ನೋಟು ಅಮಾನ್ಯ: ಸಂಕಷ್ಟ ಎದುರಿಸಲಾಗದೆ ಸಂತಾನಭಾಗ್ಯಕ್ಕೇ ಕತ್ತರಿ

Update: 2016-11-27 04:06 GMT

ಆಗ್ರಾ/ ಅಲಿಘಡ, ನ.27: ಪ್ರಧಾನಿ ನರೇಂದ್ರ ಮೋದಿ 500 ಹಾಗೂ 1000 ರೂಪಾಯಿ ನೋಟುಗಳನ್ನು ಅಮಾನ್ಯ ಮಾಡಿದ ಬಳಿಕ ಉತ್ತರ ಪ್ರದೇಶದಲ್ಲಿ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ವ್ಯಾಪಕವಾಗಿ ಹೆಚ್ಚಿದೆ. ನಗದು ಹರಿವು ಇಲ್ಲದೇ ದೈನಂದಿನ ಅಗತ್ಯಗಳಿಗೆ ಹಣವಿಲ್ಲದೇ ಹೈರಾಣಾಗಿರುವ ಗ್ರಾಮೀಣ ಜನತೆ ಪ್ರೋತ್ಸಾಹಧನದ ಆಸೆಗಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾರೆ.
ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಪುರುಷರಿಗೆ ತಲಾ 2,000 ರೂಪಾಯಿ ಹಾಗೂ ಮಹಿಳೆಯರಿಗೆ ತಲಾ 1,400 ರೂಪಾಯಿ ಪ್ರೋತ್ಸಾಹಧನ ಸಿಗುತ್ತಿದೆ. ನಗದು ರೂಪದಲ್ಲಿ ಹಣ ಸಿಗುತ್ತದೆ ಎಂಬ ಕಾರಣಕ್ಕಾಗಿ ಜನ ಈ ಕ್ರಮಕ್ಕೆ ಮುಂದಾಗಿದ್ದಾರೆ. 35 ವರ್ಷದ ಪುರಾಣ್ ಶರ್ಮಾ ಹೀಗೆ ಹಣಕ್ಕಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವುದನ್ನು ಒಪ್ಪಿಕೊಳ್ಳುತ್ತಾರೆ. ಅವರ ಪತ್ನಿ ಅಂಗವಿಕಲೆಯಾಗಿರುವುದರಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಆಹಾರಕ್ಕೂ ಹಣ ಇಲ್ಲದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಅನಿವಾರ್ಯವಾಯಿತು ಎಂದು ಅವರು ಹೇಳಿದ್ದಾರೆ.

ಉದಾಹರಣೆಗೆ ಅಲಿಘಡ ಜಿಲ್ಲೆಯಲ್ಲಿ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ನವೆಂಬರ್‌ನ ಮೂರು ವಾರದಲ್ಲಿ ದ್ವಿಗುಣವಾಗಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ 92 ಶಸ್ತ್ರಚಿಕಿತ್ಸೆಗಳಾಗಿದ್ದರೆ, ಈ ಬಾರಿ 176 ಶಸ್ತ್ರಚಿಕಿತ್ಸೆಗಳಾಗಿವೆ. ಆಗ್ರಾದಲ್ಲಿ ಒಟ್ಟು 913 ಮಂದಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಈ ಪ್ರಮಾಣ ಹಿಂದಿನ ವರ್ಷ 450 ಆಗಿತ್ತು.
ಪ್ರೋತ್ಸಾಹಧನದ ಬಗ್ಗೆ ಅರಿವು ಹೆಚ್ಚಿರುವುದು ಹೀಗೆ ಶಸ್ತ್ರಚಿಕಿತ್ಸೆ ಹೆಚ್ಚಳಕ್ಕೆ ಕಾರಣ ಎಂದು ಆರೋಗ್ಯ ಕಾರ್ಯಕರ್ತರು ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News