ಶೌಚಾಲಯದ ಬರ್ತ್‌ಡೇ ಆಚರಣೆಗೆ ಕೇಕ್ ಕತ್ತರಿಸಿದರು

Update: 2016-11-28 18:40 GMT

ಈ ತನಕ ಜನರು ತಮ್ಮ ತಮ್ಮ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಆಚರಿಸುವುದನ್ನು ನೋಡಿದ್ದೇವೆ. ಆದರೆ ಮೊನ್ನೆ ಮುಂಬೈಯಲ್ಲಿ ಶೌಚಾಲಯದ ಬರ್ತ್‌ಡೇ ಕೂಡಾ ಆಚರಿಸಲಾಯಿತು. ಮುಂಬೈಯ ಕಾಂದಿವಲಿಯ ದಾಮೂನಗರ್ ಎಂಬಲ್ಲಿ ಸಫಾಯಿ ಕಾರ್ಮಿಕರು ಶೌಚಾಲಯದ ಬರ್ತ್‌ಡೇಯನ್ನು ಕೇಕ್ ಕತ್ತರಿಸಿ ಸಂಭ್ರಮದಿಂದ ಆಚರಿಸಿದರು. ಆ ಕ್ಷೇತ್ರದ ಅನ್ಯ ಶೌಚಾಲಯಗಳ ಹೊರಗಡೆಯೂ ರಂಗೋಲಿ ಹಾಕಿ ಕೆಲವೆಡೆ ಹೂಗಳಿಂದ ಅಲಂಕರಿಸಿದರು.
ಈ ದೃಶ್ಯ ಕಂಡು ಬಂದದ್ದು ಮುಂಬೈಯಲ್ಲಿ ಆಚರಿಸಿದ ವಿಶ್ವ ಶೌಚಾಲಯ ದಿನದಂದು! ನವೆಂಬರ್ 19 ವಿಶ್ವ ಶೌಚಾಲಯ ದಿನವಾಗಿದೆ. ಅಂದು ಮಹಾನಗರ ಪಾಲಿಕೆಯು ಮೊದಲ ಬಾರಿಗೆ ಸ್ವಚ್ಛ ಸಾರ್ವಜನಿಕ ಶೌಚಾಲಯ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ವರ್ಧೆಯು ಲಾಲ್‌ಬಾಗ್‌ನಿಂದ ಹಿಡಿದು ಭೋಯಿವಾಡಾ ಪರಿಸರದಲ್ಲಿ ಆಯೋಜಿಸಲಾಗಿತ್ತು. ಇದರ ಜೊತೆಗೆ ಅನ್ಯ ಕ್ಷೇತ್ರಗಳಲ್ಲಿನ ಸಾರ್ವಜನಿಕ ಶೌಚಾಲಯ ಸಂಚಾಲಿತ ಕೆಲವು ಸಂಸ್ಥೆಗಳೂ ಕೂಡಾ ವಿಶ್ವ ಶೌಚಾಲಯ ದಿನವನ್ನು ಆಚರಿಸಿದವು. ಕೆಲವು ಸಂಸ್ಥೆಗಳು ಶೌಚಾಲಯವನ್ನು ಹೂಗಳಿಂದ ಶೃಂಗರಿಸಿದರೆ ಇನ್ನು ಕೆಲವು ಸಂಸ್ಥೆಗಳು ಶೌಚಾಲಯಗಳ ಹೊರಗಡೆ ವರ್ಣರಂಜಿತ ರಂಗೋಲಿಯನ್ನು ಬಿಡಿಸಿದವು. ಕಾಂದಿವಲಿಯ ದಾಮೂನಗರ್ ಕ್ಷೇತ್ರದಲ್ಲಿ ಕ್ಷೇತ್ರದ ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ್ದಲ್ಲದೆ ಕೇಕ್ ಕತ್ತರಿಸಿ ವಿಶ್ವ ಶೌಚಾಲಯ ದಿವಸವನ್ನು ಆಚರಿಸಿದವು. ಜೊತೆಗೆ ಶಾಲಾ ಮಕ್ಕಳಿಗೆ-ಪರಿಸರದವರಿಗೆ ಕೇಕ್, ವೇಫರ್, ಮಿಕ್ಸರ್ ಇತ್ಯಾದಿ ತಿಂಡಿಗಳನ್ನು ಹಂಚಲಾಯಿತು. ಮನಪಾ ಅಧಿಕಾರಿಗಳು ಎಫ್ ದಕ್ಷಿಣ ವಾರ್ಡ್‌ನ ಸುಮಾರು 44 ಸಾರ್ವಜನಿಕ ಶೌಚಾಲಯಗಳನ್ನು ಸರ್ವೇ ನಡೆಸಿ ಸ್ವಚ್ಛತೆಯನ್ನು ವೀಕ್ಷಿಸಿದರು.

* * * ನವಿ ಮುಂಬೈ ಮಹಾನಗರ ಪಾಲಿಕೆಗೆ
ಲೀಸ್‌ನಲ್ಲಿ ಜಮೀನು
ದ್ವಿತೀಯ ಮುಂಬೈ ಎನ್ನುವ ಹೊಸ ಮುಂಬೈಯ ವಿಕಾಸದಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಿರುವ ಸಿಡ್ಕೋ ಆಡಳಿತವು ತನ್ನ ಹಳೆಯ ನಿಯಮಗಳಲ್ಲಿ ಬದಲಾವಣೆಯನ್ನು ಮಾಡುತ್ತಾ ನವಿ ಮುಂಬೈ ಮಹಾನಗರ ಪಾಲಿಕೆಗೆ ಸಾವಿರಾರು ಎಕರೆ ಜಮೀನನ್ನು ಲೀಸ್‌ನಲ್ಲಿ ಒಪ್ಪಿಸಿದೆ.
