×
Ad

ಕಮಲಾ ಸುರಯ್ಯಾ ಬಯೋಪಿಕ್ ನಲ್ಲಿ ವಿದ್ಯಾಬಾಲನ್

Update: 2016-11-20 19:12 IST

ಮಲಯಾಳಂನ ಖ್ಯಾತ ಬರಹಗಾರ್ತಿ ದಿವಂಗತ ಕಮಲಾ ಸುರಯ್ಯಾ ಅವರ ಜೀವನಕಥೆಯಾಧಾರಿತ ಚಿತ್ರ ‘ಆಮಿ’ ಈ ಮೊದಲು ನಿಶ್ಚಯಿಸಿದ್ದಂತೆ ನವೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭಿಸಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ‘ಆಮಿ’ಯ ಶೂಟಿಂಗ್ ಡಿಸೆಂಬರ್‌ಗೆ ಮುಂದೂಡಲ್ಪಟ್ಟಿದೆ.

ಮಲಯಾಳಂ ಚಿತ್ರರಂಗದ ಹಿರಿಯ ನಿರ್ದೇಶಕ ಕಮಲ್ ಆ್ಯಕ್ಷನ್ ಕಟ್ ಹೇಳಲಿರುವ ಈ ಚಿತ್ರದ ಶೂಟಿಂಗ್, ಸೆಪ್ಟಂಬರ್ 25ರಂದೇ ಆರಂಭಗೊಳ್ಳಲಿತ್ತು. ಆದರೆ ನಾಯಕಿ ವಿದ್ಯಾಬಾಲನ್‌ರ ಅನಾರೋಗ್ಯದಿಂದಾಗಿ ಅದನ್ನು ನವೆಂಬರ್ ಮೊದಲ ವಾರಕ್ಕೆ ಮುಂದೂಡಲಾಗಿತು. ಇದೀಗ ಚಿತ್ರತಂಡವು ಆಮಿಯ ಚಿತ್ರೀಕರಣವನ್ನು ಡಿಸೆಂಬರ್‌ನಲ್ಲಿ ಆರಂಭಿಸಲು ನಿರ್ಧರಿಸಿದೆ. ಎಲ್ಲವು ಅಂದುಕೊಂಡಂತೆ ನಡೆದಲ್ಲಿ ಚಿತ್ರವು ಡಿಸೆಂಬರ್ 18ರಂದು ಸೆಟ್ಟೇರಲಿದೆಯೆಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ವಿದ್ಯಾಬಾಲನ್ ಕಮಲಾ ಸುರಯ್ಯಾ ಪಾತ್ರದಲ್ಲಿ ನಟಿಸಲಿರುವ ಈ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ವಿದ್ಯಾಬಾಲನ್ ಮೂಲತಃ ಕೇರಳದ ಪಾಲ್ಘಾಟ್ ಜಿಲ್ಲೆಯವರಾಗಿದ್ದರೂ, ಅವರ ಮಾತೃಭಾಷೆ ತಮಿಳು. ಈ ಚಿತ್ರಕ್ಕಾಗಿ ವಿದ್ಯಾ ತನ್ನ ಪಾತ್ರಕ್ಕೆ ತಾನೇ ಡಬ್ಬಿಂಗ್ ಮಾಡಲಿದ್ದು ಅದಕ್ಕಾಗಿ ಆಕೆ ಮಲಯಾಳಂ ಕಲಿಯುತ್ತಿದ್ದಾರೆ.

 ಕೇರಳ,ಮುಂಬೈ ಹಾಗೂ ಕೋಲ್ಕತಾದ ವಿವಿಧೆಡೆ ಚಿತ್ರೀಕರಣಗೊಳ್ಳಲಿರುವ ಚಿತ್ರದಲ್ಲಿ ಜನಪ್ರಿಯ ನಟ ಪೃಥ್ವಿರಾಜ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಮಲಯಾಳಂನ ಯುವನಟ ಮುರಳಿಗೋಪಿ, ಕಮಲಾರ ಪತಿ ಮಾಧವದಾಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಲಯಾಳಂನ ಇನ್ನೋರ್ವ ಬಹುಮುಖ ಪ್ರತಿಭೆಯ ನಟ ಅನೂಪ್ ಮೆನನ್ ಕೂಡಾ ಈ ಚಿತ್ರದಲ್ಲಿ ಮಹತ್ವದ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಅದ್ದೂರಿಯಾಗಿ ನಿರ್ಮಾಣ ಗೊಳ್ಳಲಿರುವ ಈ ಚಿತ್ರವು 2017ರ ಕೊನೆಯಲ್ಲಿ ಬೆಳ್ಳಿತೆರೆಗೆ ಅಪ್ಪಳಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News