಪಿದ ಪರಿಣಾಮ 112ಕ್ಕೂ ಅಧಿಕ ಪ್ರಯಾಣಿಕರು ದಾರುಣ ಸಾವನ್ನಪ್ಪಿದ್ದು, 200ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಈ ಪೈಕಿ ಅರ್ಧಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ. ರೈಲುಹಳಿಗಳಲ್ಲಿನ ಬಿರುಕು ಈ ಅವಘಡಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.

 ನಸುಕಿನ ಮೂರು ಗಂಟೆ ಕಳೆದ ಕೆಲವೇ ಕ್ಷಣಗಳಲ್ಲಿ ಪ್ರಯಾಣಿಕರು ಗಾಢನಿದ್ರೆಯಲ್ಲಿ ದ್ದಾಗ ಈ ಅಪಘಾತ ಸಂಭವಿಸಿದೆ. ಎಸ್1ರಿಂದ ಎಸ್4 ರವರೆಗಿನ ನಾಲ್ಕು ಸಾಮಾನ್ಯ ದರ್ಜೆಯ ಬೋಗಿಗಳಿಗೆ ತೀವ್ರ ಹಾನಿಯುಂಟಾಗಿದ್ದು, ಎಸ್1 ಮತ್ತು ಎಸ್2 ಬೋಗಿಗಳು ಒಂದರೊಳಗೊಂದು ತೂರಿಕೊಂಡಿದ್ದವು. ಇವರಡು ಬೋಗಿಗಳಲ್ಲಿ ಹೆಚ್ಚಿನ ಸಂಖ್ಯೆಯ ಸಾವುಗಳು ಸಂಭವಿಸಿವೆ ಎನ್ನಲಾಗಿದೆ.

ಎಸಿ 3-ಟೈರ್ ಬೋಗಿಯೊಂದಕ್ಕೂ ಭಾರೀ ಹಾನಿಯುಂಟಾಗಿದೆಯಾದರೂ, ಅದರಲ್ಲಿದ್ದ ಹೆಚ್ಚಿನ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಬೋಗಿಗಳು ಹಳಿತಪ್ಪಿದಾಗ ಭಾರೀ ಶಬ್ದವುಂಟಾಗಿದ್ದು, ಪ್ರಯಾಣಿಕರು ನಿದ್ರೆಯಿಂದ ಎಚ್ಚೆತ್ತಾಗ ಬೋಗಿಗಳ ಅವಶೇಷಗಳ ನಡುವೆ ಸಿಕ್ಕಿಬಿದ್ದಿದ್ದರು. ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿದ ರಕ್ಷಣಾ ಕಾರ್ಯಕರ್ತರು ಅವರನ್ನು ಹೊರಕ್ಕೆ ತೆಗೆದು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರತಿ ಗಂಟೆಗೂ ಸಾವಿನ ಸಂಖ್ಯೆ ಏರುತ್ತಲೇ ಇದ್ದು,ಸಂಜೆಯವರೆಗೆ 112 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಕಾನಪುರ ವಿಭಾಗಾಧಿಕಾರಿ ಎಸ್.ಮೊಹಮ್ಮದ್ ಇಫ್ತಿಕಾರುದ್ದೀನ್ ಅವರು ತಿಳಿಸಿದರು.

76 ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಇತರ 150 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಕಾನಪುರ ವಲಯದ ಐಜಿ ಝಕಿ ಅಹ್ಮದ್ ಹೇಳಿದರು. 150ಕ್ಕೂ ಅಧಿಕ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಜಾಗ್ರತ ಸ್ಥಿತಿಯಲ್ಲಿರುವಂತೆ ಎಲ್ಲ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ. 30ಕ್ಕೂ ಅಧಿಕ ಆ್ಯಂಬುಲನ್ಸ್‌ಗಳನ್ನು ನಿಯೋಜಿಸಲಾಗಿದೆ ಎಂದು ಅವರು ವಿವರಿಸಿದರು.

ರೈಲು ಹಳಿಯಲ್ಲಿನ ಬಿರುಕು ಅಪಘಾತಕ್ಕೆ ಕಾರಣವಾಗಿರುವಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಘಟನಾ ಸ್ಥಳದಲ್ಲಿದ್ದ ಸಹಾಯಕ ರೈಲ್ವೆ ಸಚಿವ ಮನೋಜ್ ಸಿನ್ಹಾ ಅವರು ಸುದ್ದಿಗಾರರಿಗೆ ತಿಳಿಸಿದರು. ರೈಲ್ವೆ ಮಂಡಳಿಯ ಸದಸ್ಯರು(ಇಂಜಿನಿಯರಿಂಗ್) ಅಪಘಾತಕ್ಕೆ ಕಾರಣವನ್ನು ಕಂಡುಕೊಳ್ಳುತ್ತಾರೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಗಳನ್ನು ಜರುಗಿಸಲಾಗುವುದು ಎಂದರು.

