ನೋಟು ರದ್ದು: ಗ್ರಾಮೀಣ ಭಾರತದಲ್ಲಿ ಆರ್ಥಿಕ ಚಟುವಟಿಕೆ ಸ್ತಬ್ಧ
ಡೆಹ್ರಾಡೂನ್, ನ.20: 500 ಹಾಗೂ 1000 ರೂಪಾಯಿ ನೋಟು ಅಮಾನ್ಯ ನಿರ್ಧಾರದ ಬಳಿಕ ಗ್ರಾಮೀಣ ಪ್ರದೇಶದ ಆರ್ಥಿಕ ಚಟುವಟಿಕೆಗಳು ಅಕ್ಷರಶಃ ಸ್ತಬ್ಧವಾಗಿದೆ. ದೈನಂದಿನ ಚಟುವಟಿಕೆಗಳಲ್ಲಿ 100 ರೂಪಾಯಿ ನೋಟುಗಳು ಲಭ್ಯವಾಗದಿರುವುದು ಇದಕ್ಕೆ ಮುಖ್ಯ ಕಾರಣ.
ಈ ಅಂಕಿಅಂಶವನ್ನು ಪರಿಶೀಲಿಸಿ. ಗ್ರಾಮೀಣ ಹಾಗೂ ಅರೆನಗರ ಪ್ರದೇಶದ ಪ್ರತಿ ಬ್ಯಾಂಕ್ ಶಾಖೆಗಳು, ನಗರ ಶಾಖೆಗಳು ಸೇವೆ ಸಲ್ಲಿಸುವ ಗ್ರಾಹಕರ ಸಂಖ್ಯೆಯ ದುಪ್ಪಟ್ಟು ಸಂಖ್ಯೆಯ ಮಂದಿಗೆ ಸೇವೆ ಸಲ್ಲಿಸುತ್ತಿವೆ. 2015ರ ಆರ್‌ಬಿಐ ವರದಿ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಶಾಖೆ ಸುಮಾರು 12683 ಮಂದಿಗೆ ಸೇವೆ ಸಲ್ಲಿಸುತ್ತಿದ್ದು, ನಗರಗಳಲ್ಲಿ ಪ್ರತಿ ಶಾಖೆ ಸರಾಸರಿ 5351 ಮಂದಿಗೆ ಸೇವೆ ಸಲ್ಲಿಸುತ್ತಿವೆ. ಆದರೆ ಎಟಿಎಂಗಳ ಸಂಖ್ಯೆ ನಗರಗಳಲ್ಲೇ ಅಧಿಕ. ಉದಾಹರಣೆಗೆ ದಿಲ್ಲಿಯಲ್ಲಿ 9070 ಎಟಿಎಂಗಳಿವೆ. ಇದು ಇಡೀ ರಾಜಸ್ತಾನದಲ್ಲಿ ಇರುವ ಎಟಿಎಂ ಸಂಖ್ಯೆಗಿಂತ ಅಧಿಕ.
ಎಂಎಸ್‌ಎಂಇ ಅಂಕಿ ಅಂಶಗಳ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ 200.18 ಲಕ್ಷ ನೋಂದಾಯಿತವಲ್ಲದ ಗ್ರಾಮೀಣ ಉತ್ಪಾದನಾ ಘಟಕಗಳಿವೆ. ಇದು ದೇಶದ ಒಟ್ಟು ಘಟಕಗಳ ಶೇಕಡ 55ರಷ್ಟು. ನಗರ ಪ್ರದೇಶಗಳ ಸಣ್ಣ ಕೈಗಾರಿಕಾ ಘಟಕಗಳು ಕೇವಲ 161.58 ಲಕ್ಷ.
ನಾಗ್ಪುರದ ಉದ್ಯಮಿ ಅಭಿತಾಬ್ ಮೆಹ್‌ಶ್ರಮ್ ಹೇಳುವಂತೆ, "ನಗದು ಕೊರತೆಯಿಂದಾಗಿ ನೀರು ಸರಬರಾಜು ಸಿಬ್ಬಂದಿಗೆ ವೇತನ ನೀಡಲು ಮತ್ತು ಒಂದು ಕಡೆಯಿಂದ ಇನ್ನೊಂದು ಕಡೆಗೆ ಒಯ್ಯುವ ವಾಹನಗಳಿಗೆ ಬಾಡಿಗೆ ನೀಡಲೂ ಸಾಧ್ಯವಾಗದೇ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿದೆ. ಒಂದು ಕೃಷಿ ಘಟಕವೂ ಇದ್ದು, ದೊಡ್ಡ ಪ್ರಮಾಣದ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಹಣ ಪಡೆಯದೇ ನೀಡಲಾಗಿದೆ".
ಹೀಗೆ ದೇಶದ ಎಲ್ಲೆಡೆ ಇಂಥ ವರದಿಗಳು ಸರಣಿಯೋಪಾದಿಯಲ್ಲಿ ಬರುತ್ತಿದ್ದು, ಗ್ರಾಮೀಣ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ.