ಹತ್ತು ವರ್ಷಗಳ ಬಳಿಕ ಬಿಗ್ ಬಿ ಜೊತೆ ಅಕ್ಷಯ್

Update: 2016-11-27 17:39 GMT

ಬರೋಬ್ಬರಿ ಹತ್ತು ವರ್ಷಗಳ ಸುದೀರ್ಘ ಅಂತರದ ಬಳಿಕ ಬಿಗ್‌ಬಿ ಹಾಗೂ ‘ಖಿಲಾಡಿ’ ಅಕ್ಷಯ್‌ಕುಮಾರ್ ಮತ್ತೆ ಬೆಳ್ಳಿತೆರೆಯಲ್ಲಿ ಜೊತೆಯಾಗುತ್ತಿದ್ದಾರೆ. ಹೌದು. ‘ಚೀನಿ ಕಮ್’, ‘ಪಾ’, ಹಾಗೂ ಈ ವರ್ಷ ತೆರೆಕಂಡ ‘ಕಿ ಆ್ಯಂಡ್ ಕಾ’ ನಂತಹ ಸೂಪರ್‌ಹಿಟ್ ಚಿತ್ರಗಳನ್ನು ನೀಡಿರುವ ಆರ್.ಬಾಲ್ಕಿ ನಿರ್ದೇಶಿಸಲಿರುವ ಈ ಚಿತ್ರದಲ್ಲಿ ಅಮಿತಾಭ್ ಹಾಗೂ ಅಕ್ಷಯ್ ಒಟ್ಟಿಗೆ ಅಭಿನಯಿಸಲಿದ್ದಾರೆ. ಈವರೆಗೆ ಅಕ್ಷಯ್‌ಕುಮಾರ್ ಹಾಗೂ ಅಮಿತಾಭ್ ಅವರು ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ಖಾಕಿ, ಫ್ಯಾಮಿಲಿ ಹಾಗೂ ವಿಪುಲ್ ಶಾ ಅವರ ಕೌಟುಂಬಿಕ ಕಥಾಚಿತ್ರ ವಖ್ತ್ ಹಾಗೂ ಮಧುರ್ ಭಂಡಾರ್ಕರ್ ಅವರ ಕ್ರೈಂ ಥ್ರಿಲ್ಲರ್ ಆನ್ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು. 2006ರಲ್ಲಿ ಬಿಡುಗಡೆಯಾದ ‘ಫ್ಯಾಮಿಲಿ’ ಅಮಿತಾಭ್-ಅಕ್ಷಯ್ ಕೊನೆಯ ಬಾರಿಗೆ ಜೊತೆಯಾಗಿ ನಟಿಸಿರುವ ಚಿತ್ರವಾಗಿತ್ತು.

ಬಾಲ್ಕಿ ಇತ್ತೀಚೆಗೆ ಅಕ್ಷಯ್‌ಕುಮಾರ್‌ರನ್ನು ಭೇಟಿಯಾಗಿ ತನ್ನ ಚಿತ್ರದ ಕಥೆಯನ್ನು ವಿವರಿಸಿದ್ದರಂತೆ. ಈ ಚಿತ್ರದ ಪಾತ್ರಕ್ಕೆ ನಿರ್ದೇಶಕರ ಮೊದಲ ಆಯ್ಕೆ ತಾನೇ ಎಂದು ತಿಳಿದಾಗ ಅಕ್ಷಯ್ ಸಖತ್ ಥ್ರಿಲ್ ಆಗಿದ್ದರು. ಅಕ್ಷಯ್‌ರಿಂದ ಗ್ರೀನ್‌ಸಿಗ್ನಲ್ ದೊರೆಯುತ್ತಿದ್ದಂತೆಯೇ, ಬಾಲ್ಕಿ ಈಗ ಸ್ಕ್ರಿಪ್ಟನ್ನು ಪೂರ್ಣಗೊಳಿಸುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಅಮಿತಾಭ್-ಅಕ್ಕಿ ಕಾಂಬಿನೇಶನ್‌ನ ಈ ಚಿತ್ರ ಬಾಲಿವುಡ್‌ನಲ್ಲಿ ಹೊಸ ಮೈಲುಗಲ್ಲನ್ನೇ ಸೃಷ್ಟಿಸಲಿದೆಯೆಂದು ಬಾಲ್ಕಿ ತುಂಬು ವಿಶ್ವಾಸದಿಂದ ಹೇಳಿಕೊಳ್ಳುತ್ತಿದ್ದಾರೆ. ಅಮಿತಾಭ್ ಈ ಮೊದಲು ಬಾಲ್ಕಿ ನಿರ್ದೇಶನದ ಚೀನಿಕಮ್, ಪಾ, ಶಮಿತಾಭ್ ಚಿತ್ರಗಳನ್ನು ನಿರ್ದೇಶಿಸಿದ್ದರು. ಆದರೆ ಅಕ್ಷಯ್, ಬಾಲ್ಕಿ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲ ಸಲವಾಗಿದೆ. ಪ್ರಸ್ತುತ ಅಕ್ಷಯ್ ‘ಟಾಯ್‌ಲೆಟ್-ಏಕ್‌ಪ್ರೇಂ ಕಥಾ’ ಚಿತ್ರದಲ್ಲಿ ಅಭಿನಯಿಸುತ್ತಿದ್ದರೆ, ಅಮಿತಾಭ್, ವರ್ಮಾ ನಿರ್ದೇಶನದ ಸರ್ಕಾರ್3ನಲ್ಲಿ ಬ್ಯುಸಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News