ಪೇಟಿಎಂ ಎಂದರೆ ಪೇ ಟು ಮೋದಿ: ರಾಹುಲ್ ಗಾಂಧಿ
ಹೊಸದಿಲ್ಲಿ, ಡಿ.8: ರೋಮ್ ನಗರ ಹೊತ್ತಿ ಉರಿದಾಗ ಪಿಟೀಲು ನುಡಿಸಿದ್ದ ನೀರೋಗೆ ಪ್ರಧಾನಿ ನರೇಂದ್ರ ಮೋದಿಯನ್ನು ಹೋಲಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಇ-ವ್ಯಾಲೆಟ್ ಕಂಪೆನಿಗಳಾದ ಪೇಟಿಎಂ ಮುಂತಾದವುಗಳಿಗೆ ಲಾಭ ತರಿಸುವ ಉದ್ದೇಶದಿಂದಲೇ ನೋಟು ಅಮಾನ್ಯಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. ‘‘ಪೇಟಿಎಂ ಎಂದರೆ ಪೇ ಟು ಮೋದಿ’’ ಎಂದೂ ರಾಹುಲ್ ಅವರು ಪ್ರಧಾನಿಯನ್ನು ಅಣಕಿಸಿದರು. ವಿಪಕ್ಷಗಳು ಇಂದು ಸಂಸತ್ತಿನ ಹೊರಗೆ ನೋಟು ಅಮಾನ್ಯದ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸುತ್ತಾ ಅವರು ಮಾತನಾಡುತ್ತಿದ್ದರು.
‘‘ಸರಕಾರ ಕ್ಯಾಶ್ ಲೆಸ್ ಇಕಾನಮಿ ಬಗ್ಗೆ ಮಾತನಾಡುತ್ತಿದೆ. ಈ ಕ್ಯಾಶ್ ಲೆಸ್ ವ್ಯವಹಾರಗಳಿಂದ ಕೆಲ ಜನರು ಗರಿಷ್ಠ ಪ್ರಯೋಜನ ಪಡೆಯುವಂತೆ ಮಾಡುವುದೇ ಇದರ ಹಿಂದಿನ ಉದ್ದೇಶ. ಇದು ದೇಶಕ್ಕೆ ಹಾನಿಯುಂಟು ಮಾಡುವುದು. ಅವರು ನನಗೆ ಲೋಕಸಭೆಯಲ್ಲಿ ಮಾತನಾಡಲು ಬಿಟ್ಟರೆ ಪೇಟಿಎಂ ನಿಜವಾಗಿಯೂ ಪೇ ಟು ಮೋದಿ ಹೇಗೆಂಬುದನ್ನು ನಾನು ಬಹಿರಂಗಪಡಿಸಬಲ್ಲೆ’’ ಎಂದೂ ಅವರು ನುಡಿದರು.
ನೋಟು ಅಮಾನ್ಯದಿಂದ ಬಡ ಜನರು ಪಡುತ್ತಿರುವ ಬವಣೆಗಳ ಬಗ್ಗೆ ಪ್ರಧಾನಿಗೆ ಎಳ್ಳಷ್ಟೂ ಕಾಳಜಿಯಿಲ್ಲ, ಎಂದು ರಾಹುಲ್ ಆರೋಪಿಸಿದರು. ‘‘ಜನರು ಕಷ್ಟ ಪಡುತ್ತಿರುವಾಗ ಅವರು ನಗುತ್ತಿದ್ದಾರೆ, ಆರಾಮವಾಗಿದ್ದಾರೆ,’’ ಎಂದು ಅವರು ಹೇಳಿದರು.
‘‘ಇದೇನು ಅವರು ಹೇಳಿದಂತೆ ದಿಟ್ಟ ನಿರ್ಧಾರವಲ್ಲ, ಇದೊಂದು ಮೂರ್ಖತನದ ನಿರ್ಧಾರ. ಇದು ಬಡವರು, ರೈತರು ಹಾಗೂ ದಿನಗೂಲಿ ಕಾರ್ಮಿಕರ ಬಾಳನ್ನು ಕಷ್ಟಕ್ಕೆ ನೂಕಿದೆ. ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಬೇಕಿದೆ,’’ ಎಂದರು.
‘‘ನೋಟು ಅಮಾನ್ಯದಿಂದ ಕಾಳಧನ, ನಕಲಿ ನೋಟು ಮತ್ತು ಭ್ರಷ್ಟಾಚಾರಕ್ಕೆ ತಡೆಯೊಡ್ಡಬಹುದೆಂದು ಮೊದಲು ಹೇಳಿದ ಪ್ರಧಾನಿ ಈಗ ಕ್ಯಾಶ್ ಲೆಸ್ ಇಕಾನಮಿ ಬಗ್ಗೆ ಮಾತನಾಡಲಾರಂಭಿಸಿದ್ದಾರೆ,’’ ಎಂದು ರಾಹುಲ್ ಪ್ರಧಾನಿಯನ್ನು ಮತ್ತೆ ಟೀಕಿಸಿದರು.