ನಗದು ರಹಿತ ಅರ್ಥವ್ಯವಸ್ಥೆಯ ಕುರಿತು ಖ್ಯಾತ ಉದ್ಯಮಿ ಆದಿ ಗೋದ್ರೆಜ್ ಹೇಳಿದ್ದೇನು?

Update: 2016-11-30 14:10 GMT

ಹೊಸದಿಲ್ಲಿ, ನ.30: ಕಪ್ಪುಹಣದ ನಿಗ್ರಹ ಮತ್ತು ನೋಟು ಅಮಾನ್ಯ ನಿರ್ಧಾರವು ನಗದು ರಹಿತ ಅರ್ಥವ್ಯವಸ್ಥೆಯ ಉಪಕ್ರಮಕ್ಕೆ ವೇಗ ನೀಡುತ್ತದೆ ಎಂಬ ಸರಕಾರದ ಹೇಳಿಕೆ ಗೆ ಖ್ಯಾತ ಉದ್ಯಮಿ ಆದಿ ಗೋದ್ರೆಜ್ ವಿರೋಧ ಸೂಚಿಸಿದ್ದಾರೆ.

ನಗದು ರಹಿತ ಅರ್ಥವ್ಯವಸ್ಥೆಯತ್ತ ಪರಿವರ್ತನೆ ಅಸಾಧ್ಯ ಎಂದು ಅವರು ಎನ್‌ಡಿ ಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ಧಾರೆ.

    ನಿಧಿ ಅಥವಾ ಹಣ ವರ್ಗಾವಣೆಗೆ ಇತರ ಉಪಕ್ರಮಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಇಂದಿನ ಸಂದರ್ಭದಲ್ಲಿ ಅಥವಾ ಭವಿಷ್ಯದಲ್ಲಿ ಕೂಡಾ ನಗದು ರಹಿತ ಅರ್ಥವ್ಯವಸ್ಥೆಯತ್ತ ಪರಿವರ್ತನೆ ಖಂಡಿತಾ ಸಾಧ್ಯವಿಲ್ಲ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸೇರಿದಂತೆ ಯಾವುದೇ ಅರ್ಥವ್ಯವಸ್ಥೆ ನಗದು ರಹಿತವಾಗಿ ಸಾಗಲು ಖಂಡಿತಾ ಸಾಧ್ಯವಿಲ್ಲ ಎಂದಿದ್ದಾರೆ.

ನೋಟು ಅಮಾನ್ಯ ನಿರ್ಧಾರ ಗೋದ್ರೆಜ್ ಸಂಸ್ಥೆಗಳ ವಹಿವಾಟಿನ ಮೇಲೂ ಪ್ರಭಾವ ಬೀರಿದೆ. ಗೋದ್ರೆಜ್ ಉತ್ಪನ್ನಗಳ ಮಾರಾಟದಲ್ಲಿ ಸುಮಾರು 70 ರಿಂದ 80 ಶೇಕಡಾದಷ್ಟು ಇಳಿಕೆ ದಾಖಲಾಗಿದೆ. ಆದರೆ ಮುಂದಿನ ಎರಡು ಮೂರು ವಾರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಣ ಚಲಾವಣೆಗೆ ಬಂದರೆ ಎಲ್ಲಾ ಸರಿಹೋಗ್ತುತದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ಆದಿ ಗೋದ್ರೆಜ್.

ದೇಶದಲ್ಲಿ ನೋಟು ಮುದ್ರಿಸಲು ಸಮಸ್ಯೆಯಾದರೆ ವಿದೇಶದ ಸಂಸ್ಥೆಗಳಿಗೆ ನೋಟು ಮುದ್ರಣದ ಗುತ್ತಿಗೆ ವಹಿಸಿಕೊಡಬಹುದು. ಜಾಗತಿಕವಾಗಿ ನೋಟು ಮುದ್ರಿಸಿ ಸರಬರಾಜು ಮಾಡುವ ಆರೇಳು ಸಂಸ್ಥೆಗಳು ಕಾರ್ಯಾಚರಿಸುತ್ತಿವೆ ಎಂದವರು ಹೇಳಿದರು.

ನೋಟು ಅಮಾನ್ಯದಿಂದ ಅಭಿವೃದ್ಧಿ ಗತಿಯ ಮೇಲೆ ಅಲ್ಪಾವಧಿಯ ಪರಿಣಾಮ ಉಂಟಾಗಬಹುದು. ಆದರೆ ಹಣದ ಕೊರತೆ ನೀಗಿದರೆ ಸಮಸ್ಯೆ ಇರದು ಎಂದ ಅವರು, ಆದರೆ ಅತೀ ಶೀಘ್ರವಾಗಿ ಹಣ ಲಭ್ಯವಿರುವಂತೆ ಸರಕಾರ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲವಾದರೆ ಅರ್ಥವ್ಯವಸ್ಥೆಯ ಮೇಲೆ ಸುದೀರ್ಘಾವಧಿಯ ಹಾನಿ ಸಂಭವಿಸಬಹುದು ಎಂದು ಅಭಿಪ್ರಾಯ ಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News