ಗ್ಯಾಸ್ ಕಟರ್‌ಗಳು ಅತಿಯಾದ ಉಷ್ಣತೆ ಮತ್ತು ಉಸಿರುಗಟ್ಟುವಿಕೆಗೆ ಕಾರಣವಾದ ಬಳಿಕ ರಕ್ಷಣಾ ಕಾರ್ಯಕರ್ತರು ಕೋಲ್ಡ್ ಕಟರ್‌ಗಳನ್ನು ಬಳಸಿ ಬೋಗಿಗಳ ಕವಚಗಳನ್ನು ಕತ್ತರಿಸಿ ಅವುಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಿಸಿದರು. ಸೇನೆಯ ವೈದ್ಯರು, ರೈಲ್ವೆ ಅಧಿಕಾರಿಗಳು, ಎನ್‌ಡಿಆರ್‌ಎಫ್ ಸಿಬ್ಬಂದಿಗಳು, ಪ್ರಾಂತೀಯ ಸಶಸ್ತ್ರ ಪೊಲೀಸ್ ಪಡೆ, ಇತರ ಪೊಲೀಸರು ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ಭಾಗಿಯಾಗಿದ್ದರು.

ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಸುರೇಶ ಪ್ರಭು, ಉ.ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ ಮತ್ತು ಇತರ ಹಲವಾರು ನಾಯಕರು ಈ ದುರಂತದಲ್ಲಿ ಮೃತಪಟ್ಟವರಿಗಾಗಿ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ.

43 ಮೃತರ ಗುರುತು ಪತ್ತೆ
 ಮೃತರ ಪೈಕಿ ಸಂಜೆಯವರೆಗೆ 43 ಜನರನ್ನು ಗುರುತಿಸಲಾಗಿದ್ದು, ಈ ಪೈಕಿ 20 ಜನರು ಉತ್ತರ ಪ್ರದೇಶ,15 ಜನರು ಮಧ್ಯಪ್ರದೇಶ ಮತ್ತು ಆರು ಜನರು ಬಿಹಾರಕ್ಕೆ ಸೇರಿದವ ರಾಗಿದ್ದರೆ,ಇಬ್ಬರು ಮಹಾರಾಷ್ಟ್ರದವರಾಗಿದ್ದಾರೆ. ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಮೃತದೇಹಗಳನ್ನು ಸಾಗಿಸಲು ಕುಟುಂಬ ವರ್ಗಗಳಿಗೆ ಆ್ಯಂಬುಲನ್ಸ್ ಸೌಲಭ್ಯಗಳನ್ನು ಒದಗಿಸಲಾಗಿದೆ.

ರಕ್ಷಣಾ ಸಿಬ್ಬಂದಿಗಳು ಬಲಿ
ಸೇನೆಯ ಯೋಧ ಪ್ರಭು ನಾರಾಯಣ ಸಿಂಗ್,ಬಿಹಾರದ ರೋಹ್ತಾಸ್ ಮೂಲದ ಬಿಎಸ್‌ಎಫ್ ಯೋಧ ಅನಿಲ ಕಿಶೋರ್ ಮತ್ತು ಝಾನ್ಸಿಯ ಪೊಲೀಸ್ ಕಾನ್‌ಸ್ಟೇಬಲ್ ಲಖನ್ ಸಿಂಗ್ ಮೃತರಲ್ಲಿ ಸೇರಿದ್ದಾರೆ.

ಪರಿಹಾರ ಘೋಷಣೆ

ಉ.ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ ಅವರು ದುರಂತದಲ್ಲಿ ಮೃತಪಟ್ಟವರಿಗೆ ತಲಾ ಐದು ಲಕ್ಷ.ರೂ ಪರಿಹಾರವನ್ನು ಘೋಷಿಸಿದ್ದಾರೆ. ಗಂಭೀರ ಗಾಯಾಳುಗಳಿಗೆ 50,000 ರೂ. ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ 25,000 ರೂ.ಗಳ ಪರಿಹಾರವನ್ನೂ ಅವರು ಪ್ರಕಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಮೃತರ ಕುಟುಂಬಗಳಿಗೆ ತಲಾ ಎರಡು ಲ.ರೂ.ಪರಿಹಾರವನ್ನು ಘೋಷಿಸಿದ್ದರೆ, ರೈಲ್ವೆ ಸಚಿವ ಸುರೇಶ ಪ್ರಭು ಅವರು ಪರಿಹಾರದ ಮೊತ್ತವನ್ನು 3.5 ಲ.ರೂ.ಗೆ ಹೆಚ್ಚಿಸಿದ್ದಾರೆ.

ಕಾನಪುರ ಅರ್ಬನ್‌ನಲ್ಲಿಯ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಗಾಯಾಳುಗಳನ್ನು ಭೇಟಿಯಾದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮೃತರ ಕುಟುಂಬಗಳಿಗೆ ಎರಡು ಲ.ರೂ. ಮತ್ತು ಗಾಯಾಳುಗಳಿಗೆ 50,000 ರೂ.ಪರಿಹಾರವನ್ನು ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News