ಸಂಸತ್ತಿನ ಸಿಬ್ಬಂದಿಗೆ ನಗದು ರೂಪದಲ್ಲಿ ಸಂಬಳ ಕೊಡಲು ಮುಂದಾದ ಸರ್ಕಾರ
* 5 ಕೋಟಿ ನಗದಿಗೆ ಬ್ಯಾಂಕ್‌ಗೆ ಬೇಡಿಕೆ
* ಜನರಿಗೆ ಗರಿಷ್ಠ ನಗದು ಮಿತಿ 50 ಸಾವಿರ!
ಹೊಸದಿಲ್ಲಿ, ನ.20: ಲೋಕಸಭೆ ಹಾಗೂ ರಾಜ್ಯಸಭಾ ಕಚೇರಿ ಭಾರತೀಯ ಸ್ಟೇಟ್ ಬ್ಯಾಂಕಿನ ಸಂಸತ್ ಭವನ ಶಾಖೆಗೆ ನವೆಂಬರ್ 21ರೊಳಗೆ 5 ಕೋಟಿ ರೂಪಾಯಿ ನಗದು ನೀಡುವಂತೆ ಕೋರಿದೆ. ಸಿಬ್ಬಂದಿಗೆ ಮುಂಗಡ ಸಂಬಳ ನೀಡುವ ಸಲುವಾಗಿ ಈ ಮನವಿ ಮಾಡಲಾಗಿದ್ದು, ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಸುಧೀರ್ ಮಲ್ಹೋತ್ರಾ ಈ ಬಗ್ಗೆ ಆರ್‌ಬಿಐ ಮಾರ್ಗದರ್ಶನ ಕೋರಿದ್ದಾರೆ.
ಇದನ್ನು ಮಲ್ಹೋತ್ರಾ ಖಚಿತಪಡಿಸಿದ್ದಾರೆ. "ಶುಕ್ರವಾರ ಈ ಮನವಿ ಸಲ್ಲಿಸಲಾಗಿದೆ. ಸಿಬ್ಬಂದಿಗೆ ತಲಾ 10 ಸಾವಿರ ರೂಪಾಯಿಯನ್ನು ನಗದು ರೂಪದಲ್ಲಿ ನೀಡಲು ನವೆಂಬರ್ 21ರೊಳಗೆ ಈ ವ್ಯವಸ್ಥೆ ಮಾಡುವಂತೆ ಕೋರಿದ್ದಾರೆ. ಈ ಮನವಿಯನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದು, ಅವರು ಆರ್‌ಬಿಐ ನಿರ್ದೇಶನಕ್ಕಾಗಿ ಕೋರಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ.
ಉಳಿತಾಯ ಖಾತೆದಾರರಿಗೆ 24 ಸಾವಿರ ಹಾಗೂ ಚಾಲ್ತಿಖಾತೆದಾರರಿಗೆ 50 ಸಾವಿರ ಪಾವತಿಸಲು ಮಾತ್ರ ಅವಕಾಶವಿದೆ ಎಂದು ಅವರು ಹೇಳಿದ್ದಾರೆ. ಸಾಮಾನ್ಯವಾಗಿ ಸಂಸತ್ ಭವನದ ಸಿಬ್ಬಂದಿಯ ಖಾತೆಗೆ ನೇರವಾಗಿ ವೇತನ ಪಾವತಿಯಾಗುತ್ತದೆ. ಸುಮಾರು 4 ಸಾವಿರ ಮಂದಿ ವೇತನ ಖಾತೆಯನ್ನು ಈ ಶಾಖೆಯಲ್ಲಿ ಹೊಂದಿದ್ದಾರೆ.
"ಜನರಿಗೆ ಆಗುತ್ತಿರುವ ತೊಂದರೆ ತಮ್ಮ ಸಿಬ್ಬಂದಿಗೆ ಆಗಬಾರದು ಎಂಬ ಕಾರಣಕ್ಕೆ ಬಹುಶಃ ಅಧಿಕಾರಿಗಳು ಈ ಮನವಿ ಮಾಡಿರಬೇಕು" ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದರು. ಸರ್ಕಾರ ವಾಸ್ತವವಾಗಿ ನಗದುರಹಿತ ವಹಿವಾಟು ಉತ್ತೇಜಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು. ಎಲ್ಲಕ್ಕಿಂತ ಹೆಚ್ಚಾಗಿ ಒಂದೇ ಶಾಖೆಯಿಂದ ಐದು ಕೋಟಿ ರೂಪಾಯಿ ನಗದು ಪಾವತಿಯನ್ನು ಸಮರ್ಥಿಸಿಕೊಳ್ಳುವುದು ಕಷ್ಟ ಎಂದು ಹೇಳಿದ್ದಾರೆ. ಅಂತಿಮ ನಿರ್ಧಾರ ಆರ್‌ಬಿಐನದ್ದು ಎಂದು ಸ್ಪಷ್ಟಪಡಿಸಿದ್ದಾರೆ.
ಈ ನಡೆಯನ್ನು ಲೋಕಸಭಾ ಕಚೇರಿಯ ವಕ್ತಾರರೂ ಖಚಿತಪಡಿಸಿದ್ದು, ನಾನ್ ಗಜೆಟೆಡ್ ಅಧಿಕಾರಿಗಳಿಗೆ ನಗದು ರೂಪದಲ್ಲಿ ಮುಂಗಡ ವೇತನ ನೀಡುವಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯಿಂದ ಬಂದ ಮನವಿ ಹಿನ್ನೆಲೆಯಲ್ಲಿ ಮನವಿ ಮಾಡಲಾಗಿದೆ ಎಂದು ಹೇಳಿದರು. ಆದರೆ 179 ಮಂದಿ ಮಾತ್ರ ಈ ಸೌಲಭ್ಯಕ್ಕೆ ಅರ್ಹರಾಗಿದ್ದು, ಇದಕ್ಕೆ 1.8 ಕೋಟಿ ಸಾಕಾಗುತ್ತದೆ.