×
Ad

ನೋಟು ರದ್ದತಿಗೆ ಮೊದಲು ಭಾರಿ ಪ್ರಮಾಣದಲ್ಲಿ ಬ್ಯಾಂಕ್ ಠೇವಣಿ ಆಗಿದ್ದು ಹೇಗೆ?

Update: 2016-12-04 12:11 IST

ಹೊಸದಿಲ್ಲಿ, ಡಿ.4: ಪ್ರಧಾನಿ ನರೇಂದ್ರ ಮೋದಿ ನೋಟುಗಳ ಅಮಾನ್ಯ ಮಾಡುವ ನಿರ್ಧಾರ ಪ್ರಕಟಿಸಿದ ಎರಡೇ ದಿನಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಮಾಮೂಲಿ ಬುಲೆಟಿನ್ ಬಿಡುಗಡೆ ಮಾಡಿತು. ಇದು ಹಲವು ಸ್ಫೋಟಕ ಅಂಕಿ ಅಂಶಗಳನ್ನು ಒಳಗೊಂಡಿದೆ. ನೋಟುಗಳ ಅಮಾನ್ಯಗೊಳಿಸುವ ನಿರ್ಧಾರಕ್ಕೆ ಮುನ್ನ ಸೆಪ್ಟೆಂಬರ್‌ನಲ್ಲಿ ಬ್ಯಾಂಕ್ ಠೇವಣಿಯಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ. ಇದು ಕಳೆದ ಆರು ವರ್ಷಗಳಲ್ಲೇ ಅತ್ಯಧಿಕ ಪ್ರಮಾಣದ್ದು.

ಹಲ್‌ಪೋಸ್ಟ್ ಆರ್‌ಬಿಐ ಅಂಕಿ ಅಂಶಗಳನ್ನು ಪಡೆದಿದ್ದು, ಬ್ಯಾಂಕುಗಳು ಒಟ್ಟು 3.67 ಲಕ್ಷ ಕೋಟಿ ರೂಪಾಯಿ ಠೇವಣಿಯನ್ನು ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಸ್ವೀಕರಿಸಿವೆ. ಕಳೆದ ಆರು ವರ್ಷದಲ್ಲಿ ಒಂದು ಬಾರಿ ಮಾತ್ರ ಇಂಥ ನಿದರ್ಶನ ಕಂಡುಬಂದಿದ್ದು, 2013ರ ಫೆಬ್ರವರಿಯಿಂದ ಮಾರ್ಚ್ ಅವಧಿಯಲ್ಲಿ ಮಾತ್ರ ಇಷ್ಟೊಂದು ದೊಡ್ಡ ಪ್ರಮಾಣದ ಠೇವಣಿ ಹರಿದಿರಲಿಲ್ಲ. ಆದರೆ ಇದು ಹಣಕಾಸು ವರ್ಷದ ಅಂತ್ಯವಾಗಿದ್ದರಿಂದ ಅಷ್ಟೊಂದು ಠೇವಣಿ ಬಂದಿರಬಹುದು. ಆದರೆ ಸೆಪ್ಟೆಂಬರ್ ತಿಂಗಳಲ್ಲಿ ಸರಾಸರಿ ಠೇವಣಿ 91,500 ಕೋಟಿ ಇರುವುದು, ನಾಲ್ಕು ಪಟ್ಟು ಅಧಿಕವಾಗಿರುವುದು ಅಚ್ಚರಿಗೆ ಕಾರಣವಾಗಿದೆ.

2016ರ ಜೂನ್‌ನಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ಇಷ್ಟೊಂದು ಪ್ರಮಾಣದ ಠೇವಣಿ ಹರಿದಿರುವುದು 2002ರ ಬಳಿಕ ಇದೇ ಮೊದಲು ಎಂದು ಆರ್ಥಿಕ ವಿಷಯಗಳ ಬರಹಗಾರ ವಿವೇಕ್ ಕೌಲ್ ಅಭಿಪ್ರಾಯಪಡುತ್ತಾರೆ.

ಎಲ್ಲಕ್ಕಿಂತ ಹೆಚ್ಚಾಗಿ, ಈ ಠೇವಣಿ ಹೆಚ್ಚಳವಾಗಿರುವುದು ಹದಿನೈದು ದಿನಗಳಲ್ಲಿ. ತಿಂಗಳ ಮೊದಲಾರ್ಧದಲ್ಲಿ ಸರಾಸರಿ ಠೇವಣಿ ಪ್ರಮಾಣ ಕುಸಿದಿದ್ದು, ಕೊನೆಯ ಹದಿನೈದು ದಿನಗಳಲ್ಲಿ ಠೇವಣಿ ಏರಿಕೆಯಾಗಿದೆ. ಆದರೆ ಅಕ್ಟೋಬರ್ ತಿಂಗಳ ಠೇವಣಿ ವಿವರ ಇನ್ನೂ ಬಹಿರಂಗವಾಗಿಲ್ಲ. ಅಂದರೆ ನೋಟು ಅಮಾನ್ಯಗೊಳಿಸುವ ಬಗ್ಗೆ ಹಲವರಿಗೆ ಮುನ್ಸೂಚನೆ ದೊರಕಿರುವುದು ಸ್ಪಷ್ಟ. ಇದಕ್ಕೆ ಚಾಲನೆ ಸಿಕ್ಕುವ ಮೊದಲೇ ದೊಡ್ಡ ಪ್ರಮಾಣದ ಹಣವನ್ನು ಠೇವಣಿ ಇಟ್ಟಿದ್ದಾರೆ ಎನ್ನುವುದು ಸೆಪ್ಟೆಂಬರ್ ಬೆಳವಣಿಗೆಯಿಂದ ಸ್ಪಷ್ಟವಾಗುತ್ತದೆ.

ಆದರೆ ಹಣಕಾಸು ಸಚಿವ ಅರುಣ್ ಜೇಟ್ಲೆ ಇದನ್ನು ನಿರಾಕರಿಸಿದ್ದು, ಠೇವಣಿ ಹೆಚ್ಚಳಕ್ಕೆ ಏಳನೇ ವೇತನ ಆಯೋಗದ ಶಿಫಾರಸ್ಸು ಜಾರಿ ಕಾರಣ ಎಂಬ ವಾದ ಮಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News