×
Ad

ಪ್ರಧಾನಿ ಮೋದಿಯ ಧ್ವನಿ ಅನುಸರಿಸುವ ಶ್ಯಾಮ್ ಈಗ ಭಾರೀ ಫೇಮಸ್ಸು: ವೈರಲ್ ವೀಡಿಯೊ

Update: 2016-12-04 16:51 IST

ವ್ಯಾಟ್ಸಾಪ್ ಸಂದೇಶವನ್ನು ನೀವು ತೆರೆದಾಕ್ಷಣ ‘ಮೇರೆ ಪ್ಯಾರೆ ಭಾಯಿಯೋಂ ಬೆಹನೋಂ’ ಎನ್ನುವ ಚಿರಪರಿಚಿತ ಧ್ವನಿ ನಿಮ್ಮ ಕಿವಿಗೆ ಬೀಳುತ್ತದೆ. ಕಳೆದ 10 ದಿನಗಳಿಂದ ಅಸಾಮಾನ್ಯ ಧ್ವನಿಯನ್ನು ಹೊಂದಿರುವ ಈ ಶ್ರೀಸಾಮಾನ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದಾನೆ. ಶ್ಯಾಮ್ ರಂಗೀಲಾ ಎಂದು ಜನಪ್ರಿಯನಾಗಿರುವ ಶ್ಯಾಮ ಸುಂದರ್(22) ಪ್ರಧಾನಿ ಮೋದಿಯವರ ಧ್ವನಿಯ ಅನುಕರಣೆ ಮಾಡುತ್ತಿದ್ದಾನೆಂದು ಥಟ್ಟನೆ ಗೊತ್ತೇ ಆಗುವುದಿಲ್ಲ. ಸುಂದರ್‌ನ ಒಂದು ನಿಮಿಷ ಎಂಟು ಸೆಕೆಂಡ್ ಅವಧಿಯ,ಮೋಜಿಗಾಗಿ ಸ್ನೇಹಿತನೋರ್ವನ ಫೋನ್‌ನಿಂದ ಅಪ್‌ಲೋಡ್ ಮಾಡಲಾಗಿ ರುವ ಈ ವೀಡಿಯೋ ರಾತ್ರಿ ಬೆಳಗಾಗುವುದರಲ್ಲಿ ಆತನಿಗೆ ಪ್ರಸಿದ್ಧಿಯನ್ನು ತಂದು ಕೊಟ್ಟಿದೆ.

ರಾಜಸ್ಥಾನದ ಮೋಖಮ್‌ವಾಲಾ ಗ್ರಾಮದ ರೈತನೋರ್ವನ ಮಗನಾಗಿರುವ ಸುಂದರ್‌ಗೆ ತನ್ನ ಅದೃಷ್ಟವನ್ನೇ ನಂಬಲಾಗುತ್ತಿಲ್ಲ.
‘‘ನನ್ನ ಫೋನ್ ಹಾಳಾಗಿದ್ದರಿಂದ ಸ್ನೇಹಿತನ ಫೋನ್‌ನಲ್ಲಿ ಈ ವೀಡಿಯೊ ಮಾಡಿದ್ದೆ. ಮನೆಯಲ್ಲಿ ವಿದ್ಯುತ್ತೂ ಇರಲಿಲ್ಲ. ನನ್ನ ಮುಖದ ಮೇಲೆ ಬೆಳಕು ಚೆಲ್ಲಲು ಟಾರ್ಚ್ ಬಳಸಿದ್ದೆವು. ವೀಡಿಯೊ ಮಾಡಿದ ಬಳಿಕ ನಾನದನ್ನು ಮರೆತುಬಿಟ್ಟಿದ್ದೆ. ಎರಡು ದಿನಗಳ ಬಳಿಕ ದುರಸ್ತಿಯಾದ ಫೋನ್ ನನ್ನ ಕೈ ಸೇರಿದಾಗಲಷ್ಟೇ ಈ ವೀಡಿಯೊ ವೈರಲ್ ಆಗಿದೆ ಎನ್ನುವುದು ನನಗೆ ಗೊತ್ತಾಗಿದ್ದು ’’ಎಂದು ಸುಂದರ ಹೇಳಿದ. ಇತ್ತೀಚಿಗೆ ಭೇಟಿಯೊಂದರಲ್ಲಿ ಬಾಲಿವುಡ್‌ನ ಖ್ಯಾತ ಹಾಸ್ಯನಟ,ಮಿಮಿಕ್ರಿ ಪಟು ಜಾನಿ ಲಿವರ್ ಈ ವೀಡಿಯೊದ ಆಧಾರದಲ್ಲಿ ತನ್ನನ್ನು ಗುರುತು ಹಿಡಿದಾಗ ಸುಂದರ್‌ನ ಕಾಲುಗಳು ನೆಲದ ಮೇಲೆ ಇರಲಿಲ್ಲ.