ಇದೀಗ ಸಿಡ್ಕೋ ಜಮೀನು ಲೀಸ್‌ನ ಸೀಮೆಯನ್ನು 15 ವರ್ಷಗಳಿಂದ 60 ವರ್ಷಕ್ಕೆ ವಿಸ್ತರಿಸಿದೆ. ಹಾಗೂ 202 ಜಮೀನು ಕ್ಷೇತ್ರದ ದಾಖಲೆಗಳನ್ನು ನವಿ ಮುಂಬೈ ಮನಪಾ ಆಡಳಿತಕ್ಕೆ ಒಪ್ಪಿಸಿದೆ.
ನವಿ ಮುಂಬೈ ಮಹಾನಗರ ಪಾಲಿಕೆ ಸದನದಲ್ಲಿ 30 ಜೂನ್ 2014 ರಂದು ಒಂದು ಪ್ರಸ್ತಾವ ಮಂಜೂರು ಮಾಡಲಾಗಿತ್ತು. ಅದರಲ್ಲಿ ಮನಪಾಕ್ಕೆ ಸಿಡ್ಕೋ ಎಂ.ಐ.ಡಿ.ಸಿ. ದಿಕ್ಕಿನಲ್ಲಿ ಸಾರ್ವಜನಿಕ ಸೌಲಭ್ಯಗಳಿಗಾಗಿ ಕಿಂಚಿತ್ ದರದಲ್ಲಿ ಜಮೀನು ಉಪಲಬ್ಧ್ದಗೊಳಿಸಿ ಲೀಸ್‌ನ ಸೀಮೆಯನ್ನು 15 ವರ್ಷಗಳ ಬದಲು 60 ವರ್ಷ ಮಾಡುವಂತೆ ಮನವಿ ಮಾಡಲಾಗಿತ್ತು. ಈ ಪ್ರಸ್ತಾಪವನ್ನು ಕೇಂದ್ರ ಸರಕಾರ, ರಾಜ್ಯ ಸರಕಾರ ಮತ್ತು ಸಿಡ್ಕೋ ಹಾಗೂ ಎಂ.ಐ.ಡಿ.ಸಿಗೆ ಕಳುಹಿಸಲಾಗಿತ್ತು. ಆದರೆ ಈ ತನಕ ಈ ಪ್ರಸ್ತಾವದ ಬಗ್ಗೆ ಏನೂ ಕ್ರಮ ಕೈಗೊಂಡಿರಲಿಲ್ಲ.
ನವಿ ಮುಂಬೈ ಮನಪಾ ಕಳೆದ 15 ವರ್ಷಗಳಿಂದ ಸಿಡ್ಕೋ ಬಳಿ ಮೂಲಭೂತ ಸೌಲಭ್ಯಗಳನ್ನು ನೀಡಲು ಸರಿಯಾದ ಜಮೀನು ಒದಗಿಸುವಂತೆ ಕೇಳುತ್ತಿತ್ತು. ನವಿ ಮುಂಬೈ ಮನಪಾ ಆಯುಕ್ತ ಮುಂಢೆ ಅವರು ಮೇ 2016 ರಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಈ ಪ್ರಸ್ತಾವವನ್ನು ಗಂಭೀರವಾಗಿ ಸ್ವೀಕರಿಸಿದ್ದರು. ಇದೀಗ ಸಿಡ್ಕೋ 60 ವರ್ಷಗಳ ಲೀಸ್‌ನಲ್ಲಿ ನವಿಮುಂಬೈ ಮನಪಾಕ್ಕೆ ಜಮೀನು ನೀಡಿದೆ.


* * * ಮುಂಬೈ ಮಹಾನಗರದ 37ನೆ ರೈಲು ನಿಲ್ದಾಣ ; ಹೆಸರಿನ ಗೊಂದಲ!

  ಮುಂಬೈಯಲ್ಲಿ ಈ ವಾರ ಪಶ್ಚಿಮ ರೈಲ್ವೆಯ ಉಪನಗರ ನೆಟ್‌ವರ್ಕ್‌ನಲ್ಲಿ 37ನೆ ನಿಲ್ದಾಣ ಉದ್ಘಾಟನೆ ಆಗಬೇಕಿತ್ತು. ಈ ನಿಲ್ದಾಣದ ಹೆಸರು ಓಶಿವಾರಾ ಎಂದಿತ್ತು. ಆದರೆ ನಿಲ್ದಾಣದ ಹೆಸರಿನ ಗೊಂದಲದಲ್ಲಿ ಕೊನೇ ದಿನ ಉದ್ಘಾಟನೆ ಮುಂದೂಡಲಾಯ್ತು. ಓಶಿವಾರಾ ಬದಲು ರಾಮಮಂದಿರ ನಿಲ್ದಾಣ ಎಂದು ಹೆಸರು ಇರಿಸಲು ಸರಕಾರ ಒಪ್ಪಿದ್ದು ಕಡತದಲ್ಲಿ ಸೂಕ್ತ ತಿದ್ದುಪಡಿ ಮಾಡಬೇಕಾಗಿರೋದ್ರಿಂದ ನ.27 ರ ಕಾರ್ಯಕ್ರಮ ರದ್ದಾಯ್ತು. ಈ ಏರಿಯಾದಲ್ಲಿ ರಾಮಮಂದಿರ ಬಹು ಪ್ರಸಿದ್ಧಿ ಇದೆ.
