ಫೈಝಲ್ ಹತ್ಯೆ: ಇನ್ನೂ ಇಬ್ಬರು ಆರೆಸ್ಸೆಸ್ಸಿಗರ ಬಂಧನ
ತಿರೂರಂಞಾಡಿ,ಡಿ. 7: ಕೊಡಿಂಞಿ ಫೈಝಲ್ ಹತ್ಯೆ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ. ವಳ್ಳಿಕುನ್ನು ಎಂಬಲ್ಲಿನ ಕುಟ್ಟೂಸ್ ಎಂಬ ಅಪ್ಪು, ತಿರೂರ್ ಪುಲ್ಲೂಣಿಯ ಸುಧೀಶ್ ಇದೀಗ ಪೊಲೀಸರ ವಶವಾಗಿದ್ದು, ಆರೆಸ್ಸೆಸ್ ನಾಯಕ ಬಾಬು ಎಂಬಾತನನ್ನು ಪೊಲೀಸರ ತನಿಖಾ ತಂಡ ಸೋಮವಾರ ಬಂಧಿಸಿತ್ತು. ಮೂವರಿಗೂ ರಿಮಾಂಡ್ ವಿಧಿಸಲಾಗಿದೆ.
ನವೆಂಬರ್ 19ರಂದು ಬೆಳಗ್ಗೆ ಕೊಡಿಂಞಿಯ ಕ್ವಾರ್ಟ್ರಸ್‌ನಿಂದ ಫೈಝಲ್ ಆಟೊದಲ್ಲಿ ಹೋಗುವುದನ್ನು ಕಾದು ಕುಳಿತು ಕೊಲೆಕೃತ್ಯ ನಡೆಸಲಾಗಿದೆ. ಬಾಬು ಫೈಝಲ್‌ನ ತಲೆಗೆ ತಲವಾರಿನಿಂದಕಡಿದಿದ್ದ. ಇನ್ನೊಬ್ಬ ಹೊಟ್ಟೆ ಮತ್ತು ಬೆನ್ನಿಗೆ ತಿವಿದಿದ್ದ ಎಂದು ಪೊಲೀಸರಿಗೆ ಇವರು ತಿಳಿಸಿದ್ದಾರೆ. ನಾಲ್ವರ ತಂಡ ಕೊಲೆಕೃತ್ಯವನ್ನು ಮಾಡಿದ್ದು, ಕೊಲೆಯೆಸಗಲು ತಿರೂರಿನ ಆರೆಸ್ಸೆಸ್ ಮುಖಂಡ ಮಠತ್ತಿಲ್ ನಾರಾಯಣನ್ ನಿರ್ದೇಶನ ನೀಡಿದ್ದು, ಆ ಪ್ರಕಾರ ಬೈಕ್‌ನಲ್ಲಿ ಬಂದು ಇವರು ಕೊಲೆಯೆಸಗಿದ್ದಾರೆಂದು ತನಿಖೆಯಲ್ಲಿ ಸಾಬೀತಾಗಿದೆ ಎಂದು ವರದಿತಿಳಿಸಿದೆ.