ಫೈಝಲ್ ಹತ್ಯೆ: ಆರೋಪಿಗಳ ರಕ್ಷಣೆಗೆ ಆರೆಸ್ಸೆಸ್ ನಿಂದ ಯತ್ನ ?
ತಿರೂರಂಙಾಡಿ, ನ. 30: ಕೊಡಿಂಞಿ ಫೈಝಲ್ ಕೊಲೆ ಪ್ರಕರಣದ ಮುಖ್ಯ ಆರೋಪಿಗಳನ್ನು ಬದಲಾಯಿಸಲು ಆರೆಸ್ಸೆಸ್ ಪ್ರಯತ್ನಿಸುತ್ತಿದೆಯೆಂದು ವೆಬ್‌ಪೋರ್ಟಲೊಂದು ವರದಿ ಮಾಡಿದೆ. ಫೈಝಲ್‌ರನ್ನು ಕಡಿದುಕೊಲೆಗೈದ ಎಲ್ಲರ ಕುರಿತು ಪೊಲೀಸರಿಗೆ ಸ್ಪಷ್ಟ ಮಾಹಿತಿ ಲಭಿಸಿದ್ದರೂ ಬೇರೆಯೇ ಮೂವರನ್ನು ಆರೋಪಿಗಳನ್ನಾಗಿಸುವ ಪ್ರಯತ್ನ ನಡೆಯುತ್ತಿದೆ.
ನೈಜ ಆರೋಪಿಗಳನ್ನು ರಕ್ಷಿಸಿ ಇತರ ಮೂವರನ್ನು ಕೇಸನ್ನು ವಹಿಸಿಕೊಳ್ಳಲು ಸಿದ್ಧಪಡಿಸಲಾಗಿದೆ. ಇವರನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಕೂಡಾ ಹೇಳಲಾಗುತ್ತಿದೆ. ಆದರೆ ಭೂಗತರಾಗಿರುವವರು ಪತ್ತೆಯಾದ ಬಳಿಕ ಮಾತ್ರವೇ ನೈಜ ಆರೋಪಿಗಳು ಯಾರೆಂದು ಗೊತ್ತಾಗಲಿದ್ದು, ಪೊಲೀಸರು ಅಡಗಿಕೂತಿರುವವರ ಪತ್ತೆಗೆ ಬಲೆ ಬೀಸಿದ್ದಾರೆ. ಮತಾಂತರಗೊಂಡಿದ್ದ ಪೈಝಲ್‌ರನ್ನು ಕೊಲೆಗೈಯ್ಯಲು ಸಂಚು ಹೆಣೆದ ತಂಡದಲ್ಲಿ ಕೆಲವರು ಇನ್ನು ಕೂಡಾ ಪತ್ತೆಯಾಗಿಲ್ಲ. ಅವರನ್ನು ಕಸ್ಟಡಿಗೆ ಪಡೆದು ಪ್ರಶ್ನಿಸಬೇಕೆಂದು ಬಲವಾದ ಬೇಡಿಕೆ ಕೇಳಿ ಬರುತ್ತಿದೆ.
ಮಲಪ್ಪುರಂನ ವಿದ್ಯಾನಿಕೇತನ್ ಸ್ಕೂಲ್‌ನಲ್ಲಿ ಫೈಝಲ್ ಹತ್ಯೆಗೆ ಸಂಚು ನಡೆಸಲಾಗಿತ್ತು ಎನ್ನಲಾಗುತ್ತಿದೆ. ಕೆಲವು ಪ್ರಾದೇಶಿಕ ಆರೆಸ್ಸೆಸ್ ನಾಯಕರನ್ನು ಪ್ರಶ್ನಿಸಿ ಬಿಟ್ಟು ಬಿಡಲಾಗಿದ್ದು ಇದು ಕಸ್ಟಡಿಯಲ್ಲಿರುವವರ ಪೋಷಕರಲ್ಲಿ ಕೋಪಕ್ಕೆ ಕಾರಣವಾಗಿದೆ. ಸಂಚಿನಲ್ಲಿ ಪಾಲ್ಗೊಂಡವರಲ್ಲಿ ಕೆಲವರನ್ನು ಇನ್ನು ಕೂಡಾ ಬಂಧಿಸಲು ಪೊಲೀಸರಿಂದ ಸಾಧ್ಯವಾಗಿಲ್ಲ ಎನ್ನಲಾಗಿದೆ.
ತಿರೂರಿನ ಪ್ರಮಖ ನಾಯಕರೊಬ್ಬರುಫೈಝಲ್‌ರನ್ನು ಹತ್ಯೆಗೈಯ್ಯುವುದಕ್ಕೆ ಮೂರು ಮಂದಿಯ ತಂಡವನ್ನು ನಿಗದಿಪಡಿಸಿದ್ದರು ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ. ಇಂತಹ ತನಿಖೆಯಲ್ಲಿ ಇತರ ಆರೋಪಿಗಳ ಕುರಿತು ಪೊಲೀಸರಿಗೆ ಸ್ಪಷ್ಟ ವಿವರ ಲಭಿಸಿದೆ. ಈ ನಡುವೆ ಸಂಘಪರಿವಾರದ ನಾಯಕರು ಕೇಸನ್ನು ಬುಡಮೇಲುಗೊಳಿಸುವ ಯತ್ನ ನಡೆಸುತ್ತಿದ್ದಾರೆಂದು ಸೂಚನೆಗಳು ಲಭಿಸಿವೆ ಎಂದು ವರದಿ ತಿಳಿಸಿದೆ.