×
Ad

ಹಿಜಾಬ್‌ಧಾರಿ ಪೊಲೀಸ್ ಅಧಿಕಾರಿಯನ್ನು ‘ಐಸಿಸ್’ ಎಂದು ಕರೆದ ದುಷ್ಕರ್ಮಿ

Update: 2016-12-05 21:18 IST

 ನ್ಯೂಯಾರ್ಕ್, ಡಿ. 5: ಹಿಜಾಬ್‌ಧಾರಿ ಮುಸ್ಲಿಮ್ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಬಿಳಿಯ ವ್ಯಕ್ತಿಯೊಬ್ಬ ‘ಐಸಿಸ್’ ಎಂದು ಕರೆದು, ‘ನಿಮ್ಮ ದೇಶಕ್ಕೆ ಹಿಂದಿರುಗಿ’ ಎಂದು ಹೇಳಿದ ಘಟನೆ ಬ್ರೂಕ್ಲಿನ್‌ನಲ್ಲಿ ಶನಿವಾರ ನಡೆದಿದೆ. ಅಷ್ಟೇ ಅಲ್ಲದೆ, ಮಹಿಳೆಯ 16 ವರ್ಷದ ಮಗನನ್ನು ದುಷ್ಕರ್ಮಿಯು ದೂಡಿ ಹಾಕಿದ್ದಾನೆ.

ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಜಯ ಗಳಿಸಿದ ಬಳಿಕ, ಹಿಜಾಬ್‌ಧಾರಿ ಮಹಿಳೆಯರ ಮೇಲೆ ಆಕ್ರಮಣಗಳು ಹೆಚ್ಚಾಗುತ್ತಿರುವುದನ್ನು ಸ್ಮರಿಸಬಹುದಾಗಿದೆ.

ಕರ್ತವ್ಯದಲ್ಲಿರದ ಪೊಲೀಸ್ ಅಧಿಕಾರಿ ಅಮಲ್ ಎಲ್ಸೋಕರಿ ಬ್ರೂಕಿನ್‌ನಲ್ಲಿ ತನ್ನ ಮಗನನ್ನು ಬಿಟ್ಟು ಹೋಗಿದ್ದರು. ತನ್ನ ಕಾರನ್ನು ನಿಲ್ಲಿಸಿ ಅವರು ವಾಪಸಾದಾಗ, ಬಿಳಿಯ ವ್ಯಕ್ತಿಯೊಬ್ಬ ತನ್ನ ಮಗನನ್ನು ತಳ್ಳುವುದನ್ನು ಗಮನಿಸಿದರು.

ಅಲ್ಲಿಗೆ ಮಹಿಳೆ ಹೋದಾಗ, ಆ ವ್ಯಕ್ತಿಯು ಮಹಿಳೆಯನ್ನು ಉದ್ದೇಶಿಸಿ, ‘‘ಐಸಿಸ್, ನಾನು ನಿನ್ನ ಗಂಟಲು ಕತ್ತರಿಸುತ್ತೇನೆ, ನಿನ್ನ ದೇಶಕ್ಕೆ ವಾಪಸ್ ಹೋಗು’’ ಎಂದು ಹೇಳಿದನೆನ್ನಲಾಗಿದೆ.ಬಳಿಕ ದುಷ್ಕರ್ಮಿಯು ಪರಾರಿಯಾದನು. ಆತನನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.


ಶೌರ್ಯ ಪ್ರಶಸ್ತಿ ಪಡೆದಿದ್ದ ‘ಹೀರೊ’

ಅಮಲ್ ಎಲ್ಸೋಕರಿ ಕರ್ತವ್ಯದಲ್ಲಿರುವಾಗಲೂ ಹಿಜಾಬ್ ಧರಿಸುತ್ತಾರೆ. ಅವರು 2014ರ ಎಪ್ರಿಲ್‌ನಲ್ಲಿ ಉರಿಯುತ್ತಿರುವ ಕಟ್ಟಡದ ಒಳಗೆ ಧಾವಿಸಿ ಓರ್ವ ವೃದ್ಧ ಮತ್ತು ಹೆಣ್ಣು ಮಗುವೊಂದನ್ನು ರಕ್ಷಿಸಿದ್ದರು. ಅದಕ್ಕಾಗಿ ನ್ಯೂಯಾರ್ಕ್ ನಗರದ ಮೇಯರ್ ಅವರನ್ನು ‘ಹೀರೊ’ ಎಂಬುದಾಗಿ ಕರೆದಿದ್ದರು.

ಅಮೆರಿಕದ ಮೇಲೆ 2001 ಸೆಪ್ಟಂಬರ್ 11ರಂದು ನಡೆದ ಭಯೋತ್ಪಾದಕ ದಾಳಿ ನಡೆದ ಬಳಿಕ ಅಮಲ್ ಪೊಲೀಸ್ ಪಡೆಗೆ ಸೇರ್ಪಡೆಗೊಂಡಿದ್ದರು. ‘‘ಅಂದು ನಡೆದ ಭಯೋತ್ಪಾದಕ ದಾಳಿ ಇಸ್ಲಾಮ್‌ನ ಬೋಧನೆಗಳಿಗೆ ವಿರುದ್ಧವಾಗಿದೆ ಎಂಬುದನ್ನು ತೋರಿಸುವುದಕ್ಕಾಗಿ ಅಮಲ್ ಪೊಲೀಸ್ ಇಲಾಖೆಗೆ ಸೇರಿದ್ದಾರೆ’’ ಎಂಬುದಾಗಿ 2014ರಲ್ಲಿ ನಡೆದ ಔತಣಕೂಟವೊಂದರಲ್ಲಿ ಮೇಯರ್ ಡಿ ಬ್ಲಾಸಿಯೊ ಶ್ಲಾಘಿಸಿದ್ದರು.
ತನ್ನ ಶೌರ್ಯಕ್ಕಾಗಿ ಐದು ಮಕ್ಕಳ ತಾಯಿ ಶೌರ್ಯ ಪದಕವನ್ನೂ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News