×
Ad

ದರ್ಶನ್ ಗೆ ಯೋಗರಾಜ್ ಡೈರೆಕ್ಷನ್

Update: 2016-11-20 19:31 IST

ಮುಂಗಾರುಮಳೆ ಖ್ಯಾತಿಯ ಯೋಗರಾಜ್ ಭಟ್ ಮುಂದಿನ ವರ್ಷ ದರ್ಶನ್ ಅಭಿನಯದ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇತ್ತೀಚೆಗಷ್ಟೇ ಗೋಲ್ಡನ್‌ಸ್ಟಾರ್ ಗಣೇಶ್ ನಾಯಕನಾಗಿರುವ ಚಿತ್ರದ ಶೂಟಿಂಗ್ ಆರಂಭಿಸಿರುವ ಯೋಗರಾಜ್ ಭಟ್, ಕಳೆದ ವಾರ ಈ ವಿಷಯ ಬಹಿರಂಗಪಡಿಸಿದ್ದಾರೆ. ದರ್ಶನ್‌ರ ‘ಮಾಸ್ ಹೀರೋ’ ಇಮೇಜನ್ನು ಗಮನದಲ್ಲಿಟ್ಟುಕೊಂಡೇ ಚಿತ್ರಕಥೆಯನ್ನು ಬರೆಯುತ್ತಿರುವುದಾಗಿಯೂ ಅವರು ತಿಳಿಸಿದ್ದಾರೆ. ಇತ್ತೀಚೆಗೆ ತಾನು ಚಿತ್ರದ ಕಥೆಯನ್ನು ದರ್ಶನ್‌ಗೆ ವಿವರಿಸಿದಾಗ, ಅವರು ಸಂತಸದಿಂದಲೇ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರೆಂದು ಯೋಗರಾಜ್ ಹೇಳುತ್ತಾರೆ. ಅದೇನೇ ಇರಲಿ. ದರ್ಶನ್-ಯೋಗರಾಜ್ ಕಾಂಬಿನೇಶನ್‌ನಿಂದಾಗಿ ಈ ಚಿತ್ರವು ಖಂಡಿತವಾಗಿ ಮುಂದಿನ ವರ್ಷದ ಅತ್ಯಂತ ಬಹುನಿರೀಕ್ಷಿತ ಸ್ಯಾಂಡಲ್‌ವುಡ್ ಸಿನೆಮಾಗಳ ಸಾಲಿಗೆ ಸೇರುವುದು ಗ್ಯಾರಂಟಿ.

ಮುಂಗಾರುಮಳೆಯ ಬಳಿಕ ಯೋಗರಾಜ್ ಅವರು ಪುನೀತ್‌ರಾಜ್‌ಅಭಿನಯದ ಪರಮಾತ್ಮ ಹಾಗೂ ಯಶ್ ಅಭಿನಯದ ಡ್ರಾಮಾ ಬಿಟ್ಟರೆ ಇನ್ನಾವುದೇ ಸೂಪರ್‌ಸ್ಟಾರ್‌ಗಳ ಚಿತ್ರವನ್ನು ನಿರ್ದೇಶಿಸಿದ್ದಿಲ್ಲ. ಕಿಚ್ಚ ಸುದೀಪ್ ಅಭಿನಯದ ಚಿತ್ರವೊಂದನ್ನು ಅವರು ನಿರ್ದೇಶಿಸಬೇಕಿದ್ದರೂ, ಕಾರಣಾಂತರಗಳಿಂದ ಅದು ಸೆಟ್ಟೇರಲಿಲ್ಲ. ಸದ್ಯಕ್ಕೆ ಯೋಗರಾಜ್ ಅವರು ಗಣೇಶ್ ಅಭಿನಯದ ಚಿತ್ರ ಹಾಗೂ ಹೊಸಬರೇ ತುಂಬಿರುವ ‘ನನ್ನ ಹೆಸರೇ ಅನುರಾಗಿ’ ಸಿನೆಮಾದ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಇವೆರಡೂ ಪೂರ್ಣಗೊಂಡ ಬಳಿಕ ಅವರು ದರ್ಶನ್ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News