×
Ad

ಡಿಸೆಂಬರ್ 31ರಿಂದ ಈ ರಾಜ್ಯ ಆಗಲಿದೆ ಸಂಪೂರ್ಣ ನಗದುರಹಿತ

Update: 2016-11-27 10:53 IST

ಪಣಜಿ, ನ.27: ಗೋವಾ ಈ ವರ್ಷಾಂತ್ಯದ ಒಳಗಾಗಿ ದೇಶದ ಮೊಟ್ಟಮೊದಲ ನಗದು ರಹಿತ ರಾಜ್ಯವಾಗಿ ಪರಿವರ್ತನೆಯಾಗಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಮೀನು, ಮಾಂಸ, ತರಕಾರಿ ಹಾಗೂ ಇತರ ಅಗತ್ಯ ವಸ್ತುಗಳನ್ನು ಮೊಬೈಲ್‌ನ ಗುಂಡಿ ಅದುಮಿ ಮನೆಬಾಗಿಲಿಗೆ ತರಿಸಿಕೊಳ್ಳಲು ವ್ಯವಸ್ಥೆ ಸಿದ್ಧವಾಗುತ್ತಿದೆ.
ಖರೀದಿಗೆ ಹೋಗುವಾಗ ನೀವು ಪರ್ಸ್ ಒಯ್ಯುವ ಅಗತ್ಯವಿಲ್ಲ. ಪಿಕ್‌ಪಾಕೆಟರ್‌ಗಳ ವೃತ್ತಿಗೆ ತಿಲಾಂಜಲಿ ಬೀಳಲಿದೆ. ಎಲ್ಲ ವಹಿವಾಟುಗಳು ಮೊಬೈಲ್ ಮೂಲಕವೇ ನಡೆಯಲಿವೆ. ನಾಗರಿಕರು ಮಾಡುವ ಖರೀದಿಗೆ ಅವರ ಬ್ಯಾಂಕ್ ಖಾತೆಯಿಂದಲೇ ಹಣ ಕಡಿತವಾಗಲಿದೆ ಎಂದು ಮುಖ್ಯ ಕಾರ್ಯದರ್ಶಿ ಆರ್.ಕೆ.ಶ್ರೀವಾಸ್ತವ ವಿವರಿಸಿದರು.
ನಾಗರಿಕರು ತಮ್ಮ ಮೊಬೈಲ್‌ನಿಂದ *99ಗೆ ಕರೆ ಮಾಡುವ ಮೂಲಕ ಈ ಸೌಲಭ್ಯ ಪಡೆಯಬಹುದು. ಇದಕ್ಕೆ ಸ್ಮಾರ್ಟ್ ಫೋನ್‌ಗಳೇ ಬೇಕಿಲ್ಲ. ಅದರಲ್ಲಿ ಬರುವ ಸೂಚನೆಗಳಿಗೆ ಅನುಗುಣವಾಗಿ ವಹಿವಾಟು ನಡೆಸಬಹುದು. ಸಣ್ಣ ವ್ಯಾಪಾರಿಗಳಿಗೆ ಹಣವನ್ನು ವರ್ಗಾವಣೆ ಮಾಡಲು ಅವರು ಕಾರ್ಡ್ ಸ್ವೈಪ್ ಮಾಡಬೇಕಿಲ್ಲ. ಆದರೆ ಹಾಲಿ ಇರುವ ಮಳಿಗೆಗಳಲ್ಲಿ ಸ್ವೈಪಿಂಗ್ ಯಂತ್ರ ಕಾರ್ಯ ಮುಂದುವರಿಯಲಿದೆ ಎಂದು ವಿವರ ನೀಡಿದರು.
ಈ ನಗದುರಹಿತ ವ್ಯವಸ್ಥೆಯಲ್ಲಿ ಹೇಗೆ ವಹಿವಾಟು ನಡೆಸಬೇಕು ಎಂಬ ಬಗ್ಗೆ ವ್ಯಾಪಾರಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ಈ ವ್ಯವಸ್ಥೆ ಮಪೂಸಾ ಹಾಗೂ ಪಣಜಿಯಲ್ಲಿ ಮುಂದಿನ ಭಾನುವಾರ ಬರಲಿದೆ ಎಂದು ಅವರು ವಿವರಿಸಿದರು.
ನಗದು ರಹಿತ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ನಗದು ವ್ಯವಹಾರವನ್ನು ನಿಷೇಧಿಸಲಾಗುವುದು. ನಗದುರಹಿತ ವ್ಯವಸ್ಥೆಯಲ್ಲಿ ಹಣ ವರ್ಗಾವಣೆಗೆ ಕನಿಷ್ಠ ಮಿತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಜತೆಗೆ ಈ ವರ್ಗಾವಣೆಗಾಗಿ ಯಾವುದೇ ವಿಶೇಷ ಶುಲ್ಕ ವಿಧಿಸುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News