 ಪಶ್ಚಿಮ ರೈಲ್ವೆಯಲ್ಲಿ ಚರ್ಚ್‌ಗೇಟ್ ವಿರಾರ್‌ನ ನಡುವೆ ಆಗಸ್ಟ್ 1956 ರಲ್ಲಿ ಆರಂಭಿಸಿದ್ದ ಕೊನೆಯ ನಿಲ್ದಾಣ ನಾಲಾಸೋಪಾರ ನಿಲ್ದಾಣ ಆಗಿತ್ತು. ಇದೀಗ ರಾಮಮಂದಿರ ನಿಲ್ದಾಣ ಪಶ್ಚಿಮ ರೈಲ್ವೆಯ ಉಪನಗರ ರೂಟ್‌ನ 37ನೆ ನಿಲ್ದಾಣ ಆಗಿದೆ. ಚರ್ಚ್‌ಗೇಟ್ ವಿರಾರ್ ಲೋಕಲ್‌ನ್ನು ಇತ್ತೀಚಿನ ದಿನಗಳಲ್ಲಿ ಡಹಾಣೂರೋಡ್‌ನ ತನಕ ವಿಸ್ತರಿಸಲಾಗಿದ್ದು ಉಮ್ರೋಲಿ ನಿಲ್ದಾಣ ಹೆಸರಿನ ಕೊನೆಯ ನಿಲ್ದಾಣ ಮೇ 2000ದಲ್ಲಿ ಆರಂಭವಾಗಿತ್ತು.
 


 
ರಾಮಮಂದಿರ ರೈಲು ನಿಲ್ದಾಣ ಜೋಗೇಶ್ವರಿ-ಗೋರೆಗಾಂವ್ ನಡುವೆ ಬರುತ್ತದೆ. ಇಲ್ಲಿ ನಿಧಾನಗತಿಯ ರೈಲುಗಾಡಿಗಳು ಮಾತ್ರ ನಿಲ್ಲುವುದು. ಇಲ್ಲಿ ಪಶ್ಚಿಮ ರೈಲಿನ ಜೊತೆ ಹಾರ್ಬರ್ ಲೈನ್‌ನ ಲೋಕಲ್‌ಗಳೂ ನಿಲ್ಲುವುದು. ಹಾರ್ಬರ್ ಲೈನ್‌ನ ವಿಸ್ತಾರ 31 ಮಾರ್ಚ್ 2017 ರೊಳಗೆ ಮಾಡಲಾಗುವುದು. ಅನಂತರ ಗೋರೆಗಾಂವ್-ಅಂಧೇರಿ ನಡುವಿನ ನೂಕುನುಗ್ಗಲು ಸ್ವಲ್ಪ ಕಡಿಮೆ ಆಗಬಹುದಾಗಿದೆ. ಜೋಗೇಶ್ವರಿ ಮತ್ತು ಗೋರೆಗಾಂವ್ ನಿಲ್ದಾಣಗಳ ನಡುವೆ ಮತ್ತೊಂದು ರೈಲು ನಿಲ್ದಾಣ ಬೇಕು ಎನ್ನುವ ಯೋಜನೆಯಂತೆ 2008ರಲ್ಲೇ ಇದು ಆಗಬೇಕಿತ್ತು. ಆದರೆ ಸ್ಥಳೀಯ ಜನರು ಇಲ್ಲಿ ರೋಡ್ ಓವರ್ ಬ್ರಿಜ್ಜ್‌ನಡಿಮ್ಯಾಂಡ್ ಮಾಡಿದ್ದರು. ಇಲ್ಲಿನ ಲೆವೆಲ್ ಕ್ರಾಸಿಂಗ್ ಬಂದ್ ಮಾಡಬೇಕಾದರೆ ರೋಡ್ ಓವರ್ ಬ್ರಿಜ್ ಆಗಬೇಕು ಎಂದು ಸ್ಥಳೀಯ ಜನ ಪಟ್ಟು ಹಿಡಿದಿದ್ದರು. ಇದೀಗ ರೋಡ್ ಓವರ್ ಬ್ರಿಜ್ ಆರಂಭವಾಗಿದೆ. ಲೆವೆಲ್ ಕ್ರಾಸಿಂಗ್ ಗೇಟ್ ಬಂದ್ ಆಗುವ ತನಕ ಈ ನಿಲ್ದಾಣನ ಪ್ಲ್ಯಾಟ್‌ಫಾರ್ಮ್ ಕೆಲಸವೂ ಸರಿಯಾಗಿ ನಡೆಯುತ್ತಿರಲಿಲ್ಲ. ಮೊದಲಿನ ಓಶಿವಾರಾ ನಿಲ್ದಾಣನ ಹೆಸರು ರಾಮ ಮಂದಿರ ನಿಲ್ದಾಣ ಎಂದು ಹೆಸರಿಸಲು ಬಿಜೆಪಿ-ಶಿವಸೇನೆ ಪ್ರಯತ್ನಿಸಿತ್ತು. ರಾಜ್ಯ ಸರಕಾರಕ್ಕೆ ಈ ಬಗ್ಗೆ ರೈಲ್ವೆಯು ಪ್ರಸ್ತಾವ ಕಳುಹಿಸಿತ್ತು. ಹಾಗಾಗಿ ಓಶಿವಾರಾ ನಿಲ್ದಾಣನ ಹೆಸರು ರಾಮ್‌ಮಂದಿರ ನಿಲ್ದಾಣ ಎಂದು ಬದಲಾಗಿದೆ. ಈ ನಿಲ್ದಾಣ ರಾಮಮಂದಿರ ಏರಿಯಾದ ಸಮೀಪವಿದೆ.ಸರಕಾರಿ ಔಪಚಾರಿಕತೆ ಪೂರ್ಣಗೊಂಡ ನಂತರ ಉದ್ಘಾಟನೆಗೊಳ್ಳಲಿದೆ.

