ಧಾರ್ಮಿಕ ನಾಯಕರು ಕಪ್ಪುಹಣವನ್ನು ಹೇಗೆ ಬಿಳಿಯಾಗಿಸುತ್ತಿದ್ದಾರೆ...ಗೊತ್ತೇ?

Update: 2016-12-03 10:52 GMT

ಹೊಸದಿಲ್ಲಿ,ಡಿ.3: ಮೋದಿ ಸರಕಾರದ ನೋಟು ನಿಷೇಧ ಕ್ರಮ ಹಲವಾರು ಧಾರ್ಮಿಕ ನಾಯಕರ ಪಾಲಿಗೆ ಕಾಮಧೇನುವಾಗಿದೆ. ಈ ಧಾರ್ಮಿಕ ನಾಯಕರು ಭಾರೀ ಕಮಿಷನ್ ಪಡೆದುಕೊಂಡು ಕಾಳಧನಿಕರ ಬಳಿಯಿರುವ ಹಳೆಯ ನೋಟುಗಳನ್ನು ಹೊಸನೋಟು ಗಳಿಗೆ ಬದಲಾಯಿಸಿ ಕೊಡುವ ದಂಧೆಗಿಳಿದಿರುವುದನ್ನು ಇಂಡಿಯಾ ಟುಡೇದ ವಿಶೇಷ ತನಿಖಾ ತಂಡವು ಕುಟುಕು ಕಾರ್ಯಾಚರಣೆಗಳಲ್ಲಿ ಬಯಲಿಗೆಳೆದಿದೆ.

ದಿಲ್ಲಿ ಸಮೀಪದ ಘಾಝಿಯಾಬಾದ್‌ನ ವೈಷ್ಣೋ ದೇವಸ್ಥಾನದ ಮುಖ್ಯಸ್ಥೆಯಾಗಿರುವ ರಾಧಾ ಮಾತಾ ಅವರಿಗೆ ಹಲವಾರು ಭಕ್ತರಿದ್ದಾರೆ. ದಕ್ಷಿಣ ಭಾರತದಿಂದಲೂ ಜನರು ಅವರ ದರ್ಶನಕ್ಕೆ ತೆರಳುತ್ತಾರೆ. ಹಳೆಯ ನೋಟುಗಳನ್ನು ಬದಲಿಸಿ ಕೊಡುವಂತೆ ಕಾಳಧನಿಕನ ಸೋಗಿನಲ್ಲಿದ್ದ ಇಂಡಿಯಾ ಟುಡೇದ ವರದಿಗಾರ ಅವರನ್ನು ಕೋರಿದ್ದ. ತನ್ನ ಬಳಿ 2.5 ಕೋ.ರೂ.ಗಳ ಹಳೆಯ ನೋಟುಗಳಿವೆ ಎಂದಾತ ತಿಳಿಸಿದ್ದ. ಆತನ ಕೋರಿಕೆಯನ್ನು ತಕ್ಷಣ ಒಪ್ಪಿಕೊಂಡ ಆಕೆ ಅದರ ಬದಲಿಗೆ 1.25 ಕೋ.ರೂ.ಗಳ ಹೊಸನೋಟುಗಳನ್ನು ನೀಡುವುದಾಗಿ ತಿಳಿಸಿದ್ದರು.

ಮಗು,ಬ್ಯಾಂಕ್ ಅಧಿಕಾರಿ ಶೇ.50 ಕಮಿಷನ್ ತೆಗೆದುಕೊಳ್ಳುತ್ತಾರೆ ಮತ್ತು ನಿನ್ನ ಮನೆ ಬಾಗಿಲಿಗೇ ಎಲ್ಲ ಸೇವೆಗಳನ್ನು ಒದಗಿಸುತ್ತಾರೆ ಎಂದು ಅವರು ಭರವಸೆ ನೀಡಿದ್ದರು. ಅವರು ನಿನಗೆ ಹೊಸನೊಟುಗಳನ್ನು ನೀಡುತ್ತಾರೆ,ಬೇಕಿದ್ದರೆ ಚೆಕ್ಕನ್ನೂ ನೀಡುತ್ತಾರೆ ಎಂದ ರಾಧಾ ಮಾತಾ,ದುಬೈ,ಕೆನಡಾ ಅಥವಾ ಇಂಗ್ಲಂಡ್...ಹೀಗೆ ನೀನು ಎಲ್ಲಿ ಬೇಕಾದರೂ ಡಾಲರ್‌ಗಳಲ್ಲಿ ಹಣವನ್ನು ಪಡೆದುಕೊಳ್ಳಬಹುದು. ಆ ವ್ಯವಸ್ಥೆಯೂ ನಮ್ಮಲ್ಲಿದೆ ಎಂದೂ ತಿಳಿಸಿದರು.