11ರ ಹರೆಯದಲ್ಲಿಯೇ ಕಾಮೆಡಿಯನ್ ಆಗುವ ಕನಸು ಕಂಡಿದ್ದ ಸುಂದರ್ ಜ.26 ಮತ್ತು ಆ.15ರಂದು ಗ್ರಾಮದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರ ಮನಸ್ಸು ಗೆದ್ದಿದ್ದ. ಎಸ್‌ಎಸ್‌ಎಲ್‌ಸಿಯ ಬಳಿಕ ಆ್ಯನಿಮೇಷನ್ ಮತ್ತು ಅಭಿನಯ ಕೋರ್ಸ್‌ಗಾಗಿ ಜೈಪುರಕ್ಕೆ ತೆರಳಿದ್ದ ಸುಂದರ್ ಶಾಲೆಗಳಲ್ಲಿ ಉಚಿತವಾಗಿ ಮನೋರಂಜನಾ ಕಾರ್ಯಕ್ರಮಗಳನ್ಜು ನೀಡುತ್ತಿದ್ದ. ಸನ್ನಿ ದಿಯೋಲ್,ಅಮಿತಾಭ್ ಬಚ್ಚನ್ ಮತ್ತು ರಾಜ್‌ಕುಮಾರ್‌ಂತಹ ಬಾಲಿವುಡ್ ನಟರನ್ನು ಅನುಕರಿಸುತ್ತಿದ್ದನಾದರೂ ಅದು ಅಷ್ಟೊಂದು ಪ್ರಭಾವ ಬೀರಿರಲಿಲ್ಲ.

2012-13ರಲ್ಲಿ ಸಾರ್ವತ್ರಿಕ ಚುನಾವಣೆಗೆ ಮುನ್ನ ಮೋದಿ ರಾಷ್ಟ್ರವ್ಯಾಪಿ ಪ್ರವಾಸ ಕೈಗೊಂಡಿದ್ದಾಗ ಅವರನ್ನು ಅನುಕರಿಸಲು ಪ್ರಯತ್ನಿಸಲು ಸುಂದರ್ ನಿರ್ಧರಿಸಿದ್ದ. ಎರಡು ವರ್ಷಗಳ ಕಾಲ ಟಿವಿಯಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಭಾಷಣಗಳನ್ನು ಕೇಳಿ ಕೇಳಿ ಅವರ ಧ್ವನಿಯಲ್ಲೇ,ಅವರ ಶೈಲಿಯಲ್ಲೇ ಭಾಷಣ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದ.

ತನ್ನ ಬಂಧುಗಳಿಗೆ ಕರೆಗಳನ್ನು ಮಾಡಿ ಮೋದಿಯವರ ಧ್ವನಿಯಲ್ಲಿ ಮಾತನಾಡಿ ಮತಗಳನ್ನು ಯಾಚಿಸಿ ಮೋಜು ಪಡೆಯುತ್ತಿದ್ದ. ಸ್ವತಃ ಮೋದಿಯವರೇ ತಮಗೆ ಕರೆ ಮಾಡಿದ್ದಾರೆ ಎಂದು ಸಂಭ್ರಮಿಸುತ್ತಿದ್ದ ಅವರು, ಮೋದಿಯವರಿಗೆ ತಮ್ಮ ಹೆಸರುಗಳು ಗೊತ್ತಾಗಿದ್ದು ಹೇಗೆ ಎಂದು ಅಚ್ಚರಿಯನ್ನೂ ಪಡುತ್ತಿದ್ದರು.
 ನಿಧಾನವಾಗಿ ಜಯಪುರದಲ್ಲಿ ಹೆಸರು ಮಾಡಿದ ಸುಂದರ್ ರಾಹುಲ್ ಗಾಧಿಯ ಅನುಕರಣೆ ಮಾಡಿದರೆ ಜನರು ಹೊಟ್ಟೆ ತುಂಬ ನಗುತ್ತಿದ್ದರು,ಆದರೆ ಮೋದಿಯವರ ಧ್ವನಿಯಲ್ಲಿ ಮಾತನಾಡಿದರೆ ಜನರಿಗೆ ಅಚ್ಚರಿಯಿಂದ ಮಾತುಗಳೇ ಹೊರಡುತ್ತಿರಲಿಲ್ಲ. ಟಿವಿ ಕಾರ್ಯಕ್ರಮಗಳಲ್ಲಿ ಅವಕಾಶ ಹುಡುಕಿಕೊಂಡು ಆರು ತಿಂಗಳ ಹಿಂದೆ ಮುಂಬೈಗೆ ತೆರಳಿರುವ ಸುಂದರ್‌ಗೆ ಅವಕಾಶಗಳು ದೊರೆಯುವ ಸಾಧ್ಯತೆಗಳು ದಟ್ಟವಾಗಿವೆ.

ಮೋದಿಯವರನ್ನು ಖುದ್ದು ಭೇಟಿಯಾಗುವುದು ಸುಂದರ್‌ನ ಈಗಿನ ಕನಸು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News