* * * ಕಾನ್ಪುರ ರೈಲು ದುರ್ಘಟನೆಯ ಬೋಗಿಗಳ
ಮುಂಬೈ ಕನೆಕ್ಷನ್
ಕಾನ್ಪುರದಲ್ಲಿ ಕಳೆದವಾರ (ನ. 20) ಸಂಭವಿಸಿದ ರೈಲು ದುರ್ಘಟನೆಯಲ್ಲಿ ಯಾವೆಲ್ಲ ಬೋಗಿಗಳು ಹಾನಿಗೀಡಾಗಿಯೋ ಸುಮಾರು ಐವತ್ತು ದಿನಗಳ ಮೊದಲು ಆ ಬೋಗಿಗಳ ರಿಪೇರಿ ಮುಂಬೈಯ ಲೋವರ್ ಪರೇಲ್ ವರ್ಕ್‌ಶಾಪ್‌ನಲ್ಲಿ ನಡೆದಿತ್ತು. ಈ ದುರ್ಘಟನೆಯಲ್ಲಿ ನೂರ ಐವತ್ತರಷ್ಟು ಪ್ರಯಾಣಿಕರು ಸಾವನ್ನಪ್ಪಿದ್ದರು. ಈ ದುರ್ಘಟನೆಯ ನಂತರ ಲೋವರ್ ಪರೇಲ್ ರೈಲ್ವೆ ವರ್ಕ್‌ಶಾಪ್ ಮತ್ತು ರೈಲ್ವೆ ಮೈಂಟೆನೆನ್ಸ್‌ಗೆ ಸಂಬಂಧಿಸಿದ ಅಧಿಕಾರಿಗಳು ಕಿರಿಕಿರಿಗೆ ಒಳಗಾಗಿದ್ದಾರೆ. ಇಲ್ಲಿನ ವರಿಷ್ಟ ಅಧಿಕಾರಿಯೊಬ್ಬರ ಪ್ರಕಾರ ಹಾನಿಗೀಡಾಗಿರುವ ಇಂದೋರ್-ಪಾಟ್ನಾ ರೈಲಿನ ಬೋಗಿಗಳು ಪಶ್ಚಿಮ ರೈಲ್ವೆಗೆ ಸೇರಿದವುಗಳು. ಈ ದುರ್ಘಟನೆಯಲ್ಲಿ 14 ಬೋಗಿಗಳು ಹಳಿ ತಪ್ಪಿದ್ದವು. ಈಗಲೂ ದುರ್ಘಟನೆಯ ನಿರ್ದಿಷ್ಟ ಕಾರಣಗಳೇನು ಎಂದು ಸ್ಪಷ್ಟವಾಗಿಲ್ಲ. ರೈಲು ಹಳಿಗಳ ಬಿರುಕು ಈ ದುರ್ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಹೇಳಲಾಗಿದೆ. ಬೋಗಿಯ ಎಕ್ಸೆಲ್‌ನಲ್ಲೂ ಏನಾದರೂ ತೊಂದರೆಗಳಿರುವ ಸಾಧ್ಯತೆಗಳಿವೆ.
ಲೋವರ್ ಪರೇಲ್ ವರ್ಕ್‌ಶಾಪ್‌ನಿಂದ ಚೀಫ್ ರೋಲಿಂಗ್ ಸ್ಟಾಕ್ ಇಂಜಿನಿಯರ್ ಮತ್ತು ಅನ್ಯ ಜನರಿಗೆ ಕಮಿಶನರ್ ಆಫ್ ರೈಲ್ವೆ ಸೇಫ್ಟಿ ಮೈಂಟೆನೆನ್ಸ್‌ಗೆ ಸಂಬಂಧಿಸಿ ಮಾಹಿತಿ ಕೇಳಲಾಗಿದೆ. ಮುಂಬೈಯ ಲೋವರ್ ಪರೇಲ್ ವರ್ಕ್‌ಶಾಪ್‌ನಲ್ಲಿ ಐಸಿಎಫ್ ಮತ್ತು ಎಲ್‌ಎಚ್‌ಬಿಯ ರಿಪೇರಿ ನಡೆಯುತ್ತದೆ. ಪ್ರತೀವರ್ಷ ಸುಮಾರು 1,500 ಬೋಗಿಗಳ ರಿಪೇರಿ ಮಾಡಲಾಗುತ್ತದೆ.
