ಕಾರ್ಖಾನೆಗಳ ಕಾರ್ಮಿಕರಿಗೆ ನಗದು ಹಣದ ಬದಲು ಕೂಪನ್ ವಿತರಣೆ
ಆಗ್ರಾ,ನ.30: ಕೇಂದ್ರದ ನೋಟು ನಿಷೇಧ ಕ್ರಮವು ಜನಸಾಮಾನ್ಯರಿಗೆ ಬಹಳಷ್ಟು ಸಂಕಷ್ಟಗಳನ್ನುಂಟು ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆಗ್ರಾದಲ್ಲಿನ ಶೂ ತಯಾರಿಕೆ ಘಟಕಗಳಲ್ಲಿ ದುಡಿಯುತ್ತಿರುವ ಸುಮಾರು 50,000 ಕಾರ್ಮಿಕರು ತಮ್ಮ ವಾರದ ಸಂಬಳವನ್ನು ಪಡೆಯಲು ಪರದಾಡುತ್ತಿರುವುದು ಇದಕ್ಕೊಂದು ನಿದರ್ಶನವಾಗಿದೆ.
ದಿನಗೂಲಿ ಕಾರ್ಮಿಕರಿಗೆ ನೀಡಲು ನಗದು ಹಣವಿಲ್ಲ. ಹೀಗಾಗಿ ಶೂ ಫ್ಯಾಕ್ಟರಿಗಳ ಮಾಲಿಕರು ಸೂಪರ್ ಮಾರ್ಕೆಟ್‌ಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ತಮ್ಮ ಕಾರ್ಮಿಕರಿಗೆ ಕೂಪನ್‌ಗಳನ್ನು ನೀಡುತ್ತಿದ್ದಾರೆ. ಕಾರ್ಮಿಕರು ಈ ಕೂಪನ್‌ಗಳನ್ನು ಸೂಪರ್ ಮಾರ್ಕಟ್‌ಗಳಲ್ಲಿ ನೀಡಿ ತಮ್ಮ ದೈನಂದಿನ ಅಗತ್ಯ ಸಾಮಗ್ರಿಗಳನ್ನು ಖರೀದಿಸಬಹುದಾಗಿದೆ.
ಆದರೆ ಈ ಸೂಪರ್ ಮಾರ್ಕೆಟ್‌ಗಳಲ್ಲಿ ತುತ್ತಿನ ಚೀಲವನ್ನು ತುಂಬಿಕೊಳ್ಳಲು ಅಗತ್ಯವಾಗಿರುವ ಆಹಾರ ಧಾನ್ಯಗಳ ಬೆಲೆ ಸ್ಥಳೀಯ ಇತರ ಅಂಗಡಿಗಳಿಗಿಂತ ದುಬಾರಿಯಾಗಿರುವುದು ಈ ಕಾರ್ಮಿಕರನು ಇನ್ನಷ್ಟು ಕಂಗೆಡಿಸಿದೆ.
ಅಲ್ಲದೆ ಕಾರ್ಮಿಕನ ಬಳಿ 2000ರೂ ಕೂಪನ್ ಇದ್ದರೆ ಆತ ಅಷ್ಟೂ ಹಣಕ್ಕೆ ಸೂಪರ್‌ಮಾರ್ಕೆಟ್‌ನಿಂದ ಸಾಮಗ್ರಿಗಳನ್ನು ಖರೀದಿಸುವ ಅನಿವಾರ್ಯತೆಯಿದೆ. ಏಕೆಂದರೆ ಈ ಸೂಪರ್ ಮಾರ್ಕೆಟ್‌ಗಳು ಚಿಲ್ಲರೆ ವಾಪಸ್‌ಕೊಡಲು ನಿರಾಕರಿಸುತ್ತಿವೆ.
ಕಾರ್ಮಿಕರ ಬವಣೆ ಆಗ್ರಾಕ್ಕೆ ಮಾತ್ರ ಸೀಮಿತವಲ್ಲ. ದಿಲ್ಲಿಯಲ್ಲಿನ ಹಣ್ಣು ಮತ್ತು ತರಕಾರಿ ಮಂಡಿಗಳು ಈಗಾಗಲೆ ನೋಟು ನಿಷೇಧದಿಂದಾಗಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿವೆ. ಸಗಟು ಮಾರುಕಟ್ಟೆಗಳಲ್ಲಿ ಮಾರಾಟವು ಕುಸಿದಿದ್ದು,ಬದುಕಿನ ಬಂಡಿಯನ್ನು ಸಾಗಿಸಲು ದಿನಗೂಲಿ ಕಾರ್ಮಿಕರು ಒದ್ದಾಡುತ್ತಿದ್ದಾರೆ.
ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಹಣ್ಣು ಮತ್ತು ತರಕಾರಿಗಳ ಸಗಟು ಮಾರುಕಟ್ಟೆಯಾಗಿರುವ ಆಜಾದ್‌ಪುರ ಮಂಡಿಯಲ್ಲಿ ವಲಸಿಗ ಕಾರ್ಮಿಕರು ಕೆಲಸಕ್ಕಾಗಿ ಅಥವಾ ಬರತಕ್ಕ ಹಣಕ್ಕಾಗಿ ಕಾಯುತ್ತ ಸೋಮಾರಿಗಳಂತೆ ಕುಳಿತಿರುವ ದೃಶ್ಯಗಳು ಸಾಮಾನ್ಯವಾಗಿವೆ.