14 ಸಾವಿರ ಕೋ.ರೂ.ಕಪ್ಪುಹಣದ ಹಿಂದಿರುವ ‘ಜನರಲ್ ಡಯರ್’ ಯಾರು?

Update: 2016-12-05 14:43 GMT

ಹೊಸದಿಲ್ಲಿ,ಡಿ.5: ಕೇಂದ್ರದ ಆದಾಯ ಬಹಿರಂಗ ಯೋಜನೆಯಡಿ 13,860 ಕೋ.ರೂ.ಕಪ್ಪುಹಣವನ್ನು ಘೋಷಿಸಿ, ಮೊದಲ ಕಂತಿನ ತೆರಿಗೆಯನ್ನು ಕಟ್ಟಲಾಗದೆ ನಾಪತ್ತೆ ಯಾಗಿ ಬಳಿಕ ಡಿ.3ರಂದು ಟಿವಿ ಸ್ಟುಡಿಯೊದಲ್ಲಿ ಪ್ರತ್ಯಕ್ಷನಾಗಿ ತಾನು ರಾಜಕಾರಣಿಗಳು ಮತ್ತು ಕೈಗಾರಿಕೋದ್ಯಮಿಗಳ ಮುಖವಾಡವಾಗಿದ್ದೆ ಎಂದು ಹೇಳಿಕೊಂಡಿರುವ ಗುಜರಾತಿನ ಸಣ್ಣ ಪ್ರಮಾಣದ ರಿಯಲ್ ಎಸ್ಟೇಟ್ ಉದ್ಯಮಿ ಮಹೇಶ್ ಶಾ ಕಥೆಯು ಇನ್ನಷ್ಟು ನಿಗೂಢವಾಗುತ್ತಿದೆ,ಜೊತೆಗೆ ಇನ್ನಷ್ಟು ಕುತೂಹಲಕಾರಿಯೂ ಆಗುತ್ತಿದೆ.

 ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಮಹೇಶ ಅವರ ಕಚೇರಿಗೆ ಮುಕ್ತವಾಗಿ ಹೋಗಿಬರುತ್ತಿದ್ದ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಸುರೇಶಭಾಯಿ ಮೆಹ್ತಾ ಅವರು ಸೋಮವಾರ ಮಾಧ್ಯಮಗಳಿಗೆ ತಿಳಿಸಿದರು.

ಇದೇ ವೇಳೆ ಪಟೇಲ್ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ ಪಟೇಲ್ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಪರೋಕ್ಷವಾಗಿ ಪ್ರಸ್ತಾಪಿಸಿ, ‘ಜನರಲ್ ಡಯರ್’ ಮಹೇಶನ ಹಿಂದಿರುವ ಮುಖ್ಯ ವ್ಯಕ್ತಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬೆಳವಣಿಗೆಗೆ ತಕ್ಷಣ ಪ್ರತಿಕ್ರಿಯಿಸಿರುವ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು, ಪಟೇಲ್ ಆರೋಪಗಳಿಗೆ ಅಮಿತ್ ಶಾ ಉತ್ತರಿಸಬೇಕು. ಇದೊಂದು ಗಂಭೀರ ಆರೋಪವಾಗಿದೆ. ಈ ಬಗ್ಗೆ ತನಿಖೆ ನಡೆಯ ಬೇಕಾಗಿದೆ ಎಂದು ಟ್ವೀಟಿಸಿದ್ದಾರೆ.

 ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಬರುತ್ತಿದ್ದ ಉಡುಗೊರೆಗಳನ್ನು ಹರಾಜು ಹಾಕುವ ಕೆಲಸವನ್ನು ಇದೇ ಮಹೇಶ ಮಾಡುತ್ತಿದ್ದ ಎಂದೂ ಮೆಹ್ತಾ ಆರೋಪಿಸಿದ್ದಾರೆ. ಈ ಹಣವೆಲ್ಲ ಸರಕಾರದ ಕಲ್ಯಾಣ ಯೋಜನೆಗಳಿಗೆ ಬಳಕೆಯಾಗುತ್ತಿತ್ತು. ಒಮ್ಮೆ ಹರಾಜು ಪ್ರಕ್ರಿಯೆಯೊಂದು ವಿಫಲಗೊಂಡಿದ್ದಾಗ ಮಹೇಶ ಸ್ವತಃ ಅವೆಲ್ಲ ಸಾಮಗ್ರಿಗಳನ್ನು ಖರೀದಿಸಿದ್ದ ಮತ್ತು ಬಳಿಕ ಅಹ್ಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕು ಅವೆಲ್ಲ ಸಾಮಗ್ರಿಗಳನ್ನು ಪಡೆದುಕೊಂಡು ಆತನಿಗೆ ಹಣವನ್ನು ಪಾವತಿಸಿತ್ತು. ಅಮಿತ್ ಶಾ 2003ರವರೆಗೆ ಈ ಬ್ಯಾಂಕಿನ ಅಧ್ಯಕ್ಷರಾಗಿದ್ದರು ಮತ್ತು ಈಗಲೂ ನಿರ್ದೇಶಕರಾಗಿ ಮುಂದುವರಿದಿದ್ದಾರೆ ಎಂದು ಮೆಹ್ತಾ ಹೇಳಿದರು.

ತಾನು ಘೋಷಿಸಿರುವ ಕಪ್ಪುಹಣ ರಾಜಕಾರಣಿಗಳು,ಹಿರಿಯ ಅಧಿಕಾರಿಗಳು ಮತ್ತು ಉದ್ಯಮಿಗಳಿಗೆ ಸೇರಿದ್ದು ಅವರ ಹೆಸರುಗಳನ್ನು ಆದಾಯ ತೆರಿಗೆ ಇಲಾಖೆಗೆ ನೀಡುವುದಾಗಿ ಮಹೇಶ ಟಿವಿ ಮುಂದೆ ಹೇಳಿದ್ದ. ಕಮಿಷನ್ ಆಸೆಗೆ ಬಿದ್ದು ತಾನು ತಪ್ಪು ಮಾಡಿದೆ ಎಂದೂ ಆತ ಒಪ್ಪಿಕೊಂಡಿದ್ದ.

ಮೆಹ್ತಾರ ಆರೋಪವನ್ನು ರಾಜ್ಯ ಬಿಜೆಪಿಯು ಸ್ಪಷ್ಟವಾಗಿ ನಿರಾಕರಿಸಿದೆ. ಮಹೇಶ ಶಾಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಪಕ್ಷದ ಯಾರಿಗೂ ಆತನ ಬಗ್ಗೆ ಗೊತ್ತಿಲ್ಲ ಎಂದು ಬಿಜೆಪಿ ವಕ್ತಾರ ಭರತ್ ಪಾಂಡ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News