ಮೂಲಗಳ ಪ್ರಕಾರ ಅಂದು ರೈಲು ಇಂದೋರ್‌ನಿಂದ ಹೊರಡುತ್ತಲೇ ಮೊದಲಿಗೆ ಎಸ್-ವನ್ ಬೋಗಿಯ ಪ್ರಯಾಣಿಕರು ಆ ಬೋಗಿಯಲ್ಲಿ ಬೇರೆ ರೀತಿಯ ಶಬ್ದ ಬರುತ್ತಿರುವ ದೂರು ನೀಡಿದ್ದರು. ಈ ದೂರಿನ ಕುರಿತು ತಕ್ಷಣ ಕ್ರಮ ಕೈಗೊಂಡು ಆ ಬೋಗಿಯನ್ನು ತೆಗೆದಿದ್ದರೆ ಬಹುಶ ಈ ದುರ್ಘಟನೆ ಆಗುತ್ತಿರಲಿಲ್ಲವೋ ಏನೋ ಎನ್ನುತ್ತಿದ್ದಾರೆ ಅಧಿಕಾರಿಗಳು.

* * * ಸರಕಾರಿ ವಿಭಾಗಗಳ ಕೆಲಸಗಳಲ್ಲಿ
ನಿಧಾನಗತಿಯ ದೃಶ್ಯ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೋಟ್ ಅಮಾನ್ಯ ತೀರ್ಮಾನ ಕೈಗೊಂಡ ನಂತರ ಜನ ಸಾಮಾನ್ಯರಿಗಿಂತಲೂ ಹೆಚ್ಚು ತೊಂದರೆಗೀಡಾದವರು ಮುಂಬೈಯ ಸರಕಾರಿ ಬಾಬುಗಳು. ಸರಕಾರ ನಂಬುವಂತೆ ಕಪ್ಪುಹಣ ಮತ್ತು ಭ್ರಷ್ಟಾಚಾರದ ಒಂದು ದೊಡ್ಡ ಕಾರಣ ಸರಕಾರಿ ಬಾಬು ಗಳು ಕೂಡಾ. ಕಪ್ಪುಹಣ ದೊಡ್ಡ ಪ್ರಮಾಣದಲ್ಲಿ ಮಹಾನಗರ ಪಾಲಿಕೆ, ಪೊಲೀಸ್, ಪಿಡಬ್ಲ್ಯೂಡಿ, ಆಯುಕ್ತರ, ಕಸ್ಟಮ್, ಮಾರಾಟ ತೆರಿಗೆ, ಸೇವಾ ಶುಲ್ಕ, ಎಕ್ಸೈಸ್ ಡ್ಯೂಟಿ ಮೊದಲಾದ ಸರಕಾರಿ ವಿಭಾಗಗಳ ಲಕ್ಷಗಟ್ಟಲೆ ಅಧಿಕಾರಿಗಳ ಬಳಿಯೂ ಇದೆ! ಈ ಕಾರಣ ಬೆಲೆ ಏರಿಕೆಯೂ ಸಂಭವಿಸುವುದು. ಸ್ಥಿರ-ಚರ ಆಸ್ತಿಗಳ ಬೆಲೆಯೂ ಗಗನಕ್ಕೇರಲು ಕಾರಣವಾಗುವುದು. ಮಹಾರಾಷ್ಟ್ರದ ಪಿ.ಡಬ್ಲ್ಯೂ.ಡಿ. ಮಂತ್ರಿ ಆಗಿದ್ದ ಎನ್.ಸಿ.ಪಿ. ನೇತಾ ಛಗನ್ ಭುಜ್‌ಬಲ್ ಈಗ 700 ಕೋಟಿ ರೂಪಾಯಿಯ ಕಾನೂನು ಬಾಹಿರ ಆಸ್ತಿಯ ಕಾರಣ ಜೈಲ್‌ನಲ್ಲಿದ್ದಾರೆ. ಪಿ.ಡಬ್ಲ್ಯೂ.ಡಿ, ಮಹಾನಗರ ಪಾಲಿಕೆಯಲ್ಲಿ ಇಂಜಿನಿಯರ್‌ಗಳ ಬಳಿ ಕೋಟಿ ರೂಪಾಯಿ ಕ್ಯಾಶ್ ಇರಬಹುದಾಗಿದೆ. ಸರಕಾರಿ ಗುತ್ತಿಗೆ ನೀಡುವ ಸಮಯ ಇವರೆಲ್ಲ ನಗದು ಹಣದಲ್ಲೇ ಲಂಚ ಪಡೆಯುವ ಸಂಗತಿ ಆಗಾಗ ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇದೆ.
ಇದೀಗ ಸರಕಾರಿ ಬಾಬುಗಳು ತಮ್ಮಲ್ಲಿರುವ (ಲಂಚದ) ನಗದು ಹಣವನ್ನು ಬಿಳಿ ಮಾಡುವಲ್ಲಿ ಬ್ಯುಸಿ ಇದ್ದಾರಂತೆ. ಹಾಗಾಗಿ ಅವರಿಗೆಲ್ಲ ಫೈಲ್‌ಗಳನ್ನು ವಿಲೇವಾರಿ ಮಾಡಲು, ಗಮನ ನೀಡಲು ಸಮಯವಿಲ್ಲವಂತೆ.
