ಮೋದಿ ಸಂಪುಟದ ಸಚಿವರ ಕೈಯ್ಯಲ್ಲೇ ಇತ್ತು ಭಾರೀ ನಗದು

Update: 2016-12-02 06:54 GMT

ಹೊಸದಿಲ್ಲಿ, ಡಿ.2: ಕೇಂದ್ರ ಸರಕಾರ 500 ಹಾಗೂ 1000 ರೂ ನೋಟುಗಳನ್ನು ಅಮಾನ್ಯಗೊಳಿಸಿದಂದಿನಿಂದ ಜನಸಾಮಾನ್ಯರು ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಆದರೆ ಸಚಿವರುಗಳು ಮತ್ತು ರಾಜಕಾರಣಿಗಳ್ಯಾರೂ ಈ ಸರತಿ ಸಾಲುಗಳಲ್ಲಿ ಕಂಡು ಬಂದಿಲ್ಲ. ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳ ಪ್ರಕಾರ  ಹಲವಾರು ಸಚಿವರುಗಳ ಬಳಿ ಬ್ಯಾಂಕು ಠೇವಣಿಗಳ ಹೊರತಾಗಿ ಮಾರ್ಚ್ 31, 2016 ರಲ್ಲಿರುವಂತೆ ಭಾರೀ ನಗದು ಹಣವಿತ್ತು, ಎಂದು ದಿ ಹಿಂದು ಪತ್ರಿಕೆಯ ವಿಶೇಷ ವರದಿಯೊಂದು ತಿಳಿಸಿದೆ.

ಸಚಿವರುಗಳಿಗಾಗಿರುವ ನೀತಿ ಸಂಹಿತೆಯ ಪ್ರಕಾರ ಅವರು ತಮ್ಮ ಆಸ್ತಿ ಹಾಗೂ ಬಾಧ್ಯತೆಗಳ ವಿವರಗಳನ್ನು ಪ್ರಧಾನಿ ಕಾರ್ಯಾಲಯಕ್ಕೆ ಪ್ರತೀ ವರ್ಷ ಸಲ್ಲಿಸಬೇಕಾಗಿದೆ. ಈ ದಾಖಲೆಗಳನ್ನು ಕಾಮನ್ ವೆಲ್ತ್ ಹ್ಯೂಮನ್ ರೈಟ್ಸ್ ಇನೀಶಿಯೇಟಿವ್  ಕ್ರೋಢೀಕರಿಸಿದ್ದು ಅದರ ಮಾಹಿತಿ ದಿ ಹಿಂದು ಪತ್ರಿಕೆಗೆ ಲಭ್ಯವಾಗಿದ್ದು,  ಈಗ ಕೇಂದ್ರ ಸರಕಾರದಲ್ಲಿರುವ 76 ಸಚಿವರುಗಳ ಪೈಕಿ ಕೇವಲ 40 ಮಂದಿ ತಮ್ಮ ಕೈಯ್ಯಲ್ಲಿರುವ ನಗದು ಪ್ರಮಾಣದ ಮಾಹಿತಿಯನ್ನು ಘೋಷಿಸಿದ್ದಾರೆ.

ಅಷ್ಟೇ ಅಲ್ಲದೆ ಲಭ್ಯ ಮಾಹಿತಿಯ ಪ್ರಕಾರ ಎಲ್ಲಾ ಸಚಿವರುಗಳೂ ಪ್ರಧಾನಿಯ ಇಚ್ಛೆಯಂತೆಯೇ ಕ್ಯಾಶ್ ಲೆಸ್ ವ್ಯವಹಾರಗಳಿಗೆ ಒತ್ತು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಹೀಗೆ ಅತೀ ಹೆಚ್ಚು ನಗದು ತಮ್ಮ ಕೈಯ್ಯಲ್ಲಿ ಹೊಂದಿರುವ ಸಚಿವರುಗಳಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮೊದಲ ಸ್ಥಾನ ಪಡೆದಿದ್ದು  ಅವರ ಬಳಿ ರೂ 65 ಲಕ್ಷಕ್ಕೂ ಹೆಚ್ಚು ನಗದು ಇತ್ತು. ಇವರ ನಂತರದ ಸ್ಥಾನ ಶ್ರೀಪಾದ್ ಯೆಸ್ಸೋ ನಾಯ್ಕ್ ಅವರದಾಗಿದ್ದು ಅವರ ಬಳಿ ರೂ 22 ಲಕ್ಷ ನಗದು ಇದ್ದರೆ, ಇನ್ನೊಬ್ಬ ಸಹಾಯಕ ಸಚಿವ ಹಂಸರಾಜ್ ಆಹಿರ್ ಅವರ ಬಳಿ ರೂ 10 ಲಕ್ಷಕ್ಕಿಂತ ಹೆಚ್ಚು  ನಗದು ಇತ್ತು. ಪ್ರಧಾನಿ ನರೇಂದ್ರ ಮೋದಿ ತಮ್ಮ ಬಳಿ  ರೂ 98,700 ನಗದು ಇತ್ತೆಂದು ಘೋಷಿಸಿದ್ದಾರೆ.

ಒಟ್ಟು 23 ಸಚಿವರುಗಳು ತಮ್ಮ ಬಳಿ ರೂ 2 ಲಕ್ಷಕ್ಕಿಂತ ಕಡಿಮೆ ನಗದು ಇದೆ ಎಂದು ಘೋಷಿಸಿದ್ದರೆ, 15 ಮಂದಿಯ ಬಳಿ ರೂ 2.5 ಲಕ್ಷಕ್ಕಿಂತ ಹೆಚ್ಚು ಹಣವಿತ್ತು.

ಸಾರಿಗೆ ಸಚಿವ ನಿತಿನ್ ಗಡ್ಕರಿ, ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಹಾಗೂ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ಸಹಿತ ಹಲವು ಪ್ರಮುಖ ಸಚಿವರುಗಳು ತಮ್ಮ ಬಳಿಯಿರುವ ನಗದು ವಿವರಗಳನ್ನು ಪ್ರಧಾನಿ ಕಾರ್ಯಾಲಯಕ್ಕೆ ಸಲ್ಲಿಸಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News