×
Ad

ಕ್ಯಾಶ್‌ಲೆಸ್ ವಹಿವಾಟು: ದೇಶದ ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವೇ?

Update: 2016-12-04 23:50 IST

ಮಾನ್ಯರೆ,

ಒಂದು ಸಮಾಜ ಕ್ಯಾಶ್‌ಲೆಸ್ ವಹಿವಾಟು ಪದ್ಧತಿಗೆ ಹೊಂದಿಕೊಳ್ಳುವುದು ಮಾತ್ರ ಅಲ್ಲ,ಅಲ್ಲಿ ಯಾವ ನಗದಿಗೂ ಬೆಲೆ ಇರಬಾರದು. ಅಂತಹ ಸಮಾಜ ಸೃಷ್ಟಿ ಆಗಲಿ ಎಂಬ ಬಯಕೆ ನನ್ನದು.

ಪ್ರತಿದಿನವೂ, ದೊಡ್ಡ ಮಟ್ಟದಲ್ಲಿ ಹಣಕಾಸು ವ್ಯವಹಾರ ಮಾಡುವ ಹಣವಂತ ಅಲ್ಲದಿದ್ದರೂ ಕಳೆದ ನಾಲ್ಕೈದು ವರ್ಷಗಳಿಂದ ಹೆಚ್ಚಾಗಿ ಕ್ಯಾಶ್‌ಲೆಸ್ ಟ್ರಾನ್ಸೇಕ್ಷನ್ ಅವಲಂಬಿಸಿರುವ ಅನುಭವ ನನಗಿದೆ. ಇಂಟರ್‌ನೆಟ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ ಹಾಗೂ ಪೇ-ಟಿಎಮ್‌ಗಳಂತಹವುಗಳ ಮೂಲಕ ಮೋದಿ ಹೇಳುವುದಕ್ಕೂ ಮೊದಲೇ ಬಳಕೆ ಮಾಡುವುದನ್ನು ಕಲಿತಿದ್ದೇನೆ.

ಆದರೆ, ಇಂದು ಏಕಾಏಕಿ ವ್ಯವಹಾರವನ್ನು ದೇಶದ ನೂರಿಪ್ಪತ್ತು ಕೋಟಿ ಜನರ ಮೇಲೆ ಹೇರುವುದನ್ನು ನಾನು ವಿರೋಧಿಸುತ್ತೇನೆ. ಯಾಕೆಂದರೆ, 1. ಕ್ಯಾಶ್‌ಲೆಸ್ ವ್ಯವಹಾರ ಮಾಡುವಾಗ ಪ್ರತಿಯೊಂದು ವ್ಯವಹಾರದ ಮೇಲೂ ಬ್ಯಾಂಕ್ ಹಾಗೂ ಪೇ-ಟಿಎಮ್‌ನಂತಹ ಕಂಪೆನಿಗಳು ನಮ್ಮ ಅಕೌಂಟ್‌ಗಳಿಂದ ಕಮಿಷನ್ ಪೀಕುತ್ತವೆ.
2. ಕ್ಯಾಶ್‌ಲೆಸ್ ಟ್ರಾನ್ಸೇಕ್ಷನ್ ಕಡ್ಡಾಯ ಮಾಡಿದಾಗ ಎಲ್ಲಾ ಕಡೆ ಬಿಗ್ ಬಝಾರ್ ಅಥವಾ ಮಾಲ್ ಸಂಸ್ಕೃತಿ ತಲೆ ಎತ್ತುತ್ತದೆ.ಅಥವಾ ಕ್ಯಾಶ್‌ಲೆಸ್ ಟ್ರಾನ್ಸೇಕ್ಷನ್ ಮಾಡಲು ಆಗದ ಸಣ್ಣಪುಟ್ಟ ವ್ಯಾಪಾರಗಳು ನೆಲಕಚ್ಚುತ್ತವೆ.