ಇನ್ನು ಕಸ್ಟಮ್ ಕ್ಲಿಯರಿಂಗ್ ಏಜೆಂಟರಂತೂ ಕಸ್ಟಮ್ ಅಧಿಕಾರಿಗಳಿಗೆ ದೊಡ್ಡ ದೊಡ್ಡ ಗಿಫ್ಟ್ ಕೂಡಾ ನೀಡಬೇಕಾಗುತ್ತದೆ. ದೀಪಾವಳಿ ಆಗಷ್ಟೇ ಕಳೆದುದರಿಂದ ನಗದು ಜೊತೆ ಗಿಫ್ಟ್‌ಗಳೂ ಈ ಸಮಯ ಸರಕಾರಿ ಬಾಬುಗಳ ಮನೆಯಲ್ಲಿ ಬಿದ್ದುಕೊಂಡಿವೆ. ಹಾಗಾಗಿ ಅವರೆಲ್ಲ ಅವುಗಳಿಗೆ ಮುಕ್ತಿ ಕಾಣಿಸಲು ಬ್ಯುಸಿ ಇರುವುದರಿಂದ ಸರಕಾರಿ ಕಚೇರಿಗಳಲ್ಲಿ ನಾಗರಿಕರಿಂದ ಬಂದಿರುವ ಅರ್ಜಿಗಳ ಫೈಲ್‌ಗಳತ್ತ ಗಮನಹರಿಸಲು ಸಮಯ ಸಿಗುತ್ತಿಲ್ಲವಂತೆ!

* * * ಭಿವಂಡಿಯ ಪವರ್‌ಲೂಮ್ ಕಾರ್ಖಾನೆಗಳಿಗೆ ಬಾಗಿಲು
 ಮುಂಬೈ ಸಮೀಪದ ಭಿವಂಡಿ ಶಹರ ದೇಶದ ಅತಿದೊಡ್ಡ ಗ್ರೆ ಕ್ಲಾತ್ ಉತ್ಪಾದನೆಯ ಯಂತ್ರಮಗ್ಗ(ಪವರ್ ಲೂಮ್) ಔದ್ಯೋಗಿಕ ಶಹರವಾಗಿದೆ. ಭಿವಂಡಿಯ ಈ ಪವರ್‌ಲೂಮ್ ಉದ್ಯೋಗ ಸ್ಮಾಲ್ ಸ್ಕೇಲ್ ಇಂಡಸ್ಟ್ರಿಯ ವ್ಯಾಪ್ತಿಯಲ್ಲಿ ಬರುತ್ತದೆ. ಭಿವಂಡಿಯಲ್ಲಿ ಸುಮಾರು ಎಂಟು ಲಕ್ಷ ಪವರ್‌ಲೂಮ್ ಮೆಶಿನ್‌ಗಳಿವೆ. ಇವುಗಳಲ್ಲಿ ಸುಮಾರು ಮೂರೂವರೆ ಲಕ್ಷಕ್ಕೂ ಅಧಿಕ ಕಾರ್ಮಿಕರಿಗೆ ನೇರವಾಗಿ ಉದ್ಯೋಗ ಸಿಗುವುದು. ನವೆಂಬರ್ 8 ರಂದು ಕೇಂದ್ರ ಸರಕಾರದ ವತಿಯಿಂದ 500-1000 ದ ನೋಟು ರದ್ದತಿಯ ಘೋಷಣೆಯಿಂದ ಭಿವಂಡಿಯ ಕಾರ್ಮಿಕರು ಕೆಲಸ ತ್ಯಜಿಸಿ ತಮ್ಮೂರಿಗೆ ಪಲಾಯನ ಮಾಡುತ್ತಿರುವ ದೃಶ್ಯ ಹೆಚ್ಚಾಗಿದೆ. ಮೊದಲೇ ವಿದ್ಯುತ್ ಸರಿಯಾಗಿ ದೊರೆಯದೆ ಕುಂಟುತ್ತಾ ಸಾಗುತ್ತಿರುವ ಇಲ್ಲಿನ ದಂಧೆಗೆ ಈಗ ಇನ್ನೊಂದು ಹೊಡೆತ ಬಿದ್ದಿದೆ. ಇಲ್ಲಿನ ಪವರ್‌ಲೂಮ್ ಮಾಲಕರಿಗೆ ಮತ್ತು ಕಾರ್ಮಿಕರಿಗೆ ನೂರರಿಂದ ನಾಲ್ಕು ಸಾವಿರ ರೂಪಾಯಿಗಳಿಗಾಗಿ ಬ್ಯಾಂಕ್‌ಗಳ ಮುಂದೆ ಕ್ಯೂ ನಿಲ್ಲುವ ಸ್ಥಿತಿ ಬಂದಿದೆ. ಬ್ಯಾಂಕ್‌ಗಳು 2,4,6,10 ಸಾವಿರ ಹೀಗೆ ಚೆಕ್ ಬರೆಯಲು ಹೇಳುತ್ತವೆ. 3,5,7, ಸಾವಿರ.... ಬರೆದರೆ ತಮ್ಮಲ್ಲಿರುವುದು ಎರಡು ಸಾವಿರದ ನೋಟುಗಳು ಮಾತ್ರ ಎನ್ನುತ್ತವೆ.
