×
Ad

ರೊಬೊ 2.0 ರೆಡಿಯಾಗಿದ್ದಾನೆ...

Update: 2016-11-27 23:17 IST

ದಕ್ಷಿಣ ಭಾರತದ ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ನಿರ್ದೇಶಕ ಶಂಕರ್ ಅವರ ಅದ್ದೂರಿ ಚಿತ್ರ ರೊಬೊ 2.0 ಬಿಡುಗಡೆಗೆ ಮೊದಲೇ ಅಭಿಮಾನಿಗಳ ಹೃದಯಬಡಿತವನ್ನು ಹೆಚ್ಚಿಸಿದೆ. ಹಾಲಿವುಡ್‌ಗೆ ಸರಿಸಾಟಿಯಾದ ವಿಎಫ್‌ಎಕ್ಸ್ ತಂತ್ರಜ್ಞಾನ, ಗ್ರಾಫಿಕ್ ಎಫೆಕ್ಟ್ಸ್‌ಗಳೊಂದಿಗೆ ಬರುತ್ತಿರುವ ಈ ಚಿತ್ರದ ಬಿಡುಗಡೆಗಾಗಿ ರಜನಿ ಅಭಿಮಾನಿಗಳು ತುದಿಗಾಲಲ್ಲಿ ಕಾದುನಿಂತಿದ್ದಾರೆ. ರೊಬೊ 2.0ನಲ್ಲಿ ಬಾಲಿವುಡ್‌ನ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ವಿಭಿನ್ನವಾದ ವಿಲನ್ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಗತ್ತನ್ನೇ ತನ್ನ ಅಧೀನಕ್ಕೆ ತೆಗೆದುಕೊಳ್ಳಲು ಹೊಂಚುಹಾಕುವ ದುಷ್ಟ ವಿಜ್ಞಾನಿಯ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಇನ್ನು ಬಾಲಿವುಡ್ ನಟಿ, ರೂಪದರ್ಶಿ ಆ್ಯಮಿ ಜಾಕ್ಸನ್, ರೊಬೊ 2ಗೆ ನಾಯಕಿ.

ಇನ್ನು ಬಜೆಟ್ ವಿಷಯಕ್ಕೆ ಬಂದರೆ, ಈ ಚಿತ್ರವು ಭಾರತೀಯ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಮುರಿದಿದೆ. ಕಳೆದ ವರ್ಷ ಬಿಡುಗಡೆಯಾದ ಬಾಹುಬಲಿ, 250 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಅತ್ಯಂತ ಅದ್ದೂರಿ ಚಿತ್ರವೆಂಬ ದಾಖಲೆ ನಿರ್ಮಿಸಿತ್ತು. ಆದರೆ ಈಗ 350 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ರೊಬೊ 2.0, ಆ ದಾಖಲೆಯನ್ನು ಅಳಿಸಿಹಾಕಿದೆ. ಅದ್ಭುತವಾದ ಸ್ಟಂಟ್‌ಗಳು ಈ ಚಿತ್ರದ ಇನ್ನೊಂದು ಪ್ರಮುಖ ಆಕರ್ಷಣೆ. ಹಾಲಿವುಡ್‌ನ ಖ್ಯಾತ ಸ್ಟಂಟ್ ನಿರ್ದೇಶಕ ಕೆನ್ನಿ ಬೇಟ್ಸ್ ಭಾರತೀಯ ಚಿತ್ರರಂಗ ಹಿಂದೆಂದೂ ಕಂಡಿರದಂತಹ ಅಭೂತಪೂರ್ವ ಸ್ಟಂಟ್‌ಗಳನ್ನು ರೊಬೊ 2.0ಗೆ ಕಟ್ಟಿಕೊಟ್ಟಿದ್ದಾರೆ. ಇತ್ತೀಚೆಗೆ ರೊಬೊ 2.0 ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರಪ್ರೇಮಿಗಳಿಂದ ಅಪಾರ ಮೆಚ್ಚಿಗೆಯನ್ನು ಗಿಟ್ಟಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News