×
Ad

ಕೇರಳದ ಜೈಲಿನಲ್ಲಿ ಕೊಳೆಯುತ್ತಿರುವ ಪಾಕ್ ಪ್ರಜೆ

Update: 2016-11-30 16:08 IST

ಕೊಚ್ಚಿ,ನ.30: ಪಾಕಿಸ್ತಾನಿ ಪ್ರಜೆಯೋರ್ವ ಇಲ್ಲಿಯ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ನ್ಯಾಯಾಲಯದಿಂದ ಆರೋಪ ಮುಕ್ತಗೊಂಡಿದ್ದಾನಾದರೂ ಭಾರತದಲ್ಲಿ ತನ್ನ ದೇಶದ ರಾಯಭಾರಿ ಕಚೇರಿಯಿಂದ ನೆರವು ದೊರೆಯದೆ ಹಲವಾರು ತಿಂಗಳುಗಳಿಂದ ಎರ್ನಾಕುಲಂ ಜಿಲ್ಲಾ ಕಾರಾಗೃಹದಲ್ಲಿ ಕೊಳೆಯುತ್ತಿದ್ದಾನೆ.

 ಅಬ್ದುಲ್ ಕಾದಿರ್ ಕಳೆದ ವರ್ಷದ ಜುಲೈನಲ್ಲಿ ತಟ ರಕ್ಷಣಾ ಪಡೆಯು ಕೇರಳ ಕರಾವಳಿಯಾಚೆ ವಶಪಡಿಸಿಕೊಂಡಿದ್ದ ‘ಬರೂಕಿ’ ಹೆಸರಿನ ಇರಾನಿ ಬೋಟ್‌ನ 11 ಸಿಬ್ಬಂದಿಗಳ ಪೈಕಿ ಓರ್ವನಾಗಿದ್ದಾನೆ. ಈತ ಓರ್ವನೇ ಪಾಕಿಸ್ತಾನಿ ಪ್ರಜೆಯಾಗಿದ್ದು, ಉಳಿದ ಸಿಬ್ಬಂದಿಗಳು ಇರಾನ್ ಪ್ರಜೆಗಳಾಗಿದ್ದರು. ವಿಚಾರಣೆಯ ಬಳಿಕ ಎನ್‌ಐಎ ನ್ಯಾಯಾಲಯವು ಎಲ್ಲರನ್ನೂ ಬಿಡುಗಡೆಗೊಳಿಸಿದ್ದು, ಇರಾನಿ ಸಿಬ್ಬಂದಿಗಳು ದಿಲ್ಲಿಯಲ್ಲಿ ರುವ ತಮ್ಮ ದೇಶದ ರಾಯಭಾರಿ ಕಚೇರಿಯ ನೆರವಿನಿಂದ ಸ್ವದೇಶಕ್ಕೆ ಮರಳಿದ್ದರೆ ಕಾದಿರ್ ಮಾತ್ರ ಇಲ್ಲಿಯೇ ಬಾಕಿಯಾಗಿದ್ದಾನೆ.

 ಕಾದಿರ್ ಜೈಲು ಅಧಿಕಾರಿಗಳಿಗೆ ಬಲೂಚಿಸ್ತಾನ್ ಮತ್ತು ಸಿಂಧ್‌ನ ತನ್ನ ಎರಡು ವಿಳಾಸಗಳನ್ನು ನೀಡಿದ್ದಾನೆ ಎಂದು ನಿನ್ನೆ ಜೈಲಿನಲ್ಲಿಯ ವ್ಯವಸ್ಥೆಗಳನ್ನು ಪರಿಶೀಲಿಸಲು ಭೇಟಿ ನೀಡಿದ್ದ ಸ್ಥಳೀಯ ಶಾಸಕ ಹಾಗೂ ಮಾಜಿ ಸಂಸದ ಪಿ.ಟಿ.ಥಾಮಸ್ ಅವರು ಇಂದಿಲ್ಲಿ ಸುದ್ದಿಸಂಸ್ಥಗೆ ತಿಳಿಸಿದರು. ಪಾಕ್ ರಾಯಭಾರಿ ಕಚೇರಿಯು ಹಸ್ತಕ್ಷೇಪ ಮಾಡುತ್ತದೆ ಮತ್ತು ಕಾದಿರ್‌ನನ್ನು ಗಡೀಪಾರು ಮಾಡುವಲ್ಲಿ ಭಾರತೀಯ ಅಧಿಕಾರಿಗಳೊಂದಿಗೆ ಸಹಕರಿಸುತ್ತದೆ ಎಂಬ ಆಶಯ ವ್ಯಕ್ತಪಡಿಸಿದರು.

ಕಾದಿರ್ ಪತ್ನಿ ಸರೀನಾ,ಕಾಯಿಲೆಪೀಡಿತ ತಾಯಿ ಬೆಚೆಲ್ ಮತ್ತು ಸೋದರಿ ಸೋಭಾರನ್ನೊಳಗೊಂಡ ತನ್ನ ಕುಟುಂಬದ ಏಕಮೇವ ಆಧಾರವಾಗಿದ್ದಾನೆ. ಆತನಿಗೆ ಮಕ್ಕಳಿಲ್ಲ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News