ಭಿವಂಡಿಯ ಸ್ಥಿತಿ ಎಷ್ಟೊಂದು ಕೆಟ್ಟದಾಗಿದೆ ಅಂದರೆ ವ್ಯಾಪಾರದಲ್ಲಿ ತೀವ್ರ ಇಳಿಮುಖವಾಗಿದ್ದರೂ ಕಷ್ಟದಲ್ಲಿ ತಮ್ಮ ಪವರ್‌ಲೂಮ್ ಕಂಪೆನಿ ನಡೆಸುತ್ತಿರುವ ಮಾಲಕರು ಇದೀಗ ತಮ್ಮ ನೌಕರರಿಗೆ ಹಳೆನೋಟುಗಳನ್ನೇ ಸಂಬಳವಾಗಿ ನೀಡುತ್ತಿದ್ದಾರೆ. ಈ ನೋಟುಗಳನ್ನು ಬದಲಿಸಲು ಕಾರ್ಮಿಕರು ರಜೆ ಹಾಕಿ ಬ್ಯಾಂಕ್‌ನ ಮುಂದೆ ಸಾಲಲ್ಲಿ ನಿಲ್ಲುವಂತಾಗಿದೆ. ಮುಂದಿನ ತಿಂಗಳ ಸಂಬಳ ಕೂಡಾ ಹಳೆ ನೋಟುಗಳಲ್ಲೇ ನೀಡುವುದಾಗಿ ಮಾಲಕರು ಹೇಳಿದ್ದರಿಂದ ಅನೇಕರು ಕೆಲಸ ತ್ಯಜಿಸಿ ತಮ್ಮೂರಿಗೆ ಹೋಗುತ್ತಿದ್ದಾರೆ. ಅನೇಕ ಕಡೆ ಬ್ಯಾಂಕ್ ಮುಂದೆ ಪೊಲೀಸ್ ಲಾಟಿಯ ರುಚಿ ಕೂಡಾ ಈ ಕಾರ್ಮಿಕರು ಅನುಭವಿಸುತ್ತಿದ್ದಾರೆ. ಕೆಲವು ಮಾಲಕರು ತಮ್ಮ ಕಂಪೆನಿಗಳನ್ನೇ ಮುಚ್ಚಿದ್ದಾರೆ.
ಇದರ ಲಾಭವನ್ನು ಪಡೆದ ಕೆಲವು ವ್ಯಾಪಾರಿಗಳು ಸದ್ಯ ಇರುವ ಬೆಲೆಯಲ್ಲಿ ಎರಡು ರೂಪಾಯಿ ಪ್ರತೀ ಮೀಟರ್‌ಗೆ ಕಡಿಮೆ ಮಾಡಿ ಕಂಪೆನಿ ಮಾಲಕರಿಂದ ಬಟ್ಟೆ ಕೇಳುತ್ತಿದ್ದಾರೆ!

* * * ಮುಂಬೈಯಲ್ಲಿ ಕಳ್ಳತನವಾದ ಮೊಬೈಲ್‌ಗಳು
ಬ್ಯಾಂಕಾಕ್ ಮಾಲ್‌ನಲ್ಲಿ!
ಮುಂಬೈಯ ಲೋಕಲ್ ರೈಲುಗಳಲ್ಲಿ ಮೊಬೈಲ್ ಕಳ್ಳರು ಸದಾ ಸಕ್ರಿಯರು. ಆದರೆ ಈ ಕಳ್ಳರು ಕದ್ದ ದುಬಾರಿ ಮೊಬೈಲ್‌ಗಳು ನೇರವಾಗಿ ಬ್ಯಾಂಕಾಕ್ ಮಾಲ್‌ನಲ್ಲಿ ದೊರೆಯುತ್ತಿರುವ ಸಂಗತಿಯೊಂದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಬಂಧಿತ ಕಳ್ಳರಿಂದ ಈ ಸಂಗತಿ ಬೆಳಕಿಗೆ ಬಂದಿದೆ. ಈ ಕಳ್ಳರು ತಾವು ಕದ್ದ ಮೊಬೈಲ್‌ಗಳನ್ನು ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ನಲ್ಲಿ ಮಾರುತ್ತಿದ್ದರು. ಈ ತಂಡದ ನಾಯಕ ನೂರುಲ್ಲಾಹ್‌ನನ್ನು ಮುಂಬೈ ಸೆಂಟ್ರಲ್‌ನ ಮರಾಠ ಮಂದಿರದ ಬಳಿ ಬಂಧಿಸಲಾಗಿತ್ತು. ಈತ ಕಳ್ಳತನದ ಮೊಬೈಲ್‌ಗಳನ್ನು ಥಾಯ್ಲೆಂಡ್‌ಗೆ ಒಯ್ಯಲು ಹೊರಡುತ್ತಿದ್ದ. ಅಲ್ಲಿನ ಚೋರ್ ಬಜಾರ್‌ನಲ್ಲಿ ಮಾರುವುದು ಬಹಳ ಸಮಯದಿಂದ ಈತ ಮಾಡುತ್ತಿದ್ದುದು ತಿಳಿದು ಬಂತು. ಹಾಗೆ ನೋಡಿದರೆ ಮುಂಬೈಯಲ್ಲಿ ಕೂಡಾ ಚೋರ್ ಬಜಾರ್ ಇದೆ. ಬಹಳ ಕಾಲದಿಂದ ಮುಂಬೈ ಚೋರ್ ಬಜಾರ್ ಕೂಡಾ ದೇಶದಾದ್ಯಂತ ಪ್ರಸಿದ್ಧಿ ಪಡೆದಿದೆ.

