ಭದ್ರತಾ ಮಂಡಳಿಯ ತುರ್ತು ಸಭೆಗೆ ಫ್ರಾನ್ಸ್ ಕರೆ
ಪ್ಯಾರಿಸ್, ನ. 29: ಸಿರಿಯದ ಮುತ್ತಿಗೆಗೊಳಗಾದ ನಗರದ ಅಲೆಪ್ಪೊದಲ್ಲಿ ಉದ್ಭವಿಸಿರುವ ಮಾನವೀಯ ದುರಂತವನ್ನು ನಿಭಾಯಿಸುವ ಬಗ್ಗೆ ಚರ್ಚಿಸಲು ತಕ್ಷಣ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ ಕರೆಯಬೇಕೆಂದು ಫ್ರಾನ್ಸ್ ಮಂಗಳವಾರ ಕರೆ ನೀಡಿದೆ.
‘‘ಅಲೆಪ್ಪೊದಲ್ಲಿ ಸಂಘರ್ಷವನ್ನು ನಿಲ್ಲಿಸುವ ಹಾಗೂ ಮಾನವೀಯ ನೆರವವನ್ನು ಕೈಗೆತ್ತಿಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ’’ ಎಂದು ವಿದೇಶ ಸಚಿವ ಜೀನ್-ಮಾರ್ಕ್ ಅಯ್‌ರಾಲ್ಟ್ ಅಲೆಪ್ಪೊದಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದರು.
ಅಲೆಪ್ಪೊದಲ್ಲಿ ಸರಕಾರಿ ಪಡೆಗಳು ಮತ್ತು ಬಂಡುಕೋರರ ನಡುವಿನ ಕಾಳಗದಲ್ಲಿ ಸಾವಿರಾರು ನಾಗರಿಕರು ಸಿಕ್ಕಿಹಾಕಿಕೊಂಡಿದ್ದಾರೆ.
ಸಿರಿಯದ ಸೇನೆಯು ಪೂರ್ವ ಅಲೆಪ್ಪೊದ ತೀರಾ ಒಳಗೆ ಮುಂದುವರಿಯುತ್ತಿದ್ದಂತೆಯೇ ಫ್ರಾನ್ಸ್ ಈ ಕರೆಯನ್ನು ನೀಡಿದೆ. ಇಡೀ ನಗರವನ್ನು ಮರುಸ್ವಾಧೀನಪಡಿಸಿಕೊಳ್ಳುವ ಯೋಜನೆಯೊಂದಿಗೆ ಬಂಡುಕೋರರ ಸ್ವಾಧೀನದಲ್ಲಿದ್ದ ಹಲವಾರು ಉಪನಗರಗಳನ್ನು ಸೇನೆ ಈಗಾಗಲೇ ವಶಪಡಿಸಿಕೊಂಡಿದೆ.
ಸಾವಿರಾರು ಹತಾಶ ನಾಗರಿಕರು ನಗರದಿಂದ ಪಲಾಯನಗೈಯುತ್ತಿದ್ದಾರೆ. ಹೆಚ್ಚಿನವರು ಸರಕಾರಿ ಅಥವಾ ಕುರ್ದಿಶ್ ಪಡೆಗಳ ನಿಯಂತ್ರಣದಲ್ಲಿರುವ ಜಿಲ್ಲೆಗಳಿಗೆ ಪಲಾಯನಗೈದಿದ್ದಾರೆ.