3. ಕ್ಯಾಶ್‌ಲೆಸ್ ವಹಿವಾಟು ಮೊಬೈಲ್ ಅದರಲ್ಲೂ ಸ್ಮಾರ್ಟ್‌ಫೋನ್ ಫ್ರೆಂಡ್ಲಿ ಆಗಿದೆ. ಮೋದಿಯವರೇ ಹೇಳಿರುವ ಮಾತನ್ನು ನಂಬಿದರೂ ದೇಶದಲ್ಲಿ ಸ್ಮಾರ್ಟ್ ಫೋನ್ ಇರುವುದು ಕೇವಲ 4.ಕೋಟಿ ಜನರ ಬಳಿ. ಅದರಲ್ಲಿ ಎಲ್ಲರಿಗೂ ನೆಟ್ ಬ್ಯಾಂಕಿಂಗ್ ಬಳಸಲು ಬರುತ್ತದೆ ಎಂದೇನಿಲ್ಲ.ಉಳಿದ 6 ಕೋಟಿ ಜನರು ಈ ಪರಿಧಿಯಿಂದ ಹೊರಗೆ ಉಳಿಯುತ್ತಾರೆ.
4. ಕ್ಯಾಶ್‌ಲೆಸ್ ಟ್ರಾನ್ಸೇಕ್ಷನ್ ಮಾಡಲು ಬರುವಂಥವರ ಮೇಲೆ ಬರೆದವರು ಅವಲಂಬಿಸಿರುವುದರಿಂದ ಅಲ್ಲಿ ಮತ್ತೊಂದು ಕಮಿಷನ್ ಏಜೆಂಟರ ಪಡೆ ಹುಟ್ಟಿಕೊಂಡು ಜನರಿಗೆ ಹೊರೆ ಹೆಚ್ಚಾಗುತ್ತದೆ.
5. ಹಳ್ಳಿಗಳಲ್ಲಿ,ಸಣ್ಣಪುಟ್ಟ ಪೇಟೆ ಪಟ್ಟಣಗಳಲ್ಲಿ ಕ್ಯಾಶ್‌ಲೆಸ್ ಟ್ರಾನ್ಸೇಕ್ಷನ್ ಅನ್ನುವುದು ಸದ್ಯದ ಮಟ್ಟಿಗೆ ಕಷ್ಟಸಾಧ್ಯ.ದಿನಸಿ ಅಂಗಡಿ ಕಿಟ್ಟಣ್ಣ,ತರಕಾರಿ ಮಾರುವ ರಾಮಕ್ಕರ ಬಳಿ ಹೋಗಿ ಕಾರ್ಡ್ ಸ್ವೈಪ್ ಮಾಡ್ತೀವಿ ಅಂದರೆ ಏನಾಗಬಹುದು?ನಮ್ಮೂರಲ್ಲಿ ಪ್ರತಿದಿನ ಮೀನು ಮಾರಲು ಬರುವ ಬುಡಾನ್ ಸಾಬ್ರಿಗೆ ಯಾವ ಕಾರ್ಡ್ ಮೂಲಕ ಹಣ ಕೊಟ್ಟು ಮೀನು ಖರೀದಿ ಮಾಡೋಣ?
6. ಬೆಂಗಳೂರಿನಿಂದ ಸಾಗರಕ್ಕೆ ಬೇಕಾದರೆ ಆನ್‌ಲೈನ್‌ಮೂಲಕ ಬುಕ್ ಮಾಡಿಕೊಂಡು ಹೋಗ್ತೀವಿ ಅನ್ನಿ. ಸಾಗರದಿಂದ ಕುಗ್ವೆಗೆ ಬಸ್ ಟಿಕೆಟ್ ಬುಕ್ ಮಾಡುವ ಯಾವುದಾದರೂ ಮಾರ್ಗ ಇದೆಯಾ? ಮಧ್ಯ ಕರ್ನಾಟಕದ ಅನೇಕ ಕಡೆ ಟಾಂ ಟಾಂ ಗಾಡಿಗಳಲ್ಲಿಯೇ ಪ್ರಯಾಣವಿರುತ್ತದೆ. ಅಲ್ಲಿ ಕ್ಯಾಶ್‌ಲೆಸ್ ಟ್ರಾನ್ಸೇಕ್ಷನ್ ಸಾಧ್ಯವಾಗುತ್ತದೆಯಾ?
ಭಾರತದ ಬಹುತೇಕ ಜನರು ಪ್ರಯಾಣಕ್ಕಾಗಿ ಕಾರು ಬಳಸುವುದಿಲ್ಲ ಎಂಬ ಪರಿಜ್ಞಾನ ಇರಬೇಕು
7. ಕ್ಯಾಶ್‌ಲೆಸ್ ಟ್ರಾನ್ಸೇಕ್ಷನ್ ಯಾವಾಗ ಸುಲಭ ಎಂದರೆ ನಿಮಗೆ ಪ್ರತಿ ತಿಂಗಳು ನಿಗದಿತವಾಗಿ ನಿಮ್ಮ ಅಕೌಂಟಿಗೆ ಸಾಕಷ್ಟು ಸಂಬಳ ಬಂದು ಬೀಳುತ್ತಿದ್ದು ನಿಮಗೆ ಸಾಲದ ಬಾಧೆ ಇರಬಾರದು.ಆದರೆ ಭಾರತದಲ್ಲಿ ಇದು ಎಷ್ಟು ಜನರಿಗೆ ಸಾಧ್ಯ?ಇಲ್ಲಿ ವಾರಕ್ಕೊಮ್ಮೆ ಪಗಾರ ಬಟಾವಡೆ ಆಗುವ ಕೂಲಿ ಕಾರ್ಮಿಕರು,ಬೆಳೆ ಬಂದಾಗ ಮಾತ್ರ ಹಣ ಕೈಯಲ್ಲಿ ಓಡಾಡುವ ಸಣ್ಣ ರೈತರು, ಇವರೆಲ್ಲಾ ಯಾವ ರೀತಿಯ ಕ್ಯಾಶ್‌ಲೆಸ್ ವಹಿವಾಟು ನಡೆಸಬಲ್ಲರು?
ನನಗೆ ತಕ್ಕ ಮಟ್ಟಿಗೆ ಆದಾಯ ಇದೆ,ನಾನುಕ್ಯಾಶ್‌ಲೆಸ್ ಟ್ರಾನ್ಸೇಕ್ಷನ್ ಮಾಡಲು ಕಲಿತಿದ್ದೇನೆ ಎಂದಾಗ ದೇಶದ ಎಲ್ಲಾ ಜನರಿಗೂ ಉತ್ತಮ ಆದಾಯ ಪ್ರತಿತಿಂಗಳು ಬ್ಯಾಂಕ್ ಅಕೌಂಟ್‌ಗೆ ಬಂದು ಬೀಳಲಿ,ಎಲ್ಲಾ ಭಾರತೀಯರೂ ಸಮಯ ಉಳಿತಾಯ ಮಾಡುವಕ್ಯಾಶ್ ಲೆಸ್ ಟ್ರಾನ್ಸೇಕ್ಷನ್ ಮಾಡುವಂತಹ ಕಾಲ ಬರಲಿ ಎಂದು ಆಶಿಸುವುದು ಸರಿ.ಆದರೆ, ನನ್ನಂತೆಯೇ ಎಲ್ಲರೂ ಈಗಿಂದೀಗಲೇ ಕ್ಯಾಶ್‌ಲೆಸ್ ಟ್ರಾನ್ಸೇಕ್ಷನ್ ಶುರು ಮಾಡಿ ಎಂದು ಹುಕುಂ ಹೊರಡಿಸುವುದು ಸ್ಯಾಡಿಸ್ಟ್ ಮನೋಭಾವ ಮಾತ್ರ.
ಇಂತಹ ಸ್ಯಾಡಿಸ್ಟ್ ಮನೋಭಾವವನ್ನು ಜನರ ಮೇಲೆ ಹೇರುವುದನ್ನು ನಾವು ಬಲವಾಗಿ ವಿರೋಧಿಸಬೇಕಿದೆ.
 

Writer - -ಹರ್ಷಕುಮಾರ್ ಕುಗ್ವೆ

contributor

Editor - -ಹರ್ಷಕುಮಾರ್ ಕುಗ್ವೆ

contributor

Similar News