×
Ad

ಬಾಲಿವುಡ್ ಗೆ ಕರೆನ್ಸಿ ಅಮಾನ್ಯತೆಯ ಬಿಸಿ

Update: 2016-11-20 19:27 IST

1000 ಸಾವಿರ ಹಾಗೂ 500 ರೂ. ಮುಖಬೆಲೆಯ ನೋಟುಗಳ ಅಮಾನ್ಯತೆಯು ಬಾಲಿವುಡ್ ಚಿತ್ರರಂಗಕ್ಕೆ ಶಾಕ್ ಉಂಟು ಮಾಡಿದೆ. ನೋಟುಗಳ ಅಮಾನ್ಯತೆಯ ಬಳಿಕ ಕರೆನ್ಸಿ ತೀವ್ರ ಅಭಾವದಿಂದಾಗಿ ಥಿಯೇಟರ್ ಕಡೆ ಮುಖ ಮಾಡುವ ಪ್ರೇಕ್ಷಕರ ಸಂಖ್ಯೆಯು ಗಣನೀಯವಾಗಿ ಕುಸಿದಿದೆ. ದೇಶದಾದ್ಯಂತ ಥಿಯೇಟರ್, ಮಲ್ಟಿಪ್ಲೆಕ್ಸ್ ಗಳು ಪ್ರೇಕ್ಷಕರಿಲ್ಲದೆ ಭಣಗುಟ್ಟುತ್ತಿವೆ. ಬಾಲಿವುಡ್‌ನ ದೊಡ್ಡ ದೊಡ್ಡ ಪ್ರೊಡಕ್ಷನ್ ಸಂಸ್ಥೆಗಳು ಕೂಡಾ ಚಿತ್ರದ ಬಿಡುಗಡೆಗೆ ಹಿಂದೇಟು ಹಾಕುತ್ತಿದ್ದಾರೆ. ಫರ್ಹಾನ್ ಅಖ್ತರ್ ನಿರ್ದೇಶನದ ‘ರಾಕ್‌ಆನ್2’ ನವೆಂಬರ್ 11ರಂದು ಬಿಡುಗಡೆಯಾಗಲಿತ್ತು. ಆದರೆ ಕರೆನ್ಸಿ ನೋಟುಗಳ ಅಭಾವದ ಹಿನ್ನೆಲೆಯಲ್ಲಿ ಅವರು ಚಿತ್ರದ ರಿಲೀಸನ್ನು ಮುಂದೂಡಿದ್ದಾರೆ.

ಈ ಮಧ್ಯೆ ಉದಯೋನ್ಮುಖ ತಾರೆಯರಾದ ಹಿತೇನ್ ಪೈಂತಲ್ ಹಾಗೂ ಹೃಷಿತಾ ಭಟ್ ಪ್ರಧಾನ ಪಾತ್ರಗಳಲ್ಲಿ ನಟಿಸುತ್ತಿರುವ 20 ಮಿನಟ್ಸ್ ಕೂಡಾ ನ.11ರಂದು ಬಿಡುಗಡೆಗೊಳ್ಳುವುದರಲ್ಲಿತ್ತು. ಇದೀಗ ಆ ಚಿತ್ರವನ್ನು ಡಿಸೆಂಬರ್ 9ಕ್ಕೆ ರಿಲೀಸ್ ಮಾಡಲು ನಿರ್ಮಾಪಕರು ಯೋಚಿಸುತ್ತಿದ್ದಾರೆ. ಕನ್ನಡತಿ ನೀತಾಶೆಟ್ಟಿ ಅಭಿನಯಿಸುತ್ತಿರುವ ಹಾರರ್ ಚಿತ್ರ ‘ಸುನ್‌ಸಾನ್’ ಚಿತ್ರದ ಬಿಡುಗಡೆ ಕೂಡಾ ಮುಂದಕ್ಕೆ ಹೋಗಿದೆ.

ಶಾರುಖ್ ಖಾನ್ ಹಾಗೂ ಆಲಿಯಾಭಟ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಡಿಯರ್ ಝಿಂದಗಿ’ ನವೆಂಬರ್ 25ಕ್ಕೆ ಬಿಡುಗಡೆಯಾಗಲಿದೆ. ಆದರೆ ಕರೆನ್ಸಿ ಸಮಸ್ಯೆ ಅದಕ್ಕೂ ಮೊದಲು ಬಗೆಹರಿಯದೆ ಹೋದಲ್ಲಿ, ಆ ಚಿತ್ರದ ಬಿಡುಗಡೆ ಕೂಡಾ ಮುಂದೂಡಲ್ಪಡುವ ಸಾಧ್ಯತೆ ಇಲ್ಲದೇ ಇಲ್ಲ. ಮುಂದಿನ ದಿನಗಳು ಕ್ರಿಸ್‌ಮಸ್ ರಜೆಯ ದಿನಗಳು ಎದುರಾಗಲಿರುವುದರಿಂದ ಹಲವು ಚಿತ್ರಗಳು ಬಿಡುಗಡೆಗೆ ಕಾದುನಿಂತಿವೆ. ಒಟ್ಟಿನಲ್ಲಿ ಕರೆನ್ಸಿ ಅಮಾನ್ಯತೆಯಿಂದಾಗಿ ಬಾಲಿವುಡ್‌ಗೆ ಗರಬಡಿದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News