×
Ad

ತಮಿಳುನಾಡಿನಲ್ಲಿ ಜಯಲಲಿತಾ ಆರೆಸ್ಸೆಸ್ ಗೆ ಅಂಕುಶ ಹಾಕಿದ್ದು ಹೇಗೆ ?

Update: 2016-12-07 11:18 IST

ಹೊಸದಿಲ್ಲಿ, ಡಿ.7:  ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಇತರ ರಾಷ್ಟ್ರೀಯ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೂ ರಾಜ್ಯದಲ್ಲಿ ಆರೆಸ್ಸೆಸ್ ಅನ್ನು  ದೂರವೇ ಇಡುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದರು.

ಸಂಘವು ಕನ್ಯಾಕುಮಾರಿ ಸಹಿತ ದಕ್ಷಿಣದ ಕೆಲ ಜಿಲ್ಲೆಗಳಲ್ಲಿ  ತನ್ನ ಅಸ್ತಿತ್ವ ಉಳಿಸಲು ಪ್ರಯತ್ನಿಸಿದೆಯಾದರೂ ಹೇಳಿಕೊಳ್ಳುವಂತಹ ಶಕ್ತಿಯಾಗಿ ಹೊರಹೊಮ್ಮಿಲ್ಲವೆಂಬುದು ನಿಜ. ಆದರೂ ಇದೇ ಜಿಲ್ಲೆಯ ನಾಗರಕೋಯಲ್ ನಿಂದ ಪೊನ್ ರಾಧಾಕೃಷ್ಣ ಅವರು ಗೆದ್ದು ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಗೆ ಪ್ರಥಮ ಲೋಕಸಭಾ ಕ್ಷೇತ್ರ ದಕ್ಕುವಂತೆ ಮಾಡಿದ್ದರು.  1940ರಿಂದ  ಆರೆಸ್ಸೆಸ್ ಇಲ್ಲಿ ಪಥಸಂಚಲನ ನಡೆಸುತ್ತಿತ್ತಾದರೂ ಎಲ್ಲವೂ ಜಯಲಲಿತಾ 2011ರಲ್ಲಿ ಅಧಿಕಾರಕ್ಕೆ ಬಂದ ನಂತರ ನಿಂತು ಬಿಟ್ಟಿತ್ತು.
ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ಸಂಘದ  ಪಥಸಂಚಲನಗಳು, ಕವಾಯತು ಹಾಗೂ ಸಾರ್ವಜನಿಕ ಸಭೆಗಳನ್ನು  ಹಾಗೂ ಸ್ಥಾಪಕರ ದಿನಾಚರಣೆಯನ್ನು ಆಚರಿಸಲೂ ಅನುಮತಿಯಿರಲಿಲ್ಲ, ಎಂದು ಆರೆಸ್ಸೆಸ್ ನಾಯಕರು  ದೂರುತ್ತಿದ್ದು, ಹಲವಾರು ಬಲಪಂಥೀಯ ನಾಯಕರ ಕೊಲೆಯಾದಾಗಲೂ ಪೊಲೀಸರು ಸಂಘದ ವಿಚಾರಗಳಲ್ಲಿ ಕನಿಕರ ತೋರಿಸಿಲ್ಲ ಎಂದು ಹೇಳುವವರೂ ಇದ್ದಾರೆ.

``ನ್ಯಾಯಾಲಯ ನಮ್ಮ ಕಾರ್ಯಕ್ರಮಗಳಿಗೆ ಅನುಮತಿ ನೀಡಿದ್ದರೂ ಸರಕಾರ  ಒಂದಲ್ಲ ಒಂದು ನೆಪವೊಡ್ಡಿ ಅನುಮತಿ ನಿರಾಕರಿಸಿದೆ. ಆಕೆಗೆ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಉತ್ತಮ ಸಂಬಂಧವಿದ್ದಾಗಲೂ ಈ ರೀತಿಯ ಆಕೆಯ ಧೋರಣೆ ನಮಗೆ ಆಶ್ಚರ್ಯ ತರಿಸಿತ್ತು. ಆದರೆ ರಾಜ್ಯದಲ್ಲಿ ಆಕೆಯನ್ನು ಭೇಟಿ ಮಾಡುವ ಅವಕಾಶವಿರಲಿಲ್ಲ.  ಪ್ರಾಯಶಃ ಆಕೆ ಸಣ್ಣ ನಾಯಕರನ್ನು ಭೇಟಿಯಾಗಲು ಇಚ್ಛುಕರಾಗಿರಲಿಲ್ಲ ಇಲ್ಲವೇ ಅಲ್ಪಸಂಖ್ಯಾತರ  ಬೆಂಬಲವನ್ನು ಕಳೆದುಕೊಳ್ಳಲು ಬಯಸಿರಲಿಲ್ಲ,''  ತಮಿಳುನಾಡಿನ ಆರೆಸ್ಸೆಸ್ ಪ್ರಾಂತ ಪ್ರಚಾರಕರಾಗಿರುವ ಸದಗೋಪನ್ ನಾರಾಯಣನ್ ಹೇಳುತ್ತಾರೆ.

ರಾಮಜನ್ಮ ಭೂಮಿ ಚಳುವಳಿ ಸಂದರ್ಭ ಜಯಲಲಿತಾ ಅವರು ಪಕ್ಷ ನಾಯಕರಿಗೆ ಅಲ್ಪಸಂಖ್ಯಾತರನ್ನು ಓಲೈಸುವುದರ ವಿರುದ್ಧ ಎಚ್ಚರಿಕೆ ನೀಡಿದ್ದರು. 2004ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಸಾಧಿಸಿದ ಹೊರತಾಗಿಯೂ ಅವರ ಪಕ್ಷವನ್ನು ಮತದಾರರು ತಿರಸ್ಕರಿಸಿದ ನಂತರ ಆಕೆಯ ನೀತಿ ಬದಲಾಗಿತ್ತೆನ್ನಲಾಗಿದೆ. ಆ ವರ್ಷ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟ ಒಂದೇ ಒಂದು ಲೋಕಸಭಾ ಕ್ಷೇತ್ರದಲ್ಲಿ ಜಯ ಸಾಧಿಸಿರಲಿಲ್ಲ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News