ಪೀಸ್ ಸ್ಕೂಲ್ ಪ್ರಕರಣ: ಪಾಠ ಪುಸ್ತಕ ಪ್ರಕಾಶಕರ ಬಂಧನ
ಕೊಚ್ಚಿ,ಡಿ. 3: ಧಾರ್ಮಿಕಸ್ಪರ್ಧೆ ಬೆಳೆಸುವ ಪಠ್ಯಭಾಗಗಳನ್ನು ಸಿಲೆಬಸ್‌ನಲ್ಲಿ ಸೇರಿಸಿದ್ದಾರೆಂದು ಆರೋಪಿಸಿ ಎರ್ನಾಕುಲಂನ ಪೀಸ್ ಸ್ಕೂಲ್ ವಿರುದ್ಧ ಪೊಲೀಸರು ದಾಖಲಿಸಿದ್ದ ಕೇಸಿನ ಅಡಿಯಲ್ಲಿ ಮುಂಬೈಯ ಪಠ್ಯಪುಸ್ತಕ ಪ್ರಕಾಶಕರನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ. ಪಾಠಪುಸ್ತಕವನ್ನು ತಯಾರಿಸಿ ಒದಗಿಸಿದ ಬುರೂಜ್ ರಿಯಲೈಸೇಶನ್ ಎಂಬ ಸಂಸ್ಥೆಯ ಚೇರ್‌ಮೆನ್, ಪ್ರಕಾಶನ ಹೊಣೆಯನ್ನು ಹೊತ್ತಿದ್ದ ನವಿ ಮುಂಬೈಯ ನಿವಾಸಿ ದಾವೂದ್ ವೈದ್(38) ಹಾಗೂ ಈ ಸಂಸ್ಥೆಯ ನೌಕರರಾದ ಸಾಹಿಲ್ ಸೇಟ್(28),ಶೇಖ್ ಸಮೀದ್ ಅಹಮದ್(31)ರನ್ನು ಬಂಧಿಸಲಾಗಿದೆ.ಸಾಹಿಲ್ ಡಿಸೈನರ್ ಆಗಿದ್ದರೆ, ಸಮೀದ್‌ಗೆ ಇಲಸ್ಟ್ರೇಶನ್ ಹೊಣೆಯಿತ್ತು ಎನ್ನಲಾಗಿದೆ.
ಪೀಸ್ ಸ್ಕೂಲ್‌ನ ಎರಡನೆ ತರಗತಿಯ ವಿದ್ಯಾರ್ಥಿಗಳಿಗಾಗಿ ರೂಪಿಸಿದ ಧಾರ್ಮಿಕ ಪಾಠಪುಸ್ತಕದಲ್ಲಿ ಸಮುದಾಯ ಸೌಹಾರ್ದಕ್ಕೆ ಹಾನಿಯಾಗುವ ರೀತಿಯಿರುವ ಪಾಠವನ್ನು ಸೇರಿಸಲಾಗಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಇವರನ್ನು ಬಂಧಿಸಿದ್ದಾರೆ. ಎರ್ನಾಕುಲಂ ಪೊಲೀಸ್ ಅಸಿಸ್ಟೆಂಟ್ ಕಮಿಶನರ್ ಕೆ. ಲಾಲ್‌ಜಿ ನೇತೃತ್ವದ ತನಿಖಾ ತಂಡ ಪ್ರಶ್ನಿಸಲಿಕ್ಕಾಗಿ ನೋಟಿಸು ಜಾರಿಗೊಳಿಸಿ ಮೂವರನ್ನು ಕೊಚ್ಚಿಗೆ ಕರೆಯಿಸಿಕೊಂಡ ಬಳಿಕ ಬಂಧಿಸಿದೆ. ಶನಿವಾರ ಇವರನ್ನು ಎರ್ನಾಕುಲಂ ಕೋರ್ಟಿಗೆ ಹಾಜರುಪಡಿಸಲಾಗುವುದು.
