ಭಾರತದಲ್ಲಿ ಭಯೋತ್ಪಾದನೆಗೆ ಸಂಚು ರೂಪಿಸಿದ್ದು ಹೌದು
ನ್ಯೂಯಾರ್ಕ್, ನ. 30: ಖಲಿಸ್ತಾನ್ ಭಯೋತ್ಪಾದಕರಿಗೆ ವಸ್ತು ರೂಪದಲ್ಲಿ ಬೆಂಬಲ ಮತ್ತು ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ತಾನು ಯೋಜನೆ ರೂಪಿಸಿದ್ದು ಹೌದು ಎಂಬುದಾಗಿ ಅಮೆರಿಕದಲ್ಲಿ ಆಶ್ರಯ ಪಡೆದಿರುವ ವ್ಯಕ್ತಿಯೊಬ್ಬ ತಪ್ಪೊಪ್ಪಿಕೊಂಡಿದ್ದಾನೆ.
ನೆವಾಡ ನಿವಾಸಿ 42 ವರ್ಷದ ಬಲ್ವಿಂದರ್ ಸಿಂಗ್ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಲ್ಯಾರಿ ಹಿಕ್ಸ್ ಸಮ್ಮುಖದಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಭಯೋತ್ಪಾದಕರಿಗೆ ವಸ್ತು ರೂಪದಲ್ಲಿ ಬೆಂಬಲ ನೀಡುವ ಪಿತೂರಿ ರೂಪಿಸಿರುವುದಾಗಿಯೂ, ಇಂಥ ಬೆಂಬಲದಿಂದ ಭಯೋತ್ಪಾದಕರಿಗೆ ವಿದೇಶಗಳಲ್ಲಿ ದಾಳಿ ನಡೆಸಲು ಸಾಧ್ಯವಾಗುತ್ತದೆ ಎನ್ನುವುದು ತಿಳಿದಿದ್ದರೂ ಹೀಗೆ ಮಾಡಿರುವುದಾಗಿ ಬಲ್ವಿಂದರ್ ಸಿಂಗ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ರಾಷ್ಟ್ರೀಯ ಭದ್ರತೆಯ ಉಸ್ತುವಾರಿ ಸಹಾಯಕ ಅಟಾರ್ನಿ ಜನರಲ್ ಮೇರಿ ಮೆಕಾರ್ಡ್ ಮಂಗಳವಾರ ತಿಳಿಸಿದರು.
ಭಾರತೀಯ ನಾಗರಿಕ ಹಾಗೂ ಅಮೆರಿಕದ ಖಾಯಂ ನಿವಾಸಿ ಸಿಂಗ್‌ನನ್ನು 2013 ಡಿಸೆಂಬರ್‌ನಲ್ಲಿ ಬಂಧಿಸಲಾಗಿತ್ತು.
ಆತನಿಗೆ ಫೆಬ್ರವರಿ 27ಕ್ಕೆ ಶಿಕ್ಷೆ ಘೋಷಣೆಯಾಗುವ ನಿರೀಕ್ಷೆಯಿದೆ.
ಆತ ನಕಲಿ ಗುರುತಿನಲ್ಲಿ ಸಾನ್‌ಫ್ರಾನ್ಸಿಸ್ಕೊದಲ್ಲಿ ಆಶ್ರಯ ಪಡೆದಿದ್ದಾನೆ.