ಸುಷ್ಮಾಗೆ ಕಿಡ್ನಿ ದಾನಮಾಡಲು ಮುಂದೆ ಬಂದ ಮುಸ್ಲಿಮ್ ಧಾರ್ಮಿಕ ವಿದ್ವಾಂಸ
ಹೊಸದಿಲ್ಲಿ, ನ. 20: ಕಿಡ್ನಿ ವೈಫಲ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕಿಡ್ನಿ ದಾನ ನೀಡುವ ಕೊಡುಗೆಗಳ ಮಹಾಪೂರವೇ ಹರಿದು ಬರುತ್ತಿದೆ. ಈ ನಡುವೆ ಉತ್ತರ ಪ್ರದೇಶದ ರಾಮಪುರದ ಮುಸ್ಲಿಮ್ ಧಾರ್ಮಿಕ ವಿದ್ವಾಂಸರೊಬ್ಬರು ಸುಷ್ಮಾಗೆ ಕಿಡ್ನಿ ದಾನಮಾಡಲು ಮುಂದೆ ಬಂದಿದ್ದಾರೆ.
ನಾನು ಸುಷ್ಮಾ ಸ್ವರಾಜ್ ಅವರ ಶೀಘ್ರ ಚೇತರಿಕೆಗಾಗಿ ಅಲ್ಲಾಹನಲ್ಲಿ ಪ್ರಾರ್ಥಿಸಿ ಅವರಿಗೆ ನನ್ನ ಕಿಡ್ನಿ ದಾನ ಮಾಡುವ ಕೊಡುಗೆ ನೀಡುತ್ತಿದ್ದೆನೆ ಎಂದು ಧಾರ್ಮಿಕ ವಿದ್ವಾಂಸ ಸಯ್ಯದ್ ಅಬ್ದುಲ್ಲಾ ತಾರಿಖ್ ಅವರು ಹೇಳಿದ್ದಾರೆ.
ದೇಶದ ಹಿತದೃಷ್ಟಿಯಲ್ಲಿ ಕೆಲಸದ ಗಡಿಬಿಡಿಯಲ್ಲಿರುವ ಸಚಿವರು ಜನಸಾಮಾನ್ಯರ ಕಷ್ಟನಷ್ಟಗಳಿಗೆ ಸ್ಪಂದಿಸುವ ಸಹನೆ ಹೊಂದಿರುವುದಿಲ್ಲ. ಆದರೆ ಸುಷ್ಮಾ ಅವರು ಇದಕ್ಕೆ ವ್ಯತಿರಿಕ್ತರಾಗಿದ್ದು ಅವರನ್ನು ಯಾರೇ ಸಂಪರ್ಕಿಸಿ ಸಹಾಯ ಯಾಚಿಸಿದರೂ ಅವರು ತಕ್ಷಣ ಸ್ಪಂದಿಸುತ್ತಾರೆ. ಇಂತಹ ಅಪರೂಪದ ನಾಯಕಿಗೆ ನಾನು ನನ್ನ ಕಿಡ್ನಿ ದಾನ ನೀಡಲು ಹೆಮ್ಮೆ ಪಡುತ್ತೇನೆ ಎಂದು ಸಯ್ಯದ್ ಅಬ್ದುಲ್ಲಾ ಹೇಳಿದ್ದಾರೆ.
ಈ ಹಿಂದೆ ತಮಗೆ ಕಿಡ್ನಿ ದಾನ ಮಾಡಲು ಮುಸ್ಲಿಮ್ ವ್ಯಕ್ತಿಯೊಬ್ಬ ಮುಂದೆ ಬಂದಾಗ ಕಿಡ್ನಿಗೆ ಧರ್ಮದ ಹಣೆಪಟ್ಟಿ ಇಲ್ಲ ಎಂದು ಸುಷ್ಮಾ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.