ಕ್ರೈಂ ಬ್ರ್ಯಾಂಚ್ ಅಧಿಕಾರಿಗಳ ಅನುಸಾರ ಈ ಮೊಬೈಲ್ ಚೋರ್ ತಂಡಗಳು ಸಾಮಾನ್ಯವಾಗಿ ಐಎಂಇಐ ನಂಬರ್ ತೆಗೆದು ಅಕ್ಕಪಕ್ಕದ ರಾಜ್ಯಗಳಲ್ಲಿ ಮಾರುತ್ತಾರೆ. ಆದರೆ ಕಳ್ಳತನಗೈದ ಮೊಬೈಲ್‌ಗಳನ್ನು ದೇಶದ ಹೊರಗಡೆ ಒಯ್ದು ಮಾರುವ ಘಟನೆ ಇದೇ ಮೊದಲಿಗೆ ಕಂಡು ಬಂದದ್ದಂತೆ. ಆತ ವಿಮಾನದಿಂದ ಬ್ಯಾಂಕಾಕ್‌ಗೆ ತೆರಳುತ್ತಿದ್ದ. ಅಲ್ಲಿನ ಮಾಲ್ ಎಂ.ಬಿ.ಕೆ ಸೆಂಟರ್‌ಗೆ ತೆರಳಿ ಈ ಮೊಬೈಲ್‌ಗಳನ್ನು ಮಾರುತ್ತಿದ್ದ. ಈ ಮಾಲ್‌ನಲ್ಲಿ ಕೇವಲ ಕಳ್ಳತನದ ಮೊಬೈಲ್‌ಗಳ ಖರೀದಿ-ಮಾರಾಟ ನಡೆಯುತ್ತದೆ ಎನ್ನುತ್ತಾನೆ ನೂರುಲ್ಲಾಹ್. ಈತ ತನಿಖೆಯಲ್ಲಿ ತಾನು ಕೆಲವು ಬಾರಿ ಬ್ಯಾಂಕಾಕ್‌ಗೆ ಹೋಗಿ ಬಂದಿದ್ದೆ ಅನ್ನುತ್ತಾನೆ. ಆತ ಅಲ್ಲಿ ಮೊಬೈಲ್ ಮಾರಿ ಬದಲಾಗಿ ಟಿ.ವಿ.-ಇಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಇಲ್ಲಿಗೆ ತರುತ್ತಿದ್ದ. ಆರಂಭದಲ್ಲಿ ಈತನೇ ರೈಲುಗಳಲ್ಲ್ಲಿ ಪ್ರಯಾಣಿಕರ ಮೊಬೈಲ್ ಕದಿಯುತ್ತಿದ್ದ. ನಂತರ ಇತರ ಕಳ್ಳರ ಮೊಬೈಲ್ ಕೂಡಾ ಖರೀದಿಸುವುದಕ್ಕೆ ಆರಂಭಿಸಿದ್ದ ಎಂದು ತಿಳಿದುಬಂತು.

* * * ಇಪ್ಪತ್ತು ನಿಮಿಷದಲ್ಲಿ 125 ಕೋಟಿ ರೂ. ಪ್ರಸ್ತಾವ ಮಂಜೂರು

ಮುಂಬೈ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯಲ್ಲಿ ಕೇವಲ ಇಪ್ಪತ್ತು ನಿಮಿಷದಲ್ಲಿ 125 ಕೋಟಿ ರೂಪಾಯಿ ವಿಕಾಸ ಕಾರ್ಯಗಳ ಪ್ರಸ್ತಾವ ಮಂಜೂರು ಮಾಡಲಾದ ಘಟನೆ ನಡೆದಿದೆ. ಮಹಾನಗರ ಪಾಲಿಕೆಗೆ 2017 ರ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿರುವ ಕಾರಣ ಆಚಾರ - ಸಂಹಿತೆ ಜ್ಯಾರಿಯಾಗುವ ಮೊದಲೇ ನಗರ ಸೇವಕರು ಹೆಚ್ಚೆಚ್ಚು ಪ್ರಸ್ತಾವಗಳನ್ನು ಮಂಜೂರು ಮಾಡಲು ಮುಂದಾಗಿರುವುದು ಕಂಡುಬಂದಿದೆ. ವಿಶೇಷ ಅಂದರೆ ಈ ಪ್ರಸ್ತಾವ ಮಂಜೂರು ಮಾಡುವಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳು ಎರಡೂ ಜೊತೆಗೂಡಿವೆ! ಸ್ಥಾಯಿ ಸಮಿತಿಯ ಬೈಠಕ್‌ನಲ್ಲಿ ಆಸ್ಪತ್ರೆಗಳಲ್ಲಿ ಇಸಿಜಿ ಮೆಷಿನ್, ಅವಶ್ಯಕ ಚಿಕಿತ್ಸಾ ಸಾಮಾಗ್ರಿ, ಶಾಲಾ ಕಟ್ಟಡಗಳ ರಿಪೇರಿ, ಬ್ರಿಜ್‌ಗಳ ರಿಪೇರಿ, ಅಗ್ನಿಶಾಮಕ ದಳದ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳ. ಹೈವೇಗಳಲ್ಲಿ ಸಿಸಿಟಿವಿ.....ಮೊದಲಾದವುಗಳ ಸಹಿತ ರೂ.125 ಕೋಟಿಯ ಪ್ರಸ್ತಾವ ಚಿಟಿಕೆ ಹೊಡೆಯುವಲ್ಲಿ ಮಂಜೂರು ಮಾಡಲಾಯಿತು. ಕಳೆದ ಮೂರೂ ಬೈಠಕ್‌ಗಳಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಗರ ಸೇವಕರು ಗೈರುಹಾಜರಾಗುತ್ತಿಲ್ಲ!
ಆದರೆ 500 ಮತ್ತು ಸಾವಿರದ ಹಳೆ ನೋಟುಗಳ ನಿಷೇಧದ ನಂತರ ಮನಪಾ ಗುತ್ತಿಗೆದಾರರಿಗೆ ತಮ್ಮ ಕಾರ್ಮಿಕರಿಗೆ ನೀಡಲು ಹಣದ ಕೊರತೆ ಉಂಟಾಗಿದೆಯಂತೆ.
* * * * * * * * * * * * * * * * * * *

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News