×
Ad

14 ಸಾವಿರ ಕೋಟಿ ಕಪ್ಪು ಹಣ ಘೋಷಿಸಿದ ಗುಜರಾತ್ ಉದ್ಯಮಿ ಹಿಂದೆ ಇರುವವರು ಯಾರು?

Update: 2016-12-04 08:57 IST

ಅಹ್ಮದಾಬಾದ್, ಡಿ.4: ಆದಾಯ ತೆರಿಗೆ ಇಲಾಖೆಯ ಸ್ವಯಂಘೋಷಣೆ ಯೋಜನೆಯಡಿ 13,860 ಕೋಟಿ ರೂಪಾಯಿ ಆದಾಯ ಘೋಷಿಸಿಕೊಂಡು ಇಡೀ ದೇಶದ ಗಮನಸೆಳೆದು ನಾಪತ್ತೆಯಾಗಿದ್ದ ಗುಜರಾತ್ ಉದ್ಯಮಿ ಮಹೇಶ್ ಶಾ ಇದೀಗ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾಗಿದ್ದಾರೆ.
"ಹಲವು ಮಂದಿ ಪ್ರಭಾವಿಗಳ ಕಪ್ಪುಹಣವನ್ನು ಬಿಳಿ ಮಾಡಿಕೊಡಲು ನಾನು ಮುಖಮಾತ್ರ" ಎಂದು ಶಾ ಹೇಳಿಕೊಂಡಿದ್ದಾರೆ. ಇದಕ್ಕಾಗಿ ತಾವು ದೊಡ್ಡ ಮೊತ್ತದ ಕಮಿಷನ್ ಪಡೆಯುತ್ತಿದ್ದುದಾಗಿ ಅವರು ಹೇಳಿಕೊಂಡಿದ್ದಾರೆ. ಬಳಿಕ ಶಾ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.
ಈ ಭಾರಿ ಮೊತ್ತದ ಹಣ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಬಿಲ್ಡರ್‌ಗಳದ್ದೇ ಎಂದು ಕೇಳಿದ ಪ್ರಶ್ನೆಗೆ, "ಐಡಿಎಸ್ ಯೋಜನೆಯಡಿ ಘೋಷಿಸಿಕೊಂಡ 13,860 ಕೋಟಿ ರೂಪಾಯಿ ನನ್ನದಲ್ಲ. ಇದು ದೇಶದ ವಿವಿಧ ಕಡೆಗಳ ಗಣ್ಯರ ಹಣ. ಈ ಮೊತ್ತ ಇನ್ನಷ್ಟು ಹೆಚ್ಚಬಹುದು" ಎಂದು ಅವರು ಉತ್ತರಿಸಿದರು.
"ಐಡಿಎಸ್ ಯೋಜನೆಯಡಿ ದಂಡ ಹಾಗೂ ತೆರಿಗೆ ರೂಪದಲ್ಲಿ ಪಾವತಿಸಬೇಕಾದ 1,560 ಕೋಟಿ ರೂಪಾಯಿಯನ್ನು ಪಾವತಿಸಲು ನಾನು ಸಿದ್ಧನಿದ್ದೇನೆ. ಆದರೆ ಇದು ವಾಸ್ತವವಾಗಿ ಯಾರ ಹಣವಾಗಿದೆಯೋ, ಕೊನೆಕ್ಷಣದಲ್ಲಿ ಅವರು ಹಿಂದೆ ಸರಿದಿದ್ದಾರೆ. ಕೊನೆಯ ಎರಡು ದಿನಗಳಲ್ಲಿ ನನಗೆ ಹಣ ನೀಡಿಲ್ಲ. ಪ್ರತಿಯೊಬ್ಬರ ಹೆಸರನ್ನೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮುಂದೆ ನಾನು ಬಹಿರಂಗಪಡಿಸುತ್ತೇನೆ" ಎಂದು ಸ್ಪಷ್ಟಪಡಿಸಿದರು.
ಐಟಿ ಅಧಿಕಾರಿಗಳು ಶಾ ಅವರನ್ನು ರಾತ್ರಿಯಿಡೀ ಪ್ರಶ್ನಿಸುತ್ತಿದ್ದು, ಅವರ ಹೇಳಿಕೆಯನ್ನು ದೃಢೀಕರಿಸಿಕೊಳ್ಳುತ್ತಿದ್ದಾರೆ. ಜತೆಗೆ ಈ ನಕಲಿ ಐಡಿಎಸ್ ಘೋಷಣೆಯಡಿ ಯಾರೆಲ್ಲ ಷಾಮೀಲಾಗಿದ್ದಾರೆ ಎಂಬ ಮಾಹಿತಿಯನ್ನೂ ಇಲಾಖೆ ಪಡೆದುಕೊಳ್ಳುತ್ತಿದೆ.
ತೀರಾ ನಿಕಟವಾಗಿದ್ದವರು, ಆದಾಯ ಘೋಷಿಸಿಕೊಳ್ಳುವಂತೆ ಸಲಹೆ ನೀಡಿ ದೊಡ್ಡ ಮೊತ್ತದ ಕಮಿಷನ್ ನೀಡುವ ಭರವಸೆ ನೀಡಿದ್ದರು. ಕಮಿಷನ್ ಆಸೆಗಾಗಿ ದೊಡ್ಡ ಮೊತ್ತದ ಆದಾಯ ಘೋಷಿಸಿಕೊಂಡಿದ್ದೆ. ಇದೀಗ ನಾನು ಏನು ತಪ್ಪು ಮಾಡಿದ್ದೇನೆ ಎನ್ನುವುದು ಅರಿವಾಗುತ್ತಿದೆ ಎಂದು ಷಾ ಹೇಳಿದ್ದರು. ಶಾ ಅವರ ಪತ್ನಿ ಕ್ಯಾನ್ಸರ್‌ಪೀಡಿತರಾಗಿದ್ದು, ಮಗ ಮಹಾಂತೇಶ್ ನಿರುದ್ಯೋಗಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News