ಪಾಠಕ್ಕೆ ಸಂಬಂಧಿಸಿದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರ ಕೋರಿಕೆಯಂತೆ ಎರ್ನಾಕುಲಂ ಜಿಲ್ಲಾ ವಿದ್ಯಾಭ್ಯಾಸ ಅಧಿಕಾರಿ ಪೀಸ್ ಸ್ಕೂಲ್‌ಗೆ ಭೇಟಿ ನೀಟಿ ವಿವಾದಿತ ಪಾಠವನ್ನು ಪರಿಶೀಲಿಸಿದ್ದರು. ನಂತರ ಪೊಲೀಸರಿಗೆ ಅವರು ವರದಿ ನೀಡಿದ್ದರು. ಬುರೂಜ್ ರಿಲೈಸೇಶನ್ ರೂಪಿಸಿದ ಪಾಠಪುಸ್ತಕದಲ್ಲಿ ಧಾರ್ಮಿಕ ಸೌಹಾರ್ದಕ್ಕೆ ಹಾನಿಯಾಗುತ್ತದೆ ಎಂದು ವಿದ್ಯಾಭ್ಯಾಸ ಅಧಿಕಾರಿ ವರದಿಯಲ್ಲಿ ತಿಳಿಸಿದ್ದರು. ಭಾರತ ದಂಡ ಸಂಹಿತೆ 153(ಎ) ಪ್ರಕಾರ ಸ್ಕೂಲ್ ಪ್ರಿನ್ಸಿಪಾಲ್, ಡೈರೆಕ್ಟರ್, ಪ್ರಕಾಶಕರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
ಘಟನೆ ವಿವಾದಗೊಂಡ ಬಳಿಕ ರಂಗಪ್ರವೇಶಿಸಿದ ಶಾಲಾ ಅಧಿಕಾರಿಗಳು ಪ್ರಸ್ತುತ ಪಾಠಭಾಗ ಎರಡನೆ ಕ್ಲಾಸಿನ ಮಕ್ಕಳ ಬೌದ್ಧಿಕ ಮಟ್ಟಕ್ಕೆ ಸೂಕ್ತವಾಗಿಲ್ಲ. ಆದ್ದರಿಂದ ಅದನ್ನು ಕಲಿಸಬೇಕಿಲ್ಲ ಎಂದು ಅಧ್ಯಾಪಕರಿಗೆ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.ಈ ಹಿಂದೆ ಕೋಝಿಕ್ಕೋಡ್‌ನ ದಾರುಸ್ಸಲಾಂ ಪಬ್ಲಿಕೇಶನ್‌ನ ಪುಸ್ತಕಗಳನ್ನು ಪಠ್ಯವಾಗಿ ಸ್ವೀಕರಿಸಿದ್ದೆವು. ಸ್ವಲ್ಪ ಹೆಚ್ಚು ಸ್ವೀಕಾರಾರ್ಹ ಎಂದು ಅನಿಸಿದ್ದರಿಂದ ಕಳೆದ ಅಕಾಡಮಿಕ್ ವರ್ಷದಿಂದ ಬುರೂಜ್ ರಿಯಲೈಶನ್‌ನ ಪುಸ್ತಕಗಳನ್ನು ಪಾಠಕ್ಕೆ ಅಳವಡಿಸಿಕೊಳ್ಳಲಾಗಿತ್ತು ಎಂದು ಅವರು ವಿವರಿಸಿದ್ದಾರೆ. ಮಾತ್ರವಲ್ಲ ಈ ಪುಸ್ತಕ ಸಾರ್ವಜನಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಪುಸ್ತಕಗಳೇ ಅಗಿವೆ. ವಿವಿಧ ದೇಶಗಳಲ್ಲಿ ಈಗಲೂ ಈ ಪುಸ್ತಕಗಳನ್ನು ಕಲಿಸುತ್ತಿದ್ದಾರೆಂದು ಪೀಸ್‌ಸ್ಕೂಲ್‌ನ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಸಾರ್ವಜನಿಕ ವಿಷಯಗಳಲ್ಲಿ ಸಿಬಿಎಸ್‌ಇ ಸಿಲೆಬಸ್ ಪ್ರಕಾರ ಎನ್‌ಸಿಇಆರ್ಟಿ ಪುಸ್ತಕಗಳನ್ನು ಕಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈಗ ಬಂಧಿಸಲಾಗಿರುವವರನ್ನು ಪ್ರಶ್ನಿಸಿ ಸಿಕ್ಕ ಮಾಹಿತಿಯ ಆಧಾರದಲ್ಲಿ ಮುಂದಿನ ದಿವಸಗಳಲ್ಲಿ ಶಾಲಾ ಅಧಿಕಾರಿಗಳನ್ನು ಕೂಡಾ ಪ್ರಶ್ನಿಸಲು ಕರೆಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆಂದು ವರದಿಯಾಗಿದೆ.