ಪಾಠ ಪುಸ್ತಕದಲ್ಲಿ ಹೆಸರು ಬರೆದದ್ದಕ್ಕೆ ಬಾಲಕನನ್ನು ತಲೆಕೆಳಗೆ ಮಾಡಿ ನೇತಾಡಿಸಿದ ಶಿಕ್ಷಕ
ಮಿರ್ಜಾಪುರ, ಡಿಸೆಂಬರ್ 7: ಶಿಕ್ಷಕರನ್ನು ಸಾಕ್ಷಾತ್ ಭಗವಾನ್ ಸ್ವರೂಪಿ ಎನ್ನುವವರಿದ್ದಾರೆ. ಆದರೆ ಶಿಕ್ಷಕ ರಾಕ್ಷಾಸವತಾರ ತಾಳಿದರೆ ಈ ಪವಿತ್ರ ಸಂಬಂಧ ಶಾಶ್ವತವಾಗಿ ಕಳಂಕಿತಗೊಳ್ಳುತ್ತದೆ. ಇಂತಹದೊಂದು ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ. ಪುಸ್ತಕದಲ್ಲಿ ಹೆಸರು ಬರೆದದ್ದಕ್ಕೆ ಶಿಕ್ಷಕನೊಬ್ಬ ಏಳನೆತರಗತಿಯ ವಿದ್ಯಾರ್ಥಿಯನ್ನು ಬಾಸುಂಡೆ ಬರುವಂತೆ ಹೊಡೆದು ನಂತರ ತಲೆಕೆಳಗೆ ಮಾಡಿ ನೇತಾಡಿಸಿ ರಾಕ್ಷಸರೂಪ ತಾಳಿದ್ದಾನೆ. ಬಾಲಕನ ಹೆತ್ತವರು ದೂರುನೀಡಿದ್ದು ಮುಖ್ಯೋಪಾಧ್ಯಾಯರ ವಿರುದ್ಧ ಕೇಸು ದಾಖಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ಗಡ್ವಾ ಎಂಬಲ್ಲಿನ ಶಾಲೆಯೊಂದರ ಶಿಕ್ಷಕ ನರೇಂದ್ರ ಸಿಂಗ್ ಪಟೇಲ್ ಎಂಬಾತ ಏಳನೆ ತರಗತಿಯ ಹದಿಮೂರು ವರ್ಷದ ಬಾಲಕ ಸುನೀಲ್ ಕುಮಾರ್‌ನಿಗೆ ಹೊಡೆದು ನಂತರ ಉಲ್ಟಾ ನೇತಾಡಿಸಿದ್ದಾನೆ. ಬಾಲಕ ತನ್ನ ಪಾಠಪುಸ್ತಕದಲ್ಲಿ ಹೆಸರು ಬರೆದದ್ದು ಶಿಕ್ಷಕನ ರೌದ್ರಾವತಾರಕ್ಕೆ ಕಾರಣವಾಗಿದೆ. ಪೆಟ್ಟು ತಿಂದ ಬಾಲಕ ಆರೋಗ್ಯಕೆಟ್ಟುಹೋಗಿತ್ತು. ಈ ಪ್ರಕರಣದಲ್ಲಿ ಜಿಲ್ಲಾಡಳಿತ ಶಾಲೆಯ ಮುಖ್ಯೋಪಾಧ್ಯಾಯರ ವಿರುದ್ಧ ದೂರು ದಾಖಲಿಸಿದೆ. ಪ್ರಕರಣ ದಾಖಲುಗೊಂಡ ಬಳಿಕ ಮುಖ್ಯೋಪಾಧ್ಯಾಯರು ಪರಾರಿಯಾಗಿದ್ದಾರೆಂದು ವರದಿ ತಿಳಿಸಿದೆ.