ಹೆಚ್ಚುತ್ತಿರುವ ರಸ್ತೆ ಅಪಘಾತ ಪ್ರಕರಣ : 2015ರಲ್ಲಿ ಮೃತಪಟ್ಟವರ ಸಂಖ್ಯೆ ಎಷ್ಟು ಗೊತ್ತೇ ?

Update: 2016-12-05 14:41 GMT

ಹೊಸದಿಲ್ಲಿ, ಡಿ.5: 2015ರಲ್ಲಿ ರಸ್ತೆ ಅಪಘಾತ ಪ್ರಕರಣ ಹೆಚ್ಚಿದ್ದು 1.46 ಲಕ್ಷ ಜನ ಮೃತಪಟ್ಟಿದ್ದು 5 ಲಕ್ಷ ಜನ ಗಾಯಗೊಂಡಿದ್ದಾರೆ ಎಂದು ಲೋಕಸಭೆಗೆ ಇಂದು ತಿಳಿಸಲಾಗಿದೆ.

2015ರಲ್ಲಿ ದೇಶದಲ್ಲಿ ರಸ್ತೆ ಅಪಘಾತ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 1,46,133. 5,00,279 ಮಂದಿ ಗಾಯಗೊಂಡಿದ್ದಾರೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಸಹಾಯಕ ಸಚಿವ ಮನ್‌ಸುಖ್ ಎಲ್.ಮಂಡವಿಯಾ ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ 5,01,423 ರಸ್ತೆ ಅಪಘಾತ ನಡೆದಿದ್ದರೆ 2014ರಲ್ಲಿ ರಸ್ತೆ ಅಪಘಾತದ ಸಂಖ್ಯೆ 4,89,400 ಆಗಿತ್ತು ಎಂದವರು ತಿಳಿಸಿದ್ದಾರೆ. 2011ರಿಂದ 2013ರ ಅವಧಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಮತ್ತು ಗಾಯಗೊಂಡವರ ಸಂಖ್ಯೆ ಇಳಿಮುಖವಾಗಿತ್ತು. ರಸ್ತೆ ಅಪಘಾತದ ಕಾರಣ ಭಾರತದಲ್ಲಿ ಪ್ರತೀ ವರ್ಷ ಅಭಿವೃದ್ಧಿ ದರದ ಮೇಲೆ ಶೇ.3ರಷ್ಟು ಹೊಡೆತ ಬೀಳುತ್ತಿದೆ. ಈ ನಷ್ಟದ ಪ್ರಮಾಣ 58 ಬಿಲಿಯನ್ ಡಾಲರ್‌ಗಳಷ್ಟು ಎಂದು ವಿಶ್ವಸಂಸ್ಥೆಯ ಏಶ್ಯಾ ಮತ್ತು ಪೆಸಿಫಿಕ್ ವಿಭಾಗದ ಆರ್ಥಿಕ ಮತ್ತು ಸಾಮಾಜಿಕ ಆಯೋಗದ ವರದಿ ತಿಳಿಸಿದೆ.

ರಸ್ತೆ ಅಪಘಾತವನ್ನು ನಿಯಂತ್ರಿಸುವುದು ತನ್ನ ಇಲಾಖೆಯ ಆದ್ಯತೆಯ ಕಾರ್ಯವಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News