ಅಷ್ಟೇ ಅಲ್ಲ,ಕ್ಷಣಾರ್ಧದಲ್ಲಿ ಸುರೇಂದ್ರ ಶರ್ಮಾ ಎಂಬ ಓರ್ವ ಬ್ರೋಕರ್‌ನನ್ನೂ ಕರೆಸಿದರು. ಅವನು ಬಂದಿದ್ದು ಉತ್ತರ ಪ್ರದೇಶ ಸರಕಾರದ ಕಾರಿನಲ್ಲಿ! ಆತ ರಾಧಾ ಮಾತೆ ಹೇಳಿದಂತೆ ಎಲ್ಲವನ್ನೂ ತಾನು ವ್ಯವಸ್ಥೆ ಮಾಡುವುದಾಗಿ ವರದಿಗಾರನಿಗೆ ಭರವಸೆಯನ್ನು ನೀಡಿದ್ದ. ಇದು ಇಷ್ಟಕ್ಕೇ ಮುಗಿದಿಲ್ಲ. ತನಿಖಾ ತಂಡವು ಇನ್ನಷ್ಟು ಕುಟುಕು ಕಾರ್ಯಾಚರಣೆ ಗಳನ್ನು ನಡೆಸಿ ಇನ್ನಷ್ಟು ಧಾರ್ಮಿಕ ನಾಯಕರ ಸೋಗಲಾಡಿತನವನ್ನು ಬಹಿರಂಗ ಗೊಳಿಸಿದೆ.

 ದೇವಳಗಳ ಪ್ರಾಚೀನ ನಗರಿ ಮಥುರಾದಲ್ಲಿ ಹಲವರು ಧಾರ್ಮಿಕ ಮುಖಂಡರು ನೋಟು ಬದಲಾವಣೆಯನ್ನೇ ದಂಧೆಯನ್ನಾಗಿಸಿಕೊಂಡಿದ್ದಾರೆ. ವೃಂದಾವನ ಬಿಹಾರಿ ದೇವಸ್ಥಾನದ ಅರ್ಚಕ ಅನಿರುದ್ಧ ಎಂಬಾತ ಹಿಂದಿನ ದಿನಾಂಕವನ್ನು ನಮೂದಿಸಿ ಕಪ್ಪುಹಣವನ್ನು ಹುಂಡಿಗೆ ಕಾಣಿಕೆ ಎಂದು ತೋರಿಸುವುದಾಗಿ ಹೇಳಿದ್ದಾನೆ. ಈ ವ್ಯವಹಾರದಲ್ಲಿ ಆತನೊಡನೆ ದೇವಸ್ಥಾನದ ಟ್ರಸ್ಟ್‌ನ ಮುಖ್ಯಸ್ಥ ರಾಮ ಗುರುವೂ ಶಾಮೀಲಾಗಿದ್ದಾನೆ. ರಾಮ ಗುರು ಇಂಡಿಯಾ ಟುಡೇದ ವರದಿಗಾರನ ಬಳಿ ಕೇಳಿದ್ದು ಶೇ.35 ಕಮಿಷನ್.

 ಆದರೆ ದೇವಸ್ಥಾನದಿಂದ ದೇಸ್ಥಾನಕ್ಕೆ ಕಮಿಷನ್ ದರಗಳೂ ಬದಲಾಗಿವೆ. ತುಂಬ ಚೌಕಾಸಿಯ ಬಳಿಕ ದಿಲ್ಲಿಯ ಸಿದ್ಧ ಪೀಠ ಕಲ್ಕಾದ ಮುಖ್ಯಸ್ಥೆ ಸುಧಾ ಭಾರದ್ವಾಜ್ ಶೇ.50 ಕಮಿಷನ್‌ನಲ್ಲಿ ಕಪ್ಪುಹಣಕ್ಕೆ ಬದಲಾಗಿ ಹೊಸನೋಟುಗಳನ್ನು ನೀಡಲು ಒಪ್ಪಿಕೊಂಡಿದ್ದರೆ, ನೊಯ್ಡಿದ ಸಾಯಿ ದೇವಸ್ಥಾನದ ಅಧಿಕಾರಿ ಮನೋಜ್ ಪೌದ್ವಾಲ್ ಶೇ.40 ಕಮಿಷನ್‌ಗೆ ಒಪ್ಪಿಕೊಂಡಿದ್ದಾನೆಂದು ಇಂಡಿಯಾ ಟುಡೇದ ತನಿಖಾ ತಂಡ ಬಹಿರಂಗಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News