×
Ad

ಪ್ಯಾರಿಸ್ ಅಲ್ಲ. ಇದು ಭಾರತದ ಪ್ರಮುಖ ನಗರ!

Update: 2016-11-30 09:17 IST

ಹೊಸದಿಲ್ಲಿ, ನ.30: ಸೋಮವಾರ ಮಧ್ಯರಾತ್ರಿ ಯುರೋಪಿನ ಗಗನಯಾತ್ರಿ ಥಾಮಸ್ ಪೆಸ್ಕ್ವೆಟ್, ಬಾಹ್ಯಾಕಾಶದಿಂದ ಕ್ಲಿಕ್ಕಿಸಿದ ನಗರವೊಂದರ ಆಕರ್ಷಕ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಆದರೆ ಇದು ಯಾವ ನಗರ ಎಂಬ ಕಲ್ಪನೆ ಅವರಿಗೆ ಇರಲಿಲ್ಲ.
"ಇದು ರಾತ್ರಿವೇಳೆ ನಾನು ತೆಗೆದ ಮೊಟ್ಟಮೊದಲ ಬಾಹ್ಯಾಕಾಶ ಚಿತ್ರ. ಇದು ಯಾವ ನಗರ ಎಂಬ ಅರಿವು ನನಗಿಲ್ಲ. ನಿಮಗೆ ಇದೆಯೇ" ಎಂದು ಫ್ರಾನ್ಸ್ ಮೂಲದ ಪೆಸ್ಕ್ವೆಟ್ ಟ್ವೀಟಿಸಿದ್ದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಆರು ತಿಂಗಳ ಗಗನಯಾತ್ರೆಗಾಗಿ ಅವರು ತೆರಳಿದ್ದಾರೆ.
ಇದು ಟ್ವಿಟ್ಟರ್‌ನಲ್ಲಿ ರೋಮಾಂಚನ ಮೂಡಿಸಿತು. ಈ ನಗರ ಯಾವುದು ಎಂದು ತಿಳಿಯುವ ಪ್ರಯತ್ನವನ್ನು ಹಲವರು ಮಾಡಿದರು. ಬಹುತೇಕ ಮಂದಿ ಇದನ್ನು ಪ್ಯಾರೀಸ್ ಎಂದು ಅಂದಾಜಿಸಿದರೆ, ವಾಸ್ತವವಾಗಿ ಅದು ಹೊಸದಿಲ್ಲಿ ಆಗಿತ್ತು. "ಇದು ಈಶಾನ್ಯ ಭಾಗದಿಂದ ತೆಗೆದ ಹೊಸದಿಲ್ಲಿಯ ಚಿತ್ರ. ರಾತ್ರಿ 10ರ ಸುಮಾರಿಗೆ ಪ್ರಖರವಾಗಿ ಪಕ್ಕದಲ್ಲಿ ಕಾಣುತ್ತಿರುವುದು ಜೈಪುರ" ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಸ್ಪಷ್ಟನೆ ನೀಡಿದರು.
"ಮತ್ತೊಬ್ಬ ಟ್ವಿಟ್ಟರ್ ಬಳಕೆದಾರ, "ನಾನು ಕಂಡುಹಿಡಿಯುವುದು ಸ್ವಲ್ಪ ವಿಳಂಬವಾಯಿತು. ಖಂಡಿತವಾಗಿಯೂ ಇದು ಹೊಸದಿಲ್ಲಿ" ಎಂದು ಅನುಮೋದಿಸಿದರು.
ಮೊದಲು ಟ್ವೀಟ್ ಮಾಡಿದ ಹನ್ನೆರಡು ಗಂಟೆ ಬಳಿಕ ಪೆಸ್ಕ್ವೆಟ್ ಟ್ವೀಟ್ ಮಾಡಿ ಇದನ್ನು ಖಚಿತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News