ಮೋದಿಯ ನೋಟು ರದ್ದತಿ ನಿರ್ಧಾರದಿಂದ ಜನರು ಫಕೀರರಾಗಿದ್ದಾರೆ: ಮಾಯಾವತಿ
ಲಕ್ನೊ, ಡಿ.6: ತಾನೊಬ್ಬ ‘ಫಕೀರ’ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳೀಕೆಗೆ ತಿರುಗೇಟು ನೀಡಿರುವ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ, ಮೋದಿಯವರ ನೋಟು ರದ್ದತಿ ನಿರ್ಧಾರವು ದೇಶದ ಬಹುಸಂಖ್ಯಾತ ಜನರನ್ನು ದಿವಾಳಿ ಮಾಡಿದೆಯೇ ಹೊರತು ಅವರನ್ನಲ್ಲ. ಇದರಿಂದಾಗಿ ಬಿಜೆಪಿ ಉತ್ತರಪ್ರದೇಶದಲ್ಲಿ ಸೋಲಲಿದೆ ಎಂದಿದ್ದಾರೆ.
ಮೋದಿ ಇನ್ನೂ ಫಕೀರನಾಗಿಲ್ಲ. ಆದರೆ, ಖಂಡಿತವಾಗಿಯೂ ದೇಶದ ಶೇ.90ರಷ್ಟು ಜನರು ‘ಫಕೀರರಾಗಿದ್ದಾರೆ’. ಅವರ ನೋಟು ರದ್ದತಿ ನಿರ್ಧಾರ ಜನ ಸಾಮಾನ್ಯರನ್ನು ದಿವಾಳಿಯೆಬ್ಬಿಸಿದೆಯೆಂದು ಅವರು ಆರೋಪಿಸಿದರು.
ತನ್ನ ಆಡಳಿತಾವಧಿಯಲ್ಲಿ ದಲಿತ ನಾಯಕನ ಗೌರವಾರ್ಥ ನಿರ್ಮಿಸಿದ್ದ ಸ್ಮಾರಕ, ಅಂಬೇಡ್ಕರ್ ಸಾಮಾಜಿಕ ಪರಿವರ್ತನ್ ಸ್ಥಳದಲ್ಲಿ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರರ 61ನೆ ಪರಿನಿಬ್ಬಾಣ ದಿನದಂದು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾಯಾವತಿ ಮಾತನಾಡುತ್ತಿದ್ದರು.
ನೋಟು ರದ್ದತಿ ನಿರ್ಧಾರ ಜನರಿಗೆ ಎಷ್ಟು ಕಷ್ಟ ಉಂಟು ಮಾಡಿದೆಯೆಂದರೆ, ಮುಂದಿನ ಉತ್ತರಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಅವರು ಖಂಡಿತ ಬಿಜೆಪಿಗೆ ಮತ ನೀಡುವುದಿಲ್ಲ ಮಾತ್ರವಲ್ಲದೆ, ಅದು ನಾಲ್ಕನೆ ಸ್ಥಾನಕ್ಕೆ ಕುಸಿಯುವುದನ್ನು ಖಚಿತಪಡಿಸಲಿದ್ದಾರೆಂದು ಅವರು ಹೇಳಿದರು.
ಮೋದಿವರ ಸರ್ವಾಧಿಕಾರಿ ಧೋರಣೆಯಿಂದಾಗಿ ಜನರು ತಮ್ಮದೇ ಹಣವನ್ನು ಹಿಂಪಡೆಯಲು ಕಂಬದಿಂದ ಕಂಬಕ್ಕೆ ಅಲೆಯುವಂತಾಗಿದೆಯೆಂದು ಮಾಯಾವತಿ ಆರೋಪಿಸಿದರು.