ಪ್ರಧಾನಿ ಮೋದಿ ಟೈಮ್ ವರ್ಷದ ವ್ಯಕ್ತಿ! ಅಲ್ಲ......

Update: 2016-12-05 14:01 GMT

ಹೊಸದಿಲ್ಲಿ,ಡಿ.5: ಪ್ರತಿಷ್ಠಿತ ಟೈಮ್ ಮ್ಯಾಗಝಿನ್‌ನ ಈ ಬಾರಿಯ 'ವರ್ಷದ ವ್ಯಕ್ತಿ' ಆಯ್ಕೆಗಾಗಿ ಓದುಗರ ಮತಗಳನ್ನು ಗೆಲ್ಲುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಪ್ರತಿಸ್ಪರ್ಧಿಗಳಿಗಿಂತ ಎಷ್ಟೋ ಮುಂದಿರಬಹುದು. ಆದರೆ ಅವರ ಬೆಂಬಲಿಗರು ಇದರಿಂದ ಖುಷಿಯಾಗಬೇಕಾಗಿಲ್ಲ.

ಜನಪ್ರಿಯ ಆನ್‌ಲೈನ್ ವೋಟಿಂಗ್‌ನಲ್ಲಿ ಗೆದ್ದವರು ಸಂಪಾದಕೀಯ ಮಂಡಳಿಯ ನಿರ್ಧಾರದಿಂದಾಗಿ ಕಳೆದೊಂದು ದಶಕದಲ್ಲಿ ಟೈಮ್‌ನ 'ವರ್ಷದ ವ್ಯಕ್ತಿ' ಮುಕುಟವನ್ನು ಧರಿಸಲು ಎಂದೂ ಸಾಧ್ಯವಾಗಿಲ್ಲ.

ಉದಾಹರಣೆಗೆ ಮೋದಿ ಎರಡು ವರ್ಷಗಳ ಹಿಂದೆ ಓದುಗರ ಮತಗಳನ್ನು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪಡೆದಿದ್ದರು. ಆದರೆ 'ವರ್ಷದ ವ್ಯಕ್ತಿ' ಪ್ರಶಸ್ತಿ ಆಫ್ರಿಕಾದ ಎಬೋಲಾ ಹೋರಾಟಗಾರರ ಪಾಲಾಗಿತ್ತು.

  ಇದೇ ರೀತಿ ಕಳೆದ ವರ್ಷ ಓದುಗರ ಸಮೀಕ್ಷೆಯಲ್ಲಿ ಯುವಜನತೆಯಲ್ಲಿ ಭಾರೀ ಜನಪ್ರಿಯರಾಗಿದ್ದ ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಬರ್ನೀ ಸ್ಯಾಂಡರ್ಸ್ ವಿಜಯಶಾಲಿಯಾಗಿ ಹೊರಹೊಮ್ಮಿದ್ದರು. ಆದರೆ 'ವರ್ಷದ ವ್ಯಕ್ತಿ' ಪ್ರಶಸ್ತಿ ಮಾತ್ರ ಗ್ರೀಕ್ ಸಾಲ ಬಿಕ್ಕಟ್ಟು ಮತ್ತು ಹೆಚ್ಚುತ್ತಿದ್ದ ನಿರಾಶ್ರಿತರ ಸಮಸ್ಯೆಯ ನಡುವೆಯೂ ಯುರೋಪ್‌ನ್ನು ಮುನ್ನಡೆಸುವಲ್ಲಿ ವಹಿಸಿದ್ದ ಪಾತ್ರಕ್ಕಾಗಿ ಜರ್ಮನಿಯ ಚಾನ್ಸೆಲರ್ ಏಂಜಲಾ ಮರ್ಕೆಲ್ ಅವರ ಮುಡಿಗೇರಿತ್ತು.

 ಆನ್‌ಲೈನ್‌ನಲ್ಲಿ ಓದುಗರ ಮತಗಳಲ್ಲಿ ಸುಲಭವಾಗಿ ಹಸ್ತಕ್ಷೇಪ ಮಾಡಬಹುದು ಮತ್ತು ಕೆಲವು ಪ್ರದೇಶಗಳಿಂದ ಒಬ್ಬನೇ ವ್ಯಕ್ತಿಯ ಪರವಾಗಿ ಭಾರೀ ಸಂಖ್ಯೆಯಲ್ಲಿ ಮತಗಳು ಹರಿದುಬರುವಂತೆ ಮಾಡಬಹುದು ಎಂದು ಹಲವು ಜನರು ಆಗಾಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಿದೆ.

ಉದಾಹರಣೆಗೆ ಈ ವರ್ಷ ಮೋದಿಯವರ ಗೆಲುವಿಗೆ ಭಾರತ,ಕ್ಯಾಲಿಫೋರ್ನಿಯಾ ಮತ್ತು ನ್ಯೂಜೆರ್ಸಿಯಿಂದ ಬಂದಿದ್ದ ಭಾರೀ ಸಂಖ್ಯೆಯ ಮತಗಳು ತಮ್ಮ ಕೊಡುಗೆ ಸಲ್ಲಿಸಿವೆ ಎಂದು ಟೈಮ್ ಮ್ಯಾಗಝಿನ್ ತಿಳಿಸಿದೆ.

ಓದುಗರ ಅಭಿಪ್ರಾಯ ಸಂಗ್ರಹವು ಈ ಹಿಂದೆಯೂ ವಿವಾದದಲ್ಲಿ ಸಿಲುಕಿದ್ದಿದೆ. 2012ರಲ್ಲಿ ಮತಗಳ ನೀಡಿಕೆಯಲ್ಲಿ ವಂಚನೆ ನಡೆದಿದೆ ಎಂಬ ವ್ಯಾಪಕ ಆರೋಪಗಳ ನಡುವೆಯೇ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಓದುಗರ ಸಮೀಕ್ಷೆಯಲ್ಲಿ ಅಗ್ರಸ್ಥಾನಿಯಾಗಿ ಹೊರಹೊಮ್ಮಿದ್ದರು. ಅಂತರ್ಜಾಲ ವೇದಿಕೆ 4ಚಾನ್ ಐದು ಲಕ್ಷಕ್ಕೂ ಅಧಿಕ ಮತಗಳನ್ನು ಚಲಾಯಿಸುವ ಮೂಲಕ ಫಲಿತಾಂಶವನ್ನು ಕಿಮ್ ಪರವಾಗಿರುವಂತೆ ಅಕ್ರಮ ನಡೆಸಿತ್ತು ಎಂದು ಬ್ರಿಟಿಷ್ ಮಾಧ್ಯಮಗಳು ಆಗ ಆರೋಪಿಸಿದ್ದವು.

 ಮ್ಯಾಗಝಿನ್‌ನ ವೆಬ್‌ಸೈಟ್‌ನ್ನು 4ಚಾನ್ ಹ್ಯಾಕ್ ಮಾಡಿದ್ದು ಇದೇ ಮೊದಲ ಬಾರಿಯಾಗಿರಲಿಲ್ಲ. 2009ರಲ್ಲಿ ಅದು ಅಕ್ರಮ ವಿಧಾನದಿಂದ ತನ್ನ ಸ್ಥಾಪಕ ಕ್ರಿಸ್ಟೋಫರ್‌'ಮೂಟ್' ಪೂಲ್ ಅವರು ವರ್ಷದ ವ್ಯಕ್ತಿಗಾಗಿ ಟೈಮ್ ಓದುಗರ ಸಮೀಕ್ಷೆಯಲ್ಲಿ ಅಗ್ರಸ್ಥಾನಿಯಾಗುವಂತೆ ಮಾಡಿತ್ತು.

ಹಿಂದಿನ 12 ತಿಂಗಳುಗಳಲ್ಲಿ ಅತ್ಯಂತ ಬೃಹತ್ ಜಾಗತಿಕ ಪ್ರಭಾವವನ್ನು ಬೀರಿರುವ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿಗೆ ಮೀಸಲಾಗಿರುವ ಟೈಮ್ಸ್ 'ವರ್ಷದ ವ್ಯಕ್ತಿ' ಪ್ರಶಸ್ತಿಗೆ ಹಕ್ಕುದಾರರನ್ನು ನಿರ್ಧರಿಸುವ ಮುನ್ನ ಜಾಗತಿಕ ಮನೋಸ್ಥಿತಿಯನ್ನು ಅರಿಯಲು ಸಂಪಾದಕೀಯ ಮಂಡಳಿಯು ಓದುಗರ ಅಭಿಪ್ರಾಯ ಸಂಗ್ರಹವನ್ನು